Advertisement

Udupi: ಸಂವಿಧಾನ ಬದಲಿಸಬೇಕು ಹೇಳಿಕೆ ವಿಚಾರ… ಕೊನೆಗೂ ಮೌನ ಮುರಿದ ಪೇಜಾವರ ಶ್ರೀ

04:01 PM Dec 02, 2024 | Team Udayavani |

ಉಡುಪಿ: ಸಂವಿಧಾನ ಬದಲಿಸಬೇಕು ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಚಾರ ವಿವಾದಾತ್ಮಕ ರೂಪ ಪಡೆಯುತ್ತಿದ್ದಂತೆ ಪೇಜಾವರ ಶ್ರೀಗಳು ಮೌನ ಮುರಿದಿದ್ದು, ಸಮಾವೇಶದಲ್ಲಿ ಸಂವಿಧಾನ ಬದಲಿಸಬೇಕು ಎನ್ನುವ ಮಾತನ್ನು ನಾನು ಆಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Advertisement

ಉಡುಪಿಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥರು, ಸಂವಿಧಾನ ಬದಲಿಸಬೇಕು ಎನ್ನುವ ಮಾತನ್ನು ನಾನು ಆಡಿಯೇ ಇಲ್ಲ, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂತ ಸಮಾವೇಶ ನಡೆದಿತ್ತು ಈ ವೇಳೆ ಸಂತರು ಸೇರಿ ಲಿಖಿತ ರೂಪದ ನಿರ್ಣಯ ಕೈಗೊಂಡಿದ್ದೆವು, ರಾಜ್ಯಪಾಲರಿಗೆ ಕೊಟ್ಟ ಪ್ರತಿಯಲ್ಲಿ ಸಂವಿಧಾನ ಕುರಿತ ಯಾವುದೇ ಮಾತು ಉಲ್ಲೇಖ ಇಲ್ಲ, ಆಡದೆ ಇರುವ ಮಾತಿಗೆ ಸಮಾಜದಲ್ಲಿ ಜನ ದಂಗೆ ಎದ್ದ ರೀತಿ ವರ್ತಿಸುತ್ತಿದ್ದಾರೆ, ಸುಳ್ಳು ಆರೋಪ ಹೊರಿಸಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ನಮ್ಮನ್ನು ಪ್ರತಿಭಟಿಸುವ ಮತ್ತು ಖಂಡಿಸುವ ಕೆಲಸವಾಗುತ್ತಿದೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಹೇಳಿಕೆಯಿಂದ ಇಷ್ಟೆಲ್ಲ ಆಗಿದೆ, ನಿರಾಧಾರ ಆರೋಪ ಯುಕ್ತವಲ್ಲ, ಈ ಕುರಿತ ವಿಡಿಯೋ ಕ್ಲಿಪ್ಪಿಂಗ್ ಹಾಗೂ ಲಿಖಿತ ರೂಪದ ಪತ್ರವನ್ನು ಪರಿಶೀಲಿಸಬಹುದು, ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ಪರಿಶೀಲಿಸಿ ಮಾತನಾಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ ಒಡೆಯುವ ಮತ್ತು ಕಲಹ ಸೃಷ್ಟಿಸುವ ಕೆಲಸ ಯಾರು ಕೂಡ ಮಾಡಬಾರದು, ನಾನು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತೇನೆ. ನಾನು ಈವರೆಗೆ ಯಾವುದೇ ಸಂವಿಧಾನ ವಿರೋಧಿ ಕೃತ್ಯ ಮಾಡಿಲ್ಲ ಸಮಾಜದ ಎಲ್ಲಾ ವರ್ಗದ ಜೊತೆ ಪ್ರೀತಿ ಸಹಬಾಳ್ವೆಯಿಂದ ಇದ್ದೇನೆ, ಸಮಾಜದಲ್ಲಿ ದುರ್ಬಲರ ಸೇವೆಯನ್ನು ನಿರಂತರ ಮಾಡುತ್ತಿದ್ದೇವೆ. ದಲಿತ ಕೇರಿ ಭೇಟಿ, ದುರ್ಬಲರಿಗೆ ಮನೆ ಕಟ್ಟಿಸಿ ಕೊಡುವುದು ಹೀಗೆ ಹಲವು ರೀತಿಯ ಕೆಲಸಗಳನ್ನು ಮಾಡುತ್ತಿದ್ದೇವೆ. ಪೇಜಾವರ ಮಠ ಮತ್ತು ಸಂಘ ಸಂಸ್ಥೆಗಳು, ದಾನಿಗಳ ಮೂಲಕ ನಿರಂತರ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ, ನಮ್ಮ ಮಾತಿನಿಂದ ಪ್ರೇರಣೆಗೊಂಡು ಅನೇಕ ಮಂದಿ ದುರ್ಬಲರಿಗೆ ಸೂರು ಕಟ್ಟಿಸಿ ಕೊಡುತ್ತಿದ್ದಾರೆ. ಇತ್ತೀಚಿಗೆ 16ಲಕ್ಷ ವೆಚ್ಚದ 14 ಮನೆಗಳನ್ನು ಉದ್ಯಮಿಯೊಬ್ಬರ ( ಎಚ್.ಎಸ್.ಶೆಟ್ಟಿ)ಮೂಲಕ ಕೊರಗರಿಗೆ ನೀಡಲಾಗಿದೆ ಒಟ್ಟು, ನೂರು ಮನೆಗಳನ್ನು ಕಟ್ಟಿಸಿ ಕೊಡುವುದಾಗಿ ಅವರು ಹೇಳಿದ್ದಾರೆ.

ನನ್ನನ್ನು ಯಾಕೆ ಟಾರ್ಗೆಟ್ ಮಾಡುತ್ತಾರೆ ಎಂದು ಅವರನ್ನೇ ಕೇಳಬೇಕು ನನ್ನನ್ನು ಹಣಿದರೆ ಹಿಂದೂ ಸಮಾಜಕ್ಕೆ ಮುಖವಾಣಿ ಇಲ್ಲ ಎಂದು ಅಂದುಕೊಂಡಿರಬಹುದು ಆದರೆ ಹಿಂದೂ ಸಮಾಜಕ್ಕೆ ಹಲವು ಮುಖಗಳಿವೆ ಹಿಂದೂ ಸಮಾಜವನ್ನು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

Advertisement

ಆಡಿದ ಮಾತಿಗೆ ವಿರೋಧಿಸಿ ಆದರೆ ಆಡದೇ ಇರುವ ಮಾತಿಗೆ ವಿರೋಧ ಯಾಕೆ? ನಾನು ಕಾನೂನು ಹೋರಾಟ ಮಾಡಬಹುದು. ಕಾನೂನು ಹೋರಾಟ ಹೊರತಾಗಿ ನನಗೆ ಮಾಡಲು ಬೇರೆ ಸಾಕಷ್ಟು ಕೆಲಸಗಳಿವೆ. ದೇವರೇ ಎಲ್ಲರಿಗೂ ಒಳ್ಳೆಯ ಬುದ್ದಿ ಕೊಡಲಿ. ಜನಗಣತಿ ಹೇಳುವ ಪ್ರಕಾರ ಇದು ಹಿಂದುಸ್ತಾನ ಭಾರತ, ಇಂಡಿಯಾ ಹೇಳಿ ಆದರೆ ಇದು ಬಹು ಸಂಖ್ಯಾತ ಹಿಂದೂಗಳ ರಾಷ್ಟ್ರ ಇಲ್ಲಿ ಹಿಂದುಗಳ ಭಾವನೆಗೆ ಬೆಲೆ ಕೊಡುವ ಸರಕಾರ ಅಧಿಕಾರಕ್ಕೆ ತರಬೇಕು ಎಂದು ಹೇಳಿದ್ದು ಹೌದು, ಸಂವಿಧಾನ ಬದಲಿಸಿ ಅಥವಾ ತಿದ್ದುಪಡಿ ಮಾಡಿ ಎಂದು ನಾನು ಯಾವತ್ತೂ ಹೇಳಿಲ್ಲ. ಸಂವಿಧಾನ ಎಂಬ ಶಬ್ದವನ್ನೇ ಬಳಸಿಲ್ಲ, ಚುನಾಯಿತ ಸರ್ಕಾರಗಳು ಸರ್ವರ ಸರ್ಕಾರ ಆಗಬೇಕು, ಎಲ್ಲಾ ಪ್ರಜೆಗಳನ್ನು ಏಕರೂಪವಾಗಿ ಕಾಣಬೇಕು, ಏಕಮತೀಯರನ್ನ ಓಲೈಸುವ ಪ್ರವೃತ್ತಿ ನೋಡುತ್ತಿದ್ದೇವೆ ಈ ಪ್ರವೃತ್ತಿ ನಿಲ್ಲಬೇಕು ಎಂದು ಹೇಳಿದರು.

10 ಲಕ್ಷ ಅನುದಾನ ಇರುವ ದೇವಾಲಯಗಳಿಗೆ 5% ಟ್ಯಾಕ್ಸ್, ಒಂದು ಕೋಟಿ ಆದಾಯ ಇರುವ ದೇಗುಲಗಳಿಗೆ 10 % ತೆರಿಗೆ, ಈ ಪ್ರಸ್ತಾವನೆಯನ್ನು ಸಹಿಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು, ವಾಪಸು ಕಳುಹಿಸಿರುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಇತರ ಮತೀಯರ ಶ್ರದ್ಧಾ ಕೇಂದ್ರಗಳನ್ನು ಸ್ವತಂತ್ರವಾಗಿ ಬಿಡಲಾಗಿದೆ ಹಿಂದುಗಳ ಶ್ರದ್ಧಾ ಕೇಂದ್ರವನ್ನು ಮುಷ್ಟಿಯಲ್ಲಿ ಇರಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಜೀರ್ಣ ಸ್ಥಿತಿಯಲ್ಲಿರುವ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಲು ಹುಂಡಿಯ ಹಣ ಬಳಸಲು ಸಾಧ್ಯವಾಗುತ್ತಿಲ್ಲ, ಅರ್ಚಕರಿಗೆ ಸರಿಯಾದ ವೇತನ ನೀಡುವುದಿಲ್ಲ, ರಾಜ ಮಹಾರಾಜರ ಕಾಲದ ಭೂಮಿಯನ್ನು ಇನ್ನು ಖಾತಾ ಮಾಡಿ ಕೊಟ್ಟಿಲ್ಲ, ದೇಗುಲದ ಭೂಮಿ ಸರಕಾರದ ಭೂಮಿ ಎಂದು ಪರಿಗಣಿಸಿ ನಾನಾ ಉದ್ದೇಶಗಳಿಗೆ ಬಳಸಲಾಗುತ್ತಿದೆ ಇಂತಹಾ ದ್ವಿಮುಖ ನೀತಿ ಯಾಕೆ? ಯಾವುದೇ ಪಕ್ಷ ಮುಖ್ಯವಲ್ಲ ಹಿಂದುಗಳ ಭಾವನೆಗೆ ಗೌರವ ಕೊಡುವ ಸರ್ಕಾರ ಮುಖ್ಯ ಎಂದು ಅವರು ಹೇಳಿದರು.

ಇದನ್ನೂ ಓದಿ: Illegal Gun Purchase case: ಬೈಡನ್‌ ಬೇಷರತ್‌ ಕ್ಷಮಾದಾನ-ಶಿಕ್ಷೆಯಿಂದ ಪುತ್ರ ಬಚಾವ್!

Advertisement

Udayavani is now on Telegram. Click here to join our channel and stay updated with the latest news.

Next