Advertisement

Ayodhya; ರಾಮನ ಅಯೋಧ್ಯಾಗಮನ: ವನವಾಸ ಮುಗಿಸಿ ಭರತಖಂಡಕ್ಕೆ ದರ್ಶನ ನೀಡಿದ ಪ್ರಭುರಾಮ

12:39 PM Jan 22, 2024 | Team Udayavani |

ಅಯೋಧ್ಯೆ: ಯುಗಗಳ ಹಿಂದೆ ಅಯೋಧ್ಯೆಯಲ್ಲಿ ದಶರಥನ ಪುಣ್ಯಧಾಮದಲ್ಲಿ ಅವತಾರವೆತ್ತಿದ ಸೂರ್ಯ ವಶಂಜ, ರಘುಕುಲ ತಿಲಕ, ಮರ್ಯಾದಾ ಪುರುಷೋತ್ತಮ ಇಂದು ಕಲಿಯುಗದಲ್ಲಿ ಮತ್ತೆ ಅವತರಿಸಿದ್ದಾನೆ. ಶತ ಶತಮಾನಗಳ ಕನಸು, ಕೋಟ್ಯಂತರ ರಾಮ ಭಕ್ತರ ಅವಿರತ ಹಾರೈಕೆ, ಅದೆಷ್ಟೋ ಕರಸೇವಕರ ಪರಿಶ್ರಮದ ಫಲವಿಂದು ಭರತ ಖಂಡದ ಪುಣ್ಯ ಪುರ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮ ಮೂರ್ತಿಗೆ ಅಭಿಜಿನ್ ಸುಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆದಿದೆ.

Advertisement

ಶತಮಾನಗಳಿಂದ ನಡೆದು ಬಂದ ರಾಮ ಜನ್ಮಭೂಮಿ ವಿವಾದ ಇಂದಿಗೆ ಅಧಿಕೃತವಾಗಿ ಕೊನೆಯಾಗಿದೆ. ತ್ರೇತಾಯುಗದಲ್ಲಿ ದಶರಥ- ಕೌಸಲ್ಯಾ ನಂದನನಾಗಿ ನಡೆದಾಡಿದ್ದ ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಇದೀಗ ಅದೇ ರಾಮನಿಗೆ ಭವ್ಯ ಮಂದಿರ ಲೋಕಾಪರ್ಣೆಯಾಗಿದೆ. 2.7 ಏಕರೆ ವಿಸ್ತೀರ್ಣದ ರಾಮ ಮಂದಿರದಲ್ಲಿ 51 ಇಂಚು ಎತ್ತರದ ಶ್ರೀಬಾಲರಾಮನ ಮೂರ್ತಿಗೆ ಪ್ರಾಣ ನೀಡಲಾಗಿದೆ. ಈ ಮೂಲಕ ಶ್ರೀರಾಮನ ದಿವ್ಯದೃಷ್ಠಿ ಮನುಕುಲದ ಮೇಲೆ ಹರಿದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಲರಾಮನ ಪ್ರಾಣಪ್ರತಿಷ್ಠೆಯಲ್ಲಿ ಭಾಗವಹಿಸಿದ್ದಾರೆ. ಸುಮಾರು ಏಳು ಸಾವಿರ ಮಂದಿ ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ, ಕೋಟ್ಯಂತರ ಜನರು ನೇರಪ್ರಸಾರದಲ್ಲಿ ನೋಡುತ್ತಿದ್ದಂತೆ ಕೋಟಿ ಕೋಟಿ ಜನರ ಹೃದಯ ಕಮಲದಲ್ಲಿ ನೆಲೆನಿಂತಿರುವ ಪ್ರಭು ರಾಮ ಕಣ್ಣರಳಿಸಿ ದರ್ಶನ ನೀಡಿದ್ದಾನೆ.

ಕಮಲ ದಳಗಳಂತೆ ಸ್ನಿಗ್ಧ ಚೆಲುವಿನ ಕಣ್ಣುಗಳು; ಪೂರ್ಣಚಂದಿರನಂತೆ ಪ್ರಭೆ ಬೀರುವ ವದನ; ಮಂಡಿಯನ್ನು ಮೀರಿ ಚಾಚಿದ ಕೈಗಳ ಆಜಾನುಬಾಹು; ಮುಖದಲ್ಲಿ ಮಂದಹಾಸ… ಭಾರತೀಯರ ಕನಸಿನ ಧಾಮದಲ್ಲಿ ವಿರಾಜಮಾನನಾಗಲಿರುವ ಬಾಲರಾಮನ ವಿವರಿಸಲು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಬಳಸಿದ ಪದಪುಂಜಗಳಿವು. ಭಾರತೀಯ ಪರಂಪರೆಯಲ್ಲಿ ಬಾಲರಾಮನ ಪರಿಕಲ್ಪನೆಯೇ ವಿಶಿಷ್ಟವಾದುದು. ಅಂಥದ್ದೊಂದು ಅಮೂರ್ತ ಕಲ್ಪನೆಯನ್ನು ಮೂರ್ತ ರೂಪಕ್ಕಿಳಿಸಿದ ಮೂವರು ಶಿಲ್ಪಿಗಳ ಪೈಕಿ ಮೈಸೂರಿನ ಅರುಣ ಯೋಗಿರಾಜ್‌ ಕಡೆದ ವಿಗ್ರಹ ಆಯ್ಕೆಯಾಗಿದೆ. ರಾಮನ ಸೇವೆಗೆ ಸದಾ ಕಟಿಬದ್ಧನಾಗಿದ್ದ ಹನುಮನ ನಾಡಿನ ಮೂರ್ತಿ ಶಾಶ್ವತವಾಗಿ ರಾಮಮಂದಿರದಲ್ಲಿ ರಾರಾಜಿಸಲಿದೆ.

Advertisement

ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜತೆಗೆ, ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next