ಪ್ರಭು ಶ್ರೀರಾಮನನ್ನು ಇಡೀ ಜಗತ್ತಿಗೆ ಪ್ರಜ್ವಲ ಬೆಳಕಿನಂತೆ ಪರಿಚಯ ಮಾಡಿಕೊಟ್ಟಂತಹ ವಾಲ್ಮೀಕಿ ಮಹಾಕವಿ ಅವರು ರಚಿಸಿದ ಮಹಾಕಾವ್ಯ ರಾಮಾಯಣ. ಇದರ ಪ್ರಮುಖ ಉದ್ದೇಶವೇ ಮಾನವ ಸಂಕುಲಕ್ಕೆ ನೆಲದ ಬದುಕಿನ ಅನನ್ಯತೆ, ಸಹೋದರತೆ, ಮಾನವೀಯತೆ, ತ್ಯಾಗ ಮುಂತಾದ ಮಹಾನ್ ಗುಣಗಳನ್ನು ಅರ್ಥೈಸುವ ಪ್ರಯತ್ನವಾಗಿದೆ. ರಾಮಾಯಣದ ನಾಯಕ ರಾಮನನ್ನು ಪರಿಪೂರ್ಣತೆಯ ರೂಪಕವಾಗಿ ಚಿತ್ರಿಸಲು ಬಯಸಿದ ವಾಲ್ಮೀಕಿ ಅವರು ರಾಮನ ಪಾತ್ರವನ್ನು ಆದರ್ಶತೆಯ ಪ್ರತೀಕದ ಉನ್ನತಿಯ ರೂಪವಾಗಿಸಲು ಬಯಸಿದ್ದಾರೆ. ಅಂತೆಯೇ ಶ್ರೀರಾಮಚಂದ್ರ ಪ್ರಭು ಇಡೀ ಮಾನವಕುಲಕ್ಕೆ ಬೆಳಕು ನೀಡುವಂತಹ ಮರ್ಯಾದಾ ಪುರುಷೋತ್ತಮರು.
ಈ ನೆಲದ ಬದುಕಿನಲ್ಲಿ ಪುರುಷನೆಂದರೆ ಹೀಗಿರಬೇಕು ಎನ್ನುವಂತಹ ಅದಮ್ಯವಾದ ಪರಿಕಲ್ಪನೆಯಾಗಿ ರಾಮನ ಪಾತ್ರ ಚಿತ್ರಣಗೊಂಡಿದೆ. ರಾಮನ ಆದರ್ಶ ಸೂರ್ಯಚಂದ್ರರು ಇರುವ ತನಕ ಪ್ರಸ್ತುತವಾಗಿರುತ್ತದೆ ಎನ್ನುವುದಕ್ಕೆ ಜೀವನಗಾಥೆಯೇ ಸಾಕ್ಷಿ. ಕೂಡು ಕುಟುಂಬದ ಈ ನೆಲದ ನಂಬಿಕೆಯ ಪ್ರತಿರೂಪವಾದ ದಶರಥನ ಹಿರಿಯ ಮಗನಾದ ರಾಮ ಸಕಲ ಗುಣ ಸಂಪನ್ನನಾಗಿ ಬದುಕುವುದು ತನ್ಮೂಲಕ ಹೀಗೂ ಬದುಕಲು ಸಾಧ್ಯವೆನ್ನುವುದನ್ನು ಅರಿವು ಮಾಡಿಸುವಂತದ್ದು. ಶ್ರೀರಾಮಚಂದ್ರ ಪ್ರಭು ಬಾಲ್ಯದಿಂದಲೇ ಆದರ್ಶ ಮಗನಾಗಿ ಬೆಳೆದವರು. ಶ್ರೀರಾಮ ಬೆಳೆಯುತ್ತಲೇ ಆದರ್ಶ ಸಹೋದರನಾಗಿ, ಆದರ್ಶ ಪ್ರಜೆಯಾಗಿ, ಸಮೃದ್ಧಿಯ ಸಮಾಜದ ಪ್ರಜೆಯಾಗಿ ಕಾಣಿಸಿಕೊಳ್ಳುವರು.
ರಾಮ ತನ್ನ ವಿನಯ, ವಿವೇಕ ಮತ್ತು ಅಖಂಡ ಜೀವನಪ್ರೀತಿಯ ಕಾರಣದಿಂದಲೇ ಇಡೀ ನಾಡಿನ ಪ್ರೀತಿಯ ಆಸ್ತಿಯಂತೆ ಬದುಕಿದವರು. ಸಾವಿರಾರು ವರ್ಷಗಳ ನಂತರವೂ ಇರುವಂತಹವರು. ಮುಂದೆಯೂ ಶ್ರೀರಾಮಚಂದ್ರ ಪ್ರಭುವಿನ ಹೆಸರು ಇದ್ದೇ ಇರುತ್ತದೆ. ಅಂತಹ ಮಾನವೀಯ, ಆದರ್ಶದ ಪ್ರತೀಕವೇ ಶ್ರೀರಾಮ. ಬಾಲ್ಯದಲ್ಲೇ ವಿಶ್ವಾಮಿತ್ರರೊಂದಿಗೆ ಮೊದಲಿಗೆ ಅರಣ್ಯ ಪ್ರವೇಶ ಮಾಡಿದಾಗ ದುಷ್ಟಶಿಕ್ಷಣ, ಶಿಷ್ಟರಕ್ಷಣೆಯ ಪಾಠವ ಕಲಿತು ತನ್ನ ಶೌರ್ಯವನ್ನು ಒರೆ ಹಚ್ಚುತ್ತಾರೆ. ಅಹಲೆÂಯ ಶಾಪ ವಿಮೋಚನೆಗೂ ಕಾರಣವಾಗುವ ಮೂಲಕ ತಾನು ಜಗದೆಲ್ಲ ತಾಯಂದಿರ ಹರಕೆಯ ಮಗುವಾಗುತ್ತಾನೆ. ಇಲ್ಲಿಂದಲೇ ವಿದೇಹಕ್ಕೆ ತೆರಳಿ ಶಿವಧನುಸ್ಸು ಮುರಿದು ಮಾತೆ ಸೀತೆಯನ್ನು ವರಿಸುತ್ತಾರೆ. ನಿರಂತರ ಕ್ರಿಯಾಶೀಲತೆಯ ಪಾತ್ರವಾಗುವ ರಾಮ ವ್ಯಕ್ತಿಯೊಬ್ಬ ತನ್ನ ವ್ಯಕ್ತಿತ್ವದ ಶ್ರಮ ಮತ್ತು ಬದ್ಧತೆಯ ಕಾರಣಕ್ಕೆ ಎಲ್ಲವನ್ನೂ ಸಾ ಧಿಸಬಹುದೆ ಎಂಬ ಸಾಧ್ಯತೆಗೆ ಬಹು ದೊಡ್ಡ ಉದಾಹರಣೆ. ರಾಮಚಂದ್ರ ಪ್ರಭುವಿನ ಪಟ್ಟಾಭಿಷೇಕ ಯೋಜನೆಗೆ ಕೈಕೇಯಿ ಅಡ್ಡವಾದಾಗ ನಿರ್ಲಿಪ್ತವಾಗಿಯೇ ವನವಾಸವನ್ನು ಒಪ್ಪಿಕೊಂಡು ಬದುಕಿನ ಎಲ್ಲಾ ಸವಾಲುಗಳಿಗೆ ಸಿದ್ಧನಾಗುತ್ತಾರೆ. ತನ್ಮೂಲಕ ಪತ್ನಿ ಸೀತಾಮಾತೆ, ತಮ್ಮ ಲಕ್ಷ್ಮಣರೊಂದಿಗೆ ಕಾನನದ ದಟ್ಟ ಅನುಭವಗಳಿಗೂ ಶ್ರೀರಾಮ ತನ್ನನ್ನು ಪ್ರೀತಿಯಿಂದಲೇ ಒಡ್ಡಿಕೊಳ್ಳುತ್ತಾರೆ. ಸ್ವತಃ ಸಹೋದರ ಭರತನೇ ಬಂದು ಅಣ್ಣನನ್ನು ಅಯೋಧ್ಯೆಗೆ ಹಿಂದಿರುಗಲು ಒತ್ತಾಯಿಸುವಾಗಲೂ ತಂದೆಗೆ ಕೊಟ್ಟ ಮಾತಿಗೆ ಬದ್ಧವಾಗುವ ಮೂಲಕ ಮಾತು ಮತ್ತು ನಡತೆ ಬಗೆಗೆ ಇರಬೇಕಾದ ಘನತೆಯ ತೋರಿಸಿಕೊಟ್ಟವರು. ಪಿತೃವಾಕ್ಯ ಪರಿಪಾಲಕರಾಗಿ ರಾಮನ ಆದರ್ಶ ಸಕಲ ಕಾಲಕ್ಕೂ ನಿದರ್ಶನ. ಅಯೋಧ್ಯೆಯಲ್ಲಿನ ಮರ್ಯಾದಾ ಪುರುಷೋತ್ತಮನ ಭವ್ಯ, ದಿವ್ಯ, ರಾಮಮಂದಿರ ಅಗಣಿತ ಭಕ್ತ ಸಂಕುಲದ ಜೀವನದ ಮಾರ್ಗದರ್ಶನದ ಭವ್ಯತಾಣವಾಗಲಿ…
ಶ್ರೀ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಹರಿಹರ