ಕಡಬ : ಇಂದಿನ ವ್ಯವಸ್ಥೆಯಲ್ಲಿ ದೇಶದ ಬಗ್ಗೆ ಅಭಿಮಾನ ಕಡಿಮೆಯಾಗಿ ನಿರಭಿಮಾನಿ ಪ್ರಜೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದುದರಿಂದ ರಾಷ್ಟ್ರ ಸೇವೆಗೆ ಪ್ರೇರಣೆ ನೀಡುವ ಶಿಕ್ಷಣದೊಂದಿಗೆ ದೇಶ ಭಕ್ತ, ನೀತಿಯುಕ್ತ, ಭ್ರಷ್ಟಾಚಾರಮುಕ್ತ, ಶಕ್ತ ಜನಾಂಗವನ್ನು ರೂಪಿಸಿ ಸುಸಂಸ್ಕೃತ ಪ್ರಜೆಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.
ಅವರು ಶನಿವಾರ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ. ಶಾಲಾ ಶತ ಸಂಭ್ರಮ ಸಮಾರಂಭದಲ್ಲಿ ವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸಿದ ಗಣ್ಯರನ್ನು ಗೌರವಿಸಿ ಆಶೀರ್ವಚನ ನೀಡಿದರು. ಉತ್ತಮ ಸಂಸ್ಕಾರ, ದೇಶದ ಬಗ್ಗೆ ಗೌರವಾಭಿಮಾನ ಮೂಡಿಸುವ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿ ಇಲ್ಲ. ನಾವು ಶಿಕ್ಷಣದೊಂದಿಗೆ ದೇಶಭಕ್ತಿಯ ಪಾಠ ಹೇಳಿದಾಗ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಶಿಕ್ಷಕರು ತಮ್ಮ ವೃತ್ತಿ ಹೊಟ್ಟೆಪಾಡಿಗೆ ಅಲ್ಲ, ರಾಷ್ಟ್ರ ಸೇವೆಗೆ ಎಂದು ತಿಳಿದು ಕೆಲಸ ಮಾಡಬೇಕು. ರಾಮಕುಂಜೇಶ್ವರ ವಿದ್ಯಾ ಸಂಸ್ಥೆ ಉತ್ತಮ ಸಂಸ್ಕಾರದೊಂದಿಗೆ ಸಶಕ್ತ, ದೇಶಭಕ್ತ ಸಮಾಜ ನಿರ್ಮಾಣಕ್ಕೆ ಪ್ರೇರಕವಾದ ಶಿಕ್ಷಣ ನೀಡುತ್ತಿದೆ. ರಾಮಕುಂಜೇಶ್ವರ ಸಂಸ್ಕೃತ ಶಾಲೆ ಅದ್ಭುತ ಸಾಧನೆಯೊಂದಿಗೆ ಶತಮಾನೋತ್ಸವ ಆಚರಿಸುತ್ತಿದೆ. ಈ ಸಂಸ್ಥೆ ಚಿರಾಯುವಾಗಲಿ ಎಂದು ಆಶಿಸಿದರು.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಕರ್ನಾಟಕ ಬ್ಯಾಂಕಿನ ನಿವೃತ್ತ ಎಜಿಎಂ ವೆಂಕಟ್ರಾಜ್, ಮಂಗಳೂರು ವಿದ್ಯಾ ಪಬ್ಲಿಕೇಶನ್‌ನ ವಿನೋದಾ ಅನಂತ ರಾಮ ರಾವ್, ಎಂಆರ್‌ಪಿಎಲ್ ಚೀಫ್ ಜನರಲ್ ಮ್ಯಾನೇಜರ್ ಹರೀಶ್ ಬಾಳಿಗಾ, ಮುಂಬಯಿ ಉದ್ಯಮಿಗಳಾದ ವಾಮಂಜೂರು ಸೀತಾರಾಮ ಶೆಟ್ಟಿ, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಸಿಸ್ಕೋ ಸಿಸ್ಟಮ್ ಇಂಡಿಯಾದ ಧರ್ಮೆಂದ್ರ ರಂಗೈನ್, ಮಂಗಳೂರು ಶೇಟ್ ಡೈಮಂಡ್ ಹೌಸ್‌ನ ಎಂ. ಪ್ರಶಾಂತ್ ಶೇಟ್ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಹಳೇ ವಿದ್ಯಾರ್ಥಿಗಳಾದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ನಿವೃತ್ತ ಅಧಿಕಾರಿ ಡಾ| ಎಂ. ಪದ್ಮನಾಭ ಮಿಯಾಳ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಎಂ.ಎಸ್. ಆಚಾರ್, ಮುಂಬಯಿಯ ರಾಮ ವಿಟ್ಠಲ ಕಲ್ಲೂರಾಯ, ಆರ್.ಲಕ್ಷ್ಮೀಶ ಅತಿಥಿ ಗಳಾಗಿ ಮಾತನಾಡಿದರು. ಮೆಸ್ಕಾಂ ಜೆಇ ಕೃಷ್ಣರಾಜ ಕೆ., ಕೆ.ಎಸ್. ಕಲ್ಲೂರಾಯ, ಎಸ್.ಕೆ. ಆನಂದ್‌ಕುಮಾರ್, ಸುಧಾಕರ್ ರಾವ್ ಪೇಜಾವರ, ಬಿ.ಎಸ್. ತೋಳ್ಪಾಡಿ, ಕೆ. ಕೃಷ್ಣ ವೈಲಾಯ, ಎಸ್. ರಾಮನ್ ಉಪಸ್ಥಿತರಿದ್ದರು.
ಸಂಸ್ಥೆಯ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ 50ಕ್ಕೂ ಹೆಚ್ಚು ಗಣ್ಯರನ್ನು ಶ್ರೀಗಳು ಸಮ್ಮಾನಿಸಿದರು. ಇ. ಕೃಷ್ಣಮೂರ್ತಿ ಕಲ್ಲೇರಿ ಅವರು ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಸ್ಮರಣೆ ಮಾಡಿದರು. ರಾಧಾಕೃಷ್ಣ ಕೆ.ಎಸ್. ಸ್ವಾಗತಿಸಿ,ಕೆ. ಸೇಸಪ್ಪ ರೈ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕ ಟಿ. ನಾರಾಯಣ ಭಟ್ ನಿರೂಪಿಸಿದರು.
ಈ ಮಣ್ಣಿನ ಹೆಮ್ಮೆ
ಗುರುವಂದನೆ ನುಡಿ ಸಲ್ಲಿಸಿದ ಬೆಂಗಳೂರಿನ ಶಿಕ್ಷಣ ತಜ್ಞ ಪ್ರೊ| ಕೆ.ಈ. ರಾಧಾಕೃಷ್ಣ ಮಾತನಾಡಿ, ವಿಶ್ವಮಾನ್ಯರಾದ ಪೇಜಾವರಗಳು ರಾಗ- ದ್ವೇಷವಿಲ್ಲದೆ ಎಲ್ಲರೂ ಒಂದೇ ಎಂದು ತಿಳಿದವರು. ಅನೇಕರನ್ನು ಉದ್ಧರಿಸಿದ ಮಹಾನ್ ಶಕ್ತಿ ಸ್ವರೂಪಿಯಾಗಿರುವ ಶ್ರೀಗಳು ನೈಜ ತಪಸ್ವಿ. ಅವರು ವ್ಯಾಸಂಗ ಮಾಡಿದ ಈ ಶಾಲೆ ನೂರರ ಸಂಭ್ರದಲ್ಲಿರುವುದು ಈ ಮಣ್ಣಿನ ಹೆಮ್ಮೆ ಎಂದರು. ಗುರು ವಂದನೆ ಕಾರ್ಯಕ್ರಮದಲ್ಲಿ ಡಾ| ಕೆ. ಬಾಲ ಕೃಷ್ಣ ಕಲ್ಲೂರಾಯ ಅತಿಥಿಗಳನ್ನು ಸ್ವಾಗತಿಸಿದರು.