ಕುಣಿಗಲ್ : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕುಣಿಗಲ್ ಹಿರೇಮಠಾಧ್ಯಕ್ಷ ಶ್ರೀ ಶಿವಕುಮಾರ ಶಿವಾಚಾರ್ಯಸ್ವಾಮೀಜಿ (63) ಭಾನುವಾರ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು, ಹಲವು ದಿನಗಳಿಂದ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಲಿಂಗೈಕ್ಯರಾಗಿದ್ದು, ಅಪಾರ ಸದ್ಭಕ್ತ ವರ್ಗವನ್ನು ಅಗಲಿದ್ದಾರೆ.
ಅಂತಿಮ ಸಂಸ್ಕಾರ : ಶ್ರೀಗಳ ಅಂತಿಮ ಸಂಸ್ಕಾರ ತಾಲೂಕಿನ ಕೊತ್ತಗೆರೆ ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ಏ. 8ರ ಸೋಮವಾರ ಬೆಳಗ್ಗೆ11 ಗಂಟೆಗೆ ನಡೆಯಲಿದೆ.
ಶ್ರೀಗಳು ನಡೆದು ಬಂದ ದಾರಿ : ಶ್ರೀಗಳು ಪಟ್ಟಣದಲ್ಲಿ ಜನಿಸಿ ಕೋಟೆ ಶಾಲೆ ಮತ್ತು ಜಿಕೆಬಿಎಂಎಸ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢಶಾಲೆ ಶಿಕ್ಷಣವನ್ನು ಶ್ರೀ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿ 70ರ ದಶಕದಲ್ಲಿ ತುಮಕೂರು ಸಿದ್ದಗಂಗಾ ಮಠದಲ್ಲಿ ಅಭ್ಯಾಸ ಮಾಡುತ್ತಾ, ಈ ವೇಳೆ ನಡೆದಾಡುವ ದೇವರು ಡಾ.ಶಿವಕುಮಾರಸ್ವಾಮೀಜಿ ಅವರ ಸೇವೆಯನ್ನು ಮಾಡಿದರು, ನಂತರ ಕುಣಿಗಲ್ ತಾಲೂಕಿನ ಅಂಕನಹಳ್ಳಿಯ ಶ್ರೀ ಪಿರಂಗಿಮಠದ ಸಂಸ್ಕೃತ ಪಾಠ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿದ್ದರು.
ಕುಣಿಗಲ್ ತಾಲೂಕಿನ ಆಲ್ಕರೆ ಸಿದ್ದಗಂಗಾ ಶಾಖಾ ಮಠದ ಉಸ್ತುವಾರಿ ನೋಡಿಕೊಳ್ಳವ ಜತೆಗೆ ಮಠದ ಅಭಿವೃದ್ದಿಗೆ ಶ್ರಮಿಸಿದರು. ತಾಲೂಕಿನ ಸುತ್ತ ಮುತ್ತಲಿನ ಸದ್ಭಕ್ತರ ಮನೆಗಳಲ್ಲಿ, ಶಿವ ಪೂಜೆಯನ್ನು ನೆರವೇರಿಸುತ್ತಿದ್ದರು. ಪೂಜ್ಯರು ಅತ್ಯಂತ ಸರಳ ಜೀವಿಗಳು, ಕಾಯಕಯೋಗಿಗಳು ಆಗಿದ್ದರು ಜೀವನ ಪೂರ್ತಿ ಭಕ್ತರಿಗೆ ಸಂಸ್ಕಾರ ನೀಡಿ ಧಾರ್ಮಿಕತೆ ಅನುಸರಿಸಲು ಮಾರ್ಗದರ್ಶನ ನೀಡಿದರು.
ಸಂತಾಪ : ಶ್ರೀಗಳ ಅಗಲಿಕೆಗೆ ಬೆಟ್ಟಹಳ್ಳಿ ಮಠದ ಚಂದ್ರಶೇಖರಶಿವಾಚಾರ್ಯಸ್ವಾಮೀಜಿ, ಶಾಸಕ ಡಾ.ಹೆಚ್.ಡಿ.ರಂಗನಾಥ್, ಮಾಜಿ ಸಚಿವ ಡಿ.ನಾಗರಾಜಯ್ಯ, ತುಮುಲ್ ನಿರ್ದೇಶಕ ಡಿ.ಕೃಷ್ಣಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಡಿ.ರಾಜೇಶ್‌ಗೌಡ, ಸೇರಿ ಮೊದಲಾದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಶ್ರೀಗಳ ಅಗಲಿಕೆಯಿಂದ ಒಬ್ಬರು ಅತ್ಯುತ್ತಮ ಶ್ರೀಗಳನ್ನು ನಾಡು ಕಳೆದುಕೊಂಡಂತೆ ಆಗಿದೆ ಎಂದು ತಮ್ಮ ಶೋಕದಲ್ಲಿ ಗಣ್ಯರು ತಿಳಿಸಿದ್ದಾರೆ.