ಮಂಗಳೂರು: ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಫೆ.11ರಿಂದ ಫೆ.15ರ ವರೆಗೆ ಶ್ರದ್ಧಾ ಭಕ್ತಿಯಿಂದ ನಡೆಯಲಿರುವ ಪುನರ್‌ಪ್ರತಿಷ್ಠೆ ಸಹಿತ ಬ್ರಹ್ಮಕಲ ಶೋತ್ಸವದ ಪೂರ್ವಭಾವಿಯಾಗಿ ವೈಭವದ ಹೊರೆಕಾಣಿಕೆ ಮೆರವಣಿಗೆ ಶುಕ್ರವಾರ ಸಂಜೆ ಮಂಗಳೂರಿನಲ್ಲಿ ಸಂಪನ್ನಗೊಂಡಿತು.
ನಗರದ ಗೋಲ್ಡ್ ಪಿಂಚ್ ಸಿಟಿ ಮೈದಾನ ಕೂಳೂರು ಹಾಗೂ ಕೇಂದ್ರ ಮೈದಾನದಿಂದ ಏಕಕಾಲದಲ್ಲಿ ಹೊರೆ ಕಾಣಿಕೆ ಮೆರವಣಿಗೆ ಆರಂಭ ವಾಯಿತು. 300ಕ್ಕೂ ಅಧಿಕ ಹೊರೆ ದಿಬ್ಬಣದ ವಾಹನಗಳು ಹಾಗೂ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಎರಡೂ ಕಡೆ ಯಿಂದ ಸಾಗಿಬಂದ ಹೊರೆಕಾಣಿಕೆ ಮೆರವಣಿಗೆ ಸಂಜೆ 6.30ರ ಸುಮಾರಿಗೆ ಲೇಡಿಹಿಲ್ ನಾರಾಯಣಗುರು ಸರ್ಕಲ್ ಬಳಿ ಒಟ್ಟು ಸೇರಿ ಉರ್ವ ಮಾರಿಯಮ್ಮ ಕ್ಷೇತ್ರಕ್ಕೆ ಸಾಗಿತು.
ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್, ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಕಲ ಸಿದ್ಧತೆ ನಡೆಸ ಲಾಗಿದೆ. ಊರ-ಪರವೂರಿನ ಭಕ್ತ ಜನರು ವಿವಿಧ ಪ್ರಕಾರದಲ್ಲಿ ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ನಡೆದಿದೆ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಸರ್ವರೂ ಪಾಲ್ಗೊಳ್ಳುವ ಮೂಲಕ ಶ್ರೀದೇವರ ಕೃಪೆಗೆ ಪಾತ್ರರಾಗೋಣ ಎಂದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕ್ಷೇತ್ರದ ಪುರೋಹಿತರಾದ ವೆಂಕಟರಮಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ ಬೊಕ್ಕಪಟ್ಣ, ಪ್ರಧಾನ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಪ್ರಮುಖರಾದ ಲಕ್ಷ್ಮಣ್ ಅಮೀನ್ ಕೋಡಿಕಲ್, ಚೇತನ್ ಬೆಂಗ್ರೆ ಸಹಿತ ಗಣ್ಯರು ಉಪಸ್ಥಿತರಿದ್ದರು.
ನೆಹರೂ ಮೈದಾನದಿಂದ ಆರಂಭವಾದ ಹೊರೆಕಾಣಿಕೆ ಮೆರವಣಿಗೆಗೆ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ ಅವರು ಚಾಲನೆ ನೀಡಿದರು. ಗಣೇಶ್ ಕುಲಾಲ್, ಲೋಕೇಶ್ ಸುವರ್ಣ, ಶಶಿಕುಮಾರ್ ಬೆಂಗ್ರೆ, ಭರತ್ ಭೂಷಣ್, ಮೋಹನ್ ಬೆಂಗ್ರೆ, ನಿತಿನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಆಕರ್ಷಕ ಹೊರೆದಿಬ್ಬಣ
ಮೆರವಣಿಗೆಯಲ್ಲಿ ಕೇಸರಿ ಪೇಟಧಾರಿಗಳು, ಭಜನ ತಂಡಗಳು, ಕೊಂಬು-ಚೆಂಡೆ, ಕೀಲು ಕುದುರೆ, ಶಿಲ್ಪಕಲಾಗೊಂಬೆ ತಂಡಗಳು, ನಾಸಿಕ್ ತಂಡಗಳು ವಿಶೇಷ ಮೆರುಗು ನೀಡಿದವು. ಹೂವು, ತೋರಣ, ಬಾಳೆಗೊನೆ, ಭಗವಾಧ್ವಜ ಅಲಂಕಾರದಿಂದ ಶೋಭಿಸಿದ ವಾಹನಗಳಲ್ಲಿ ಹಸುರು ಹೊರೆಕಾಣಿಕೆಯನ್ನು ತರಲಾಯಿತು. ಉರ್ವ ಮಾರಿಯಮ್ಮ ದೇವಸ್ಥಾನ, ಮೀನುಗಾರಿಕೆ ಬೋಟು, ಶ್ರೀರಾಮ ಸಹಿತವಾದ ಅಯೋಧ್ಯೆ ದೇವಸ್ಥಾನ, ಮಹಿಷ ಮರ್ದಿನಿ, ಬಲಿ ಚಕ್ರವರ್ತಿ, ಹನುಮಾನ್ ಸ್ತಬ್ದಚಿತ್ರಗಳು ಗಮನ ಸೆಳೆದವು.