Advertisement

ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರ

12:03 AM Aug 14, 2022 | Team Udayavani |

ರಾಯಚೂರು: ತಿರುಪತಿ ತಿಮ್ಮಪ್ಪನ ದೇವಸ್ಥಾನ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ನಡುವೆ ಅವಿನಾಭಾವ ಸಂಬಂಧವಿದೆ. ತಿರುಪತಿಯಲ್ಲಿ ಶ್ರೀಮಠದಿಂದ ರಾಯರ ಭಕ್ತರಿಗಾಗಿ ಹೆಚ್ಚು ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

Advertisement

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಪ್ರಯುಕ್ತ ಶನಿವಾರ ತಿರುಪತಿ ತಿಮ್ಮಪ್ಪನ ಸನ್ನಿ ಧಿಯಿಂದ ಆಗಮಿಸಿದ ಶೇಷವಸ್ತ್ರಗಳನ್ನು ಬರಮಾಡಿಕೊಂಡ ಬಳಿಕ ಶ್ರೀಗಳು ಆಶೀರ್ವಚನ ನೀಡಿದರು.

ಭಕ್ತಕೋಟಿ ಆರಾಧಿಸುವ ಶ್ರೀ ವೆಂಕಟೇಶ್ವರ ಸ್ವಾಮಿಯವರು ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಹಾಗೂ ಭಕ್ತರನ್ನು ಹರಸಲು ವಸ್ತ್ರರೂಪವಾಗಿ ಆಗಮಿಸಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಶ್ರೀಮಠದಿಂದ ಅನೇಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇಂದಿಗೂ ಅದು ಮುಂದುವರಿದಿದೆ. ಹಿಂದಿನ ಶ್ರೀಗಳ ಅವಧಿ ಯಲ್ಲಿ ಅಲ್ಲಿ ರಾಯರ ಮೃತ್ತಿಕಾ ಬೃಂದಾವನ ನಿರ್ಮಾಣಕ್ಕೆ, ವಸತಿ ಸಮುತ್ಛಯ, ಸೂಟ್‌ ರೂಮ್‌, ಕಲ್ಯಾಣ ಮಂಟಪ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಸ್ಥಳಾವಕಾಶ ನೀಡಲಾಗಿತ್ತು. ಈಗ ಗುರುನಿವಾಸ ಹಿಂಭಾಗದಲ್ಲಿ ಮತ್ತೂಂದು ನಿವೇಶನ ಕೇಳಿದ್ದು, ಶೀಘ್ರದಲ್ಲೇ ಸ್ಥಳ ಸಿಗುವ ವಿಶ್ವಾಸವಿದೆ. ಅಲ್ಲಿ ಮಾತ್ರವಲ್ಲದೆ ಟಿಟಿಡಿಯಿಂದ ಮಂತ್ರಾಲಯದಲ್ಲೂ ಮಂಟಪ, ವಸತಿ ಕಟ್ಟಡ ನಿರ್ಮಿಸುವ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

ಕೋವಿಡ್‌ನಿಂದ ಅಡ್ಡಿಯಾಗಿತ್ತು
ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಮಂತ್ರಾಲಯ ಎಲ್ಲರನ್ನು ಹರಸುವ ಶ್ರದ್ಧಾಭೂಮಿ ಯಾಗಿದೆ. ಕೋವಿಡ್‌ನ‌ಂತಹ ಸಂಕಷ್ಟದಿಂದ ಸಂಭ್ರಮದ ಆಚರಣೆಗಳಿಗೆ ಅಡ್ಡಿಯಾಗಿತ್ತು ಎಂದರು.

ಬಹುಕೋಟಿ ವೆಚ್ಚದ ಪಚ್ಚೆಹಾರ
ಎಂ.ಎಸ್‌. ರಾಮಯ್ಯ ಜನ್ಮಶತಾಬ್ಧಿ ಪ್ರಯುಕ್ತ ಎಂ.ಎಸ್‌. ರಾಮಯ್ಯ ಹಾಸ್ಪಿಟಲ್‌ ಗ್ರೂಪ್‌ನ ಎಂ.ಎಸ್‌. ಪಟ್ಟಾಭಿ ಹಾಗೂ ಅನಿತಾ ಪಟ್ಟಾಭಿ ಅವರಿಂದ ರಾಯರಿಗೆ 1.5 ಕೋಟಿ ರೂ. ಮೌಲ್ಯದ ಕಾಸಿನ ಸರ ಸಮರ್ಪಿಸಲಾಯಿತು. ಜತೆಗೆ ಮೂಲ ರಾಮದೇವರಿಗೆ ಬಹುಕೋಟಿ ವೆಚ್ಚದ ಪಚ್ಚೆಹಾರ, 300 ಕೆ.ಜಿ. ತೂಕದ ರಜತ ಪೂಜಾ ಮಂಟಪ ಸಮರ್ಪಿಸಲಾಯಿತು.

Advertisement

ಮಂತ್ರಾಲಯ: ವೈಭವದ ಮಧ್ಯಾರಾಧನೆ
ರಾಯಚೂರು: ಕಳೆದ ಎರಡು ವರ್ಷಗಳಿಂದ ಕೋವಿಡ್‌-19 ಕಾರಣಕ್ಕೆ ಕಳೆಗುಂದಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಈ ಬಾರಿ ವೈಭವದಿಂದ ಜರಗುತ್ತಿದೆ.

351ನೇ ಆರಾಧನ ಮಹೋತ್ಸವ ನಿಮಿತ್ತ ಶನಿವಾರ ಶ್ರೀ ರಾಯರ ಮಧ್ಯಾರಾಧನೆ ಬಹಳ ಅದ್ಧೂರಿಯಾಗಿ ನೆರವೇರಿತು. ಮಠದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಿದವು.

ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಹಾಲು, ಮೊಸರು, ಜೇನು, ತುಪ್ಪ, ಎಳನೀರು, ವಿವಿಧ ಬಗೆಯ ಹಣ್ಣುಗಳಿಂದ ಅಭಿಷೇಕ ನೆರವೇರಿಸಲಾಯಿತು. ಈ ವೇಳೆ ಮಠದ ಪ್ರಾಂಗಣದಲ್ಲಿ ಜನ ತುಂಬಿದ್ದರಿಂದ ಬೃಹದಾಕಾರದ ಎಲ್‌ಇಡಿಗಳಲ್ಲಿ ಅಭಿಷೇಕದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನಂತರ ಶ್ರೀಮಠದ ಪ್ರಾಧಿಕಾರದಲ್ಲಿ ಶ್ರೀ ಪ್ರಹ್ಲಾದರಾಜರ ಉತ್ಸವ ಪ್ರಭಾವಳಿಯನ್ನು ನವರತ್ನ ಖಚಿತ ಚಿನ್ನದ ರಥದಲ್ಲಿಟ್ಟು ರಥೋತ್ಸವ ನೆರವೇರಿಸಲಾಯಿತು. ಬಳಿಕ ಶ್ರೀಗಳು ಮೂಲ ರಾಮದೇವರಿಗೆ ಸಂಸ್ಥಾನ ಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next