ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿ ಈಗಾಗಲೇ ಹಲವು ಯಶಸ್ವಿ ಧಾರಾವಾಹಿಗಳನ್ನು ಪ್ರಸಾರ ಮಾಡಿಕೊಂಡು ಬಂದಿದೆ. ಈಗ ಇದೇ ಮೊದಲ ಬಾರಿಗೆ ಪೌರಾಣಿಕ ಹಿನ್ನೆಲೆಯ “ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯನ್ನು ಪ್ರಾರಂಭಿಸುತ್ತಿದೆ. ಅಕ್ಟೋಬರ್ 15 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8 ಗಂಟೆಗೆ “ಶ್ರೀ ವಿಷ್ಣು ದಶಾವತಾರ’ ಪ್ರಸಾರಗೊಳ್ಳಲಿದೆ. ಕಿರುತೆರೆಯ ಇತಿಹಾಸದಲ್ಲೇ ಶ್ರೀಮನ್ನಾರಾಯಣ ಚರಿತ್ರೆ ಕುರಿತ ಯಾವ ಧಾರಾವಾಹಿ ಪ್ರಸಾರಗೊಂಡಿಲ್ಲ. ಮೊದಲ ಬಾರಿಗೆ ಆತೀ ಹೆಚ್ಚು ಬಜೆಟ್‌ನಲ್ಲಿ ಈ ಧಾರಾವಾಹಿ ನಿರ್ಮಾಣಗೊಂಡು ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.
ಈ “ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯ ಪ್ರಯೋಗ ದಲ್ಲಿ ವಿಷ್ಣು ಮತ್ತು ಲಕ್ಷ್ಮೀ ದೇವರ ಪ್ರೇಮಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ದಶಾವತಾರಗಳಲ್ಲಿ ಹುದುಗಿದ್ದ ಪ್ರೇಮ ಸಂದೇಶಗಳನ್ನು ಇಲ್ಲಿ ಮುಖ್ಯವಾಗಿ ತೋರಿಸಲಾ ಗುತ್ತಿದೆ. ಶ್ರೀ ಹರಿ ಲಕ್ಷ್ಮೀ ದೇವಿಯನ್ನು ವರಿಸಿದ್ದು ಹೇಗೆ, ಅವರಿಬ್ಬರ ಅಮರ ಪ್ರೇಮ ಕಥೆಯ ಹಿಂದಿನ ಚರಿತ್ರೆ ಏನು, ಎತ್ತ ಇತ್ಯಾದಿ ವಿಷಯಗಳನ್ನು ಧಾರಾವಾಹಿಗಳಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಮಹಾಪುರಾಣ ಧಾರಾವಾಹಿಗಳಿಗೆ ಗ್ರಾಫಿಕ್ಸ್ ಮುಖ್ಯ. ಅತೀ ದುಬಾರಿ ವೆಚ್ಚದ ಗ್ರಾಫಿಕ್ಸ್ ತಂತ್ರಜ್ಞಾನದೊಂದಿಗೆ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಕಳೆದ ಒಂದು ವರ್ಷಗಳಿಗೂ ಹೆಚ್ಚು ಶ್ರಮಹಾಕಿ ಧಾರಾವಾಹಿಯನ್ನು ಚಿತ್ರೀಕರಿಸಲಾಗಿದೆ. ಇದರ ಇನ್ನೊಂದು ವಿಶೇಷವೆಂದರೆ, ದಕ್ಷಿಣ ಭಾರತದಲ್ಲೇ ಯಾವುದೇ ರಿಮೇಕ್ ಅಲ್ಲದ ಸ್ವಮೇಕ್ ಧಾರಾವಾಹಿ ಇದಾಗಿದ್ದು, ಅಪ್ಪಟ ಕನ್ನಡ ನಟ,ನಟಿಯರು ಸೇರಿದಂತೆ ಹೊಸ ಪ್ರತಿಭೆಗಳನ್ನು ಈ ಮೂಲಕ ಪರಿಚಯಿಸಲಾಗುತ್ತಿದೆ.
ಈ ಕುರಿತು ಮಾಹಿತಿ ಕೊಡುವ ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು, “ಈ ಧಾರಾವಾಹಿಯನ್ನು ಮುಂಬೈ ಮೂಲದ “ಕ್ರಿಯೇಟಿವ್ ಐ’ ಕಂಪೆನಿ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಧೀರಜ್‌ಕುಮಾರ್ ಅವರು “ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ಮಹಾಪುರಾಣ ಹಿನ್ನೆಲೆಯ “ಓಂ ನಮಃ ಶಿವಾಯ್’,”ಶ್ರೀ ಗಣೇಶ್’ ಧಾರಾವಾಹಿ ನಿರ್ಮಿಸಿದ ಹೆಗ್ಗಳಿಕೆ ಧೀರಜ್ ಕುಮಾರ್ ಅವರಿಗಿದೆ. ಈಗ “ಶ್ರೀ ವಿಷ್ಣು ದಶಾವತಾರ’ ಧಾರಾವಾಹಿಯನ್ನು ಕಳೆದ ಒಂದು ವರ್ಷದಿಂದ ಚಿತ್ರೀಕರಿಸಿ, ಈಗ ಪ್ರೇಕ್ಷಕರ ಮುಂದೆ ತರಲು ಅಣಿಯಾಗಿದ್ದಾರೆ. ಸಂಜಯ್ ಗುಪ್ತ ಈ ಧಾರಾವಾಹಿಯ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂತೋಷ್ ಬಾದಲ್ ಈ ಧಾರಾವಾಹಿಯ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ’ ಎಂಬ ವಿವರ ಕೊಡುತ್ತಾರೆ ರಾಘವೇಂದ್ರ.
ಇಲ್ಲಿ ಶ್ರೀ ವಿಷ್ಣು ಆಗಿ ಅಮಿತ್ ಕಶ್ಯಪ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಇದು ಮೊದಲ ಅನುಭವ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಅವರಿಗೆ ಕಲೆ ಮೇಲೆ ಆಸಕ್ತಿ ಇದ್ದುದರಿಂದ ಆಡಿಷನ್‌ಗೆ ಹೋಗಿ, ಆಯ್ಕೆಯಾಗಿದ್ದಾರೆ. ಇದ್ದ ಕೆಲಸ ಬಿಟ್ಟು, ಭಕ್ತಿ, ಶ್ರದ್ಧೆಯಿಂದ ಇಲ್ಲಿ ನಟಿಸಿದ್ದಾರೆ. ಇನ್ನು, ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿರುವ ನಿಶಾ ಅವರಿಗೆ, ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹೆಮ್ಮೆ ಎನಿಸಿದೆಯಂತೆ. ಉಳಿದಂತೆ ಆರ್ಯ ಸೂರ್ಯ, ಕಾವ್ಯ ಮಹಾದೇವ್, ಹಷ್ ಅರ್ಜುನ್, ವಂದನ ನಟಿಸುತ್ತಿದ್ದಾರೆ. ವಿಷ್ಣು ಪಾಂಡೆ ಸಂಕಲನವಿದೆ. ನಂದೀಶ್ ಸುರೇಶ್ ಪಿಂಗಲ್ ಹಿನ್ನೆಲೆ ಸಂಗೀತವಿದೆ.