Advertisement
ಕಳೆದ ವರ್ಷ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದರಂತೆ 4 ಕಡೆ ಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಆರಂಭಿಸಿತ್ತು. 6 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಲಾಗುತ್ತಿದೆ. ಆಗ ಇದಕ್ಕೆ ಬಜೆಟ್‌ನಲ್ಲಿ ಪ್ರತೀ ಶಾಲೆಗೆ 18 ಕೋ.ರೂ. ಅನುದಾನ ಘೋಷಿಸಿತ್ತು.
ಉಡುಪಿ ಜಿಲ್ಲೆಯ ಶಾಲೆಯನ್ನು ಕುಂದಾಪುರ ತಾಲೂಕಿನ ಯಡಾಡಿ- ಮತ್ಯಾಡಿಯ (ಶಾಶ್ವತ ಕಟ್ಟಡ ಬೇಳೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಆಗಲಿದೆ) ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಾಲೆಯನ್ನು ಭಟ್ಕಳದ (ಶಾಶ್ವತ ಕಟ್ಟಡ ಜಾಲಿ ಪ.ಪಂ.ವ್ಯಾಪ್ತಿಯಲ್ಲಿ ಆಗಲಿದೆ) ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದಿಗೆ ತಾತ್ಕಾಲಿಕವಾಗಿ ಜಂಟಿಯಾಗಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ದ.ಕ. ಜಿಲ್ಲೆಯ ಶಾಲೆಯನ್ನು ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಹಾಗೂ ಶಿವಮೊಗ್ಗ ಜಿಲ್ಲೆಯ ಶಾಲೆಯನ್ನು ಸೊರಬ ತಾಲೂಕಿನಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ಆರಂಭಿಸಿದೆ.
Related Articles
ಬಂಟ್ವಾಳ ಹಾಗೂ ಸೊರಬದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಮಕ್ಕಳಿಗೆ ತರಗತಿ ಹಾಗೂ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸರಕಾರ ಅದರ ಬಾಡಿಗೆ ವೆಚ್ಚವನ್ನು ಭರಿಸುತ್ತಿದೆ. ಆದರೆ ಕುಂದಾಪುರ ಹಾಗೂ ಭಟ್ಕಳದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ನಾರಾಯಣ ಗುರು ವಸತಿ ಶಾಲೆಯ ಮಕ್ಕಳಿಗೂ ಜಂಟಿಯಾಗಿ ವ್ಯವಸ್ಥೆ ಮಾಡಲಾಗಿದ್ದು, ಕಳೆದ ವರ್ಷ ಮಕ್ಕಳ ಸಂಖ್ಯೆ ಕಡಿಮೆ ಇದ್ದುದರಿಂದ ಅಂತಹ ಸಮಸ್ಯೆಯೇನು ಆಗಿಲ್ಲ. ಆದರೆ ಈ ಬಾರಿ ಮೊರಾರ್ಜಿ ಶಾಲೆಗಳ ಮಕ್ಕಳ ಸಂಖ್ಯೆ ಹಾಗೂ ನಾರಾಯಣ ಗುರು ಶಾಲೆಗಳ ಮಕ್ಕಳ ಸಂಖ್ಯೆ ಎರಡೂ ಜಾಸ್ತಿ ಆಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಇದರಿಂದ ಮೊರಾರ್ಜಿ ಶಾಲೆಗಳಲ್ಲಿ ಇವರಿಗೆ ಉಳಿದುಕೊಳ್ಳಲು ವಸತಿ ಹಾಗೂ ಪಾಠ- ಪ್ರವಚನಕ್ಕೆ ತರಗತಿಗಳ ಕೋಣೆಗಳ ಕೊರತೆಯಾಗಲಿದೆ. ಇದಿಷ್ಟೇ ಅಲ್ಲದೆ ಎಲ್ಲ 4 ಕಡೆಗಳಲ್ಲೂ ನಾರಾಯಣ ಗುರು ಶಾಲೆಗೆಂದು ಪ್ರತ್ಯೇಕ ಶಿಕ್ಷಕರನ್ನಾಗಲಿ, ಹಾಸ್ಟೆಲ್ ವಾರ್ಡನ್‌ಗಳು, ಸಿಬಂದಿಯನ್ನು ಸಹ ನೇಮಿಸಿಲ್ಲ. ಅತಿಥಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
Advertisement
ಪರ್ಯಾಯ ವ್ಯವಸ್ಥೆ ಕಲ್ಪಿಸಲಿಕುಂದಾಪುರದ ಯಡಾಡಿ- ಮತ್ಯಾಡಿಯ ನಾರಾಯಣ ಗುರು ವಸತಿ ಶಾಲೆಯೊಂದಿಗೆ ಜಂಟಿಯಾಗಿ ನಡೆಸಲಾಗುತ್ತಿದೆ. ಇಲ್ಲಿ ಕಳೆದ ವರ್ಷ ನಾರಾಯಣ ಗುರು ಶಾಲೆಗೆ 47 ಮಕ್ಕಳಿದ್ದರು. ಆದರೆ ಈ ಬಾರಿ ಈವರೆಗೆ 70 ಮಕ್ಕಳಾಗಿದ್ದು, ಇನ್ನೂ ಜಾಸ್ತಿಯಾಗಬಹುದು. ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 190 ಮಕ್ಕಳಿದ್ದಾರೆ. ಅದು ಜಾಸ್ತಿಯಾಗಬಹುದು. ಅಲ್ಲಿನ ಗರಿಷ್ಠ ಸಾಮರ್ಥ್ಯ 250. ಈಗಿರುವ ಮಕ್ಕಳ ಸಂಖ್ಯೆಗೆ ಇದು ಸಾಲದು. ಹಾಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಪರ್ಯಯ ವ್ಯವಸ್ಥೆ ಮಾಡಬೇಕಾಗಿದೆ.
– ಸತೀಶ್ ಕುಂದಾಪುರ, ಶ್ರೀ ನಾರಾಯಣ ಗುರು ವಸತಿ ಶಾಲಾ ಪೋಷಕರ ಸಮಿತಿ ಸದಸ್ಯ ಪರಿಶೀಲಿಸಿ, ಕ್ರಮ
ನಾನು ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ಈ ಬಗ್ಗೆ ಆದಷ್ಟು ಶೀಘ್ರ ತಿಳಿದುಕೊಂಡು, ಏನೆಲ್ಲ ಪ್ರಗತಿ ಆಗಿವೆ, ಆಗಬೇಕಾಗಿದೆ ಅನ್ನುವುದನ್ನು ಪರಿಶೀಲಿಸಿ, ಕ್ರಮ ವಹಿಸಿಕೊಳ್ಳುತ್ತೇನೆ.
– ನವೀನ್ ಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕ, ರಾಜ್ಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) – ಪ್ರಶಾಂತ್ ಪಾದೆ