Advertisement

ಮಾತೃಹೃದಯದ ಸಂನ್ಯಾಸಿ

09:58 AM Jan 06, 2020 | mahesh |

ಶ್ರೀಪೇಜಾವರ ಸ್ವಾಮೀಜಿಯವರು ಈಗ ಕೇವಲ ನೆನಪು ಮಾತ್ರ. ಆದರೆ, ನೆನೆದಾಗಲೆಲ್ಲ ಅವರು ಜೀವಂತ ಎದ್ದು ಬಂದು ಕಣ್ಣೆದುರು ಸುಳಿದಂತಾಗುತ್ತದೆ.

Advertisement

ಒಂದು ಘಟನೆ ನೆನಪಾಗುತ್ತಿದೆ-
ಆಗ ನಾನು ಉಡುಪಿಯಲ್ಲಿದ್ದೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉಪನ್ಯಾಸಕ. ಪ್ರಾಂಶುಪಾಲರಾಗಿದ್ದ ಗೋಪಾಲಕೃಷ್ಣ ಅಡಿಗರೇ ನನ್ನನ್ನು ಕರೆಸಿಕೊಂಡದ್ದು. ಅಲ್ಲಿ ಇದ್ದದ್ದು ಐದೋ ಆರೋ ತಿಂಗಳು ಮಾತ್ರ. ಆದರೆ, ಆ ಸಣ್ಣ ಅವಧಿಯಲ್ಲಿಯೇ ಪೇಜಾವರ ಸ್ವಾಮೀಜಿಯವರನ್ನು ಕಂಡು ಮಾತನಾಡಿಸುವ ಅವಕಾಶ ದೊರೆತಿತ್ತು. ನನಗೆ ಸ್ಕಾಲರ್‌ಶಿಪ್‌ ಸಿಕ್ಕಿ ಹೆಚ್ಚಿನ ಅಧ್ಯಯನಕ್ಕೆ ಅಮೆರಿಕಕ್ಕೆ ಹೋಗುವ ಅವಕಾಶ ದೊರೆತಿತ್ತು. ಪ್ರಾಂಶುಪಾಲರಾದ ಗೋಪಾಲಕೃಷ್ಣ ಅಡಿಗರೂ ಅದಕ್ಕೆ ಸಮ್ಮತಿಸಿದ್ದರು. ಆದರೆ, ನನಗೆ ಪಾಸ್‌ಪೋರ್ಟ್‌ ಸಿಗಲಿಲ್ಲ. ಆಗ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಪ್ರಸಿದ್ಧ ವ್ಯಕ್ತಿಯೊಬ್ಬರು ನನ್ನ ಪಾಸ್‌ಪೋರ್ಟ್‌ಗೆ ಸಹಿ ಹಾಕಲು ನಿರಾಕರಿಸಿದರು.

ನನಗೆ ತತ್‌ಕ್ಷಣ ಏನು ಮಾಡುವುದೆಂದು ತೋಚಲಿಲ್ಲ. ಅಮೆರಿಕಕ್ಕೆ ತೆರಳುವ ಒಳ್ಳೆಯ ಅವಕಾಶದಿಂದ ವಂಚಿತನಾಗುವಂತಾಯಿತಲ್ಲ ಎಂದು ಚಿಂತೆಯಾಯಿತು. ನೇರವಾಗಿ ಪೇಜಾವರಶ್ರೀ ವಿಶ್ವೇಶ್ವತೀರ್ಥರ ಬಳಿಗೆ ಹೋದೆ. ನನ್ನ ಚಿಂತೆಯನ್ನು ತೋಡಿಕೊಂಡೆ. ಅವರು ನನ್ನಲ್ಲಿ , “ನೀವು ನೇರವಾಗಿ ಮದರಾಸಿಗೆ ಹೋಗಿ. ಎಲ್ಲ ವ್ಯವಸ್ಥೆಯಾಗುತ್ತದೆ’ ಎಂದರು.

ನಾನು “ಸರಿ’ ಎಂದು ಹೇಳಿ ಮದರಾಸಿಗೆ ಹೋದೆ. ಮದರಾಸಿನಲ್ಲಿ ರೈಲಿನಿಂದ ಇಳಿದವನನ್ನೇ ಬರಮಾಡಿಕೊಳ್ಳಲು ಯಾರೋ ಕಾಯುತ್ತಿದ್ದರು. ಅವರೇ ಪಾಸ್‌ಪೋರ್ಟ್‌, ವಿಸಾ ಎಲ್ಲ ವ್ಯವಸ್ಥೆಯನ್ನೂ ಮಾಡಿದರು. ನನಗೆ ಎಳ್ಳಿನಿತೂ ತೊಂದರೆಯಾಗದಂತೆ ನೋಡಿಕೊಂಡರು. ಸ್ವಾಮೀಜಿಯವರ ನಿರ್ದೇಶನದ ಮೇರೆಗೆ ಬಂದಿದ್ದರು ಎಂದಷ್ಟೇ ಗೊತ್ತಾಯಿತು.

ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹೋಗುವ ಮಾರ್ಗ ಸುಗಮವಾಯಿತು. ಅಲ್ಲಿಂದ ಮರಳಿ ಬಂದ ಮೇಲೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾಗಿ ಸೇರಿದೆ. ಸ್ವಾಮೀಜಿಯವರು ಸಿಕ್ಕಿದಾಗಲೆಲ್ಲ ನಮಸ್ಕರಿಸಿ ಮಾತನಾಡಿಸುತ್ತಿದ್ದೆ. ಅವರಿಗೂ ನನ್ನ ಮೇಲೆ ಪ್ರೀತಿ. ನಾನು ಬರೆದ ಸಾಹಿತ್ಯ, ಬರಹಗಳನ್ನೆಲ್ಲ ಓದಿದ್ದರೋ ಇಲ್ಲವೊ ಗೊತ್ತಿಲ್ಲ, ಆದರೆ, “ಕಂಬಾರ’ ಎಂದರೆ ಅವರಿಗೆ ಉತ್ಕಟವಾದ ಅಭಿಮಾನ. ನಾನು ಮಾತ್ರವಲ್ಲ , ತಮ್ಮನ್ನು ಪ್ರಶಂಸಿಸುವವರನ್ನು -ದೂಷಿಸುವವರನ್ನು- ಎಲ್ಲರನ್ನೂ ಅದೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಲಂಕೇಶರು, ಅನಂತಮೂರ್ತಿಯವರು ಅವರೊಂದಿಗೆ ವಾಗ್ವಾದ ನಡೆಸಿದ್ದರು. ಸೈದ್ಧಾಂತಿಕ ವಿರೋಧವಿದ್ದವರ ಜೊತೆಗೂ ಅವರು ಬೆರೆಯುತ್ತಿದ್ದರು. ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವ ಚೇತನ ಅವರದಾಗಿತ್ತು. ನನಗೆ ಅವರೊಂದಿಗೆ ವಾದ ಮಾಡಲು ಏನೂ ಇರಲಿಲ್ಲ. ನನ್ನನ್ನು ಆಹ್ವಾನಿಸಿ ಹಲವೆಡೆ ಸಂಮಾನ ಮಾಡಿದ್ದರು. ನನಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಸಂಮಾನಿಸಿ, “ನಮ್ಮ ಕಂಬಾರ, ಬಂಗಾರ’ ಎಂದು ಅಭಿನಂದಿಸಿ ವಾತ್ಸಲ್ಯದಿಂದ ಮಾತನಾಡಿದ್ದನ್ನು ನಾನು ಮರೆಯಲಾರೆ.

Advertisement

ಇನ್ನೊಂದು ಘಟನೆ ನೆನಪಾಗುತ್ತಿದೆ. ಒಮ್ಮೆ ಯಾರೋ ಸ್ವಾಮೀಜಿಯವರಲ್ಲಿ ಧನಸಹಾಯ ಕೇಳಲು ಬಂದಿದ್ದರು. ಅವರಿಗೆ ಕೊಡುವಷ್ಟು ದುಡ್ಡು ಸ್ವಾಮೀಜಿ ಬಳಿ ಇರಲಿಲ್ಲ. ಸ್ವಲ್ಪ ಹೊತ್ತು ಕಳೆದ ಮೇಲೆ ಅಷ್ಟು ಹಣ ಭಿಕ್ಷೆಯ ಮೂಲಕ ಸಂಗ್ರಹವಾಯಿತು. ಆದರೆ, ಹಣ ಕೊಡೋಣ ಎಂದರೆ, ಧನಸಹಾಯ ಕೇಳಿಕೊಂಡು ಬಂದವರು ಅಲ್ಲಿರಲಿಲ್ಲ. ಆಗ ಸ್ವಾಮೀಜಿಯವರೇ ಅವರನ್ನು ಹುಡುಕಿಕೊಂಡು ಹೋಗಿ, ಅವರಿಗೆ ಹಣ ನೀಡಿದರು. ಆ ಘಟನೆಗೆ ನಾನು ಸಾಕ್ಷಿಯಾಗಿದ್ದೆ. “ಮತ್ತೆ ! ನಾನು ಬಿಡ್ತೇನೆ ಎಂದುಕೊಂಡಿರಾ! ಹಣವನ್ನು ಕೊಟ್ಟೇಬಿಟ್ಟೆ ‘ ಎಂದು ನಮ್ಮನ್ನು ನೋಡುತ್ತ ಮುಗ್ಧಭಾವದಿಂದ ಹೇಳಿದರು.

ಒಮ್ಮೆ ಭೇಟಿಯಾದವರನ್ನೂ ಅವರು ಮರೆಯುತ್ತಿರಲಿಲ್ಲ. ದಲಿತರ ಕೇರಿಗೆ ಭೇಟಿ ನೀಡಿ ಕ್ರಾಂತಿ ಮಾಡಿದ್ದ ಸ್ವಾಮೀಜಿಗಳು ಮಂತ್ರಾಕ್ಷತೆ ಕೊಳ್ಳಲು ಬಯಸಿ ದೂರದಲ್ಲಿ ನಿಂತವರ ಬಳಿಗೆ ತಾನೇ ಹೋಗಿ ಮಾತನಾಡಿಸಿ ಅನುಗ್ರಹಿಸುತ್ತಿದ್ದರು ಎಂಬುದನ್ನು ಕೇಳಿಬಲ್ಲೆ.
ಒಂದು ಬಗೆಯ ಮಾತೃಹೃದಯ ಅವರದು. ಅಂತಃಕರಣದ ಜೀವಿ. ಅವರ ಬಗ್ಗೆ ನನಗೆ ವಿಶೇಷ ಭಕ್ತಿ- ಆಗಲೂ ಈಗಲೂ.

ಚಂದ್ರಶೇಖರ ಕಂಬಾರ

ಪೊಟೊ : ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next