ಶಿರ್ವ: ದೇವ ದೇವತೆಗಳ ಆರಾಧನೆಗೆ ವೇದ ಪ್ರತಿಪಾದ್ಯವಾದ ವಿಧಾನವೇ ಯಾಗ. ಭೂಗೋಳದಲ್ಲಿರುವ ಸಕಲ ಚರಾಚರ ಸೃಷ್ಠಿಯನ್ನು ಖಗೋಳದಲ್ಲಿರುವ ಗ್ರಹಗಳು ನಿಯಂತ್ರಿಸುತ್ತವೆ. ಇಡೀ ಜಗತ್ತಿನ ಆಗುಹೋಗುಗಳು ಗ್ರಹಗಳ ಸಂಚಾರಗತಿಯನ್ನು ಅವಲಂಬಿಸಿದ್ದು, ನವಗ್ರಹರ ಅನುಗ್ರಹದಿಂದ ಲೋಕ ಸುಭೀಕ್ಷೆ ಹಾಗೂ ಮನು ಕುಲದ ಉದ್ಧಾರವಾಗುವುದು ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಅವರು ಹಿರಿಯಡಕ ಮೂಲ ಪುತ್ತಿಗೆ ಮಠದಲ್ಲಿ ತಂತ್ರಿಶ್ರೀ ಪ್ರತಿಷ್ಠಾನದ ದ್ವಿತೀಯ ಕುಸುಮ ಶ್ರೀ ನವಗ್ರಹ ಪೂಜಾ ಪದ್ಧತಿಃ ಎಂಬ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನವಿತ್ತರು.
ಸಮಾರಂಭದ ಅಧ್ಯಕ್ಷತೆಯನ್ನು ತಂತ್ರಿ ಶ್ರೀ ಪ್ರತಿಷ್ಠಾನದ ಸಂಚಾಲಕ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಆಗಮ ಪಂಡಿತ ಬ್ರಹ್ಮಶ್ರೀ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿಯವರು ವಹಿಸಿದ್ದರು.
ಸಂಗ್ರಾಹಕ ಅನಂತಮೂರ್ತಿ ಬೆಳ್ಳರ್ಪಾಡಿ, ಸಹಾಯಕ ಸಂಗ್ರಾಹಕ ಬೆಳ್ಳಿಬೆಟ್ಟು ಗಣೇಶ್ ಭಟ್, ಬೆಂಗಳೂರಿನ ಉದ್ಯಮಿ ಸುಧಾಕರ್,ವಿದ್ವಾನ್ ಕೊಡವೂರು ಸೀತಾರಾಮ ಆಚಾರ್ಯ,ವಿದ್ವಾನ್ ಶೀರೂರು ರಾಮದಾಸ ಭಟ್,ಹರಿಕೃಷ್ಣ ಕೇಂಜ ಮತ್ತಿತರರು ಉಪಸ್ಥಿತರಿದ್ದರು. ಪುತ್ತಿಗೆ ವಿದ್ಯಾಪೀಠದ ಮಹಾಪ್ರಬಂಧಕ ಚಂದ್ರಪ್ರಕಾಶ್ ಸ್ವಾಗತಿಸಿ, ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ, ವಿದ್ವಾನ್ ಗೋವರ್ಧನ ಭಟ್ ವಂದಿಸಿದರು.