ಮುಂಬಯಿ: ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾ-ಭಾಯಂದರ್‌ನ ವಿಶೇಷ ಮಹಾಸಭೆ ಜ. 26ರಂದು ಮೀರಾರೋಡ್ ಪೂರ್ವದ ಸಾಯಿಬಾಬಾ ನಗರದಲ್ಲಿರುವ ಹೊಟೇಲ್ ಟೈಂಲೆಸ್ ಗಾರ್ಡನ್ ಸಭಾಗೃಹದಲ್ಲಿ ಜರಗಿತು.
ವಿಶೇಷ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಹಾಬಲ ಸಮಾನಿ ಮಾತನಾಡಿ, ನಮ್ಮ ಸಂಸ್ಥೆಯು ಮಹಾ ರಾಷ್ಟ್ರದ ನಿಯಮಾನುಸಾರ ನೊಂದಣಿಗೊಂಡಿದೆ. ಕೆಲವೊಂದು ಕ್ರಮ ನಿರ್ಬಂಧನೆ ಪ್ರಕಾರ ಬದಲಾವಣೆ ಅನಿವಾರ್ಯವಾಗಿದೆ. ಅದರ ಬಗ್ಗೆ ಕೂಲಂಕಷವಾಗಿ ವಿಮರ್ಶಿಸಲು ಹಾಗೂ ಸಲಹೆ ಸೂಚನೆಗಳನ್ನು ಸ್ವೀಕರಿಸಲು ಈ ಸಭೆಯನ್ನು ಕರೆಯಲಾಗಿದೆ. ಭಗವಾನ್ ನಿತ್ಯಾನಂದರ ತತ್ವಾದರ್ಶದಂತೆ ಯಾವುದೇ ಪ್ರಚಾರ ಬಯಸದೆ ನಿಸ್ವಾರ್ಥ ಭಾವನೆಯಿಂದ ಸಮಾಜಮುಖೀ ಚಿಂತನೆಯತ್ತ ಗಮನ ಹರಿಸಬೇಕು ಎಂದು ವಿನಂತಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಸೀತಾರಾಮ ಸಿ. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೋಂದಾವಣೆ ಮಾಡಲು ಟ್ರಸ್ಟಿಯನ್ನು ರಚಿಸಲಾಗಿದೆ. ಅದರ ಮುಖೇನ ಇಂದಿನ ವಿಶೇಷ ಮಹಾಸಭೆಯನ್ನು ಕರೆಯಲಾಗಿದೆ. ಕಾರ್ಯಕಾರಿ ಸಮಿತಿಯ ರೂಪುರೇಷೆಗಳು, ಕಾರ್ಯವಿಧಾನ ಹಾಗೂ ಠರಾವುಗಳನ್ನು ಸಭೆಗೆ ತಿಳಿಸಿದರು. ಮುಂದಿನ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಯೊಬ್ಬ ಸದಸ್ಯರಿಗೆ ಆಯ ವ್ಯಯ ಮತ್ತು ವಾರ್ಷಿಕ ವರದಿಯನ್ನು ಮುಂಚಿತವಾಗಿ ಕಳುಹಿಸಲಾಗುವುದು ಎಂದರು.
ಇದೇ ಸಂದರ್ಭ ವಿಶೇಷ ಮಹಾಸಭೆಯಲ್ಲಿ ಕಾರ್ಯಕಾರಿ ಸಮಿತಿಗೆ ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್, ಅನಿಲ್ ಶೆಟ್ಟಿ, ಉದಯ ಶೆಟ್ಟಿ, ಸುಂದರ ಮೂಲ್ಯ, ದೇರಳಕಟ್ಟೆ ರವೀಂದ್ರ ಶೆಟ್ಟಿ, ಸಂಜೀವ ಶೆಟ್ಟಿ, ಮಂಜಯ್ಯ ಶೆಟ್ಟಿ, ವಾಸಂತಿ ಶೆಟ್ಟಿ, ಗುಣಕಾಂತ ಕರ್ಜೆ, ರಾಜೇಶ್ ಶೆಟ್ಟಿ ಕಾಪು, ಹರೀಶ್ ಶೆಟ್ಟಿ ಕಾಪು, ಸುಜಾತಾ ಶೆಟ್ಟಿ, ಸತೀಶ್ ಶೆಟ್ಟಿ, ಜಯಶ್ರೀ ಶೆಟ್ಟಿ ಮತ್ತು ಗೋಪಾಲಕೃಷ್ಣ ಗಾಣಿಗ ಅವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಕೋಶಾಧಿಕಾರಿ ಪ್ರಸಾದ್ ಹೆಗ್ಡೆ, ಟ್ರಸ್ಟಿಗಳಾದ ಶಿವರಾಮ ಎಸ್. ಶೆಟ್ಟಿ, ಸುರೇಶ್ ವೈ. ಶೆಟ್ಟಿ, ಚಂದ್ರಶೇಖರ ಎಸ್. ಶೆಟ್ಟಿ, ಗುಣಪಾಲ ಉಡುಪಿ, ಲೀಲಾ ಡಿ. ಪೂಜಾರಿ, ಆನಂದ ಶೆಟ್ಟಿ ಕುಕ್ಕುಂದೂರು ಉಪಸ್ಥಿತರಿದ್ದರು. ಸುಮತಿ ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯದರ್ಶಿ ಸೀತಾರಾಮ ಸಿ. ಶೆಟ್ಟಿ ಸ್ವಾಗತಿಸಿ ವಂದಿಸಿದರು. ಅರುಣ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.