ಉಡುಪಿ: ಪ್ರತಿಯೊಬ್ಬನ ಜೀವನದಲ್ಲಿ ಹಣಬಲ- ಜನಬಲ-ಕುಲಬಲಗಳಿಗಿಂತ ಗುರು ಬಲವು ಬಲಿಷ್ಠವಾದದ್ದು. ಗುರುಬಲದ್ದರೆ ಮಾತ್ರ ಹರಿಯ ಅನುಗ್ರಹಬಲವು ಸಿಗುತ್ತದೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.
ಪುತ್ತಿಗೆ ವಿದ್ಯಾಪೀಠದ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಅವರು ವಿದ್ಯಾರ್ಥಿಗಳಿಗೆ ಹಿತೋಪದೇಶವನ್ನು ಮಾಡಿದರು.
ಶ್ರದ್ಧಾಭಕ್ತಿಯಿಂದ ಗುರುಗಳ ಸೇವೆ ಮಾಡಿ ಅನುಗ್ರಹ ಸಂಪಾದಿಸಬೇಕು. ನಮ್ಮ ವಿದ್ಯಾಗುರುಗಳಾದ ಪ್ರಾತಃಸ್ಮರಣೀಯರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆದೇಶದಂತೆ ಪುತ್ತಿಗೆ ವಿದ್ಯಾಪೀಠವನ್ನು ಪ್ರಾರಂಭಿಸಿದೆವು. ಇದರಿಂದ ಅವರಿಗೆ ತುಂಬ ಸಂತೋಷವಾಯಿತು. ಗುರುಗಳ ಪರಮಾನುಗ್ರಹಬಲದಿಂದ ಇಂದು ಅನೇಕ ಸತ್ಕಾರ್ಯಗಳನ್ನು ನಡೆಸಲು ಸಾಧ್ಯವಾಯಿತು. ಆದ್ದರಿಂದ ಗುರುಬಲವೇ ಬಲಿಷ್ಠವಾದದ್ದು ಎಂದರು.
ಈ ಸಂದರ್ಭದಲ್ಲಿ ಪುತ್ತಿಗೆ ಮಠದ ನೂತನ ಯತಿಗಳಾದ ಕಿರಿಯಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಮುತ್ತಿನ ಅಭಿಷೇಕದೊಂದಿಗೆ ಅಭಿನಂದಿಸಲಾಯಿತು. ಶ್ರೀ ಚಿತ್ರಾಪುರ ಮಠಾಧೀಶರಾದ ಶ್ರೀ ವಿದ್ಯೆàಂದ್ರತೀರ್ಥಶ್ರೀಪಾದರು ಆಶೀರ್ವಚನ ನೀಡಿದರು.
ಹರಿಕೃಷ್ಣ ಶಿವತ್ತಾಯ ಅವರಿಗೆ ನರಸಿಂಹಾನುಗ್ರಹ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ವಿದ್ವಾನ್ ಪಂಜ ಭಾಸ್ಕರ ಭಟ್, ಕೃಷ್ಣರಾಜ ಉಪಾಧ್ಯಾಯ, ಶ್ರೀ ಮಧ್ವರಮಣ ಆಚಾರ್ಯ ಮೊದಲಾದ ವಿದ್ವಾಂಸರು ಉಪಸ್ಥಿತರಿದ್ದರು. ಯೋಗೀಂದ್ರ ಭಟ್ ಉಳಿ ಮತ್ತು ಬಿ.ಗೋಪಾಲಾಚಾರ್ ಕಾರ್ಯಕ್ರಮ ನಿರೂಪಿಸಿದರು.