ಮಂಗಳೂರು: ಹಿಂದೂ ಧರ್ಮದ ಪರಂಪರೆಗೆ ಬಹು ದೊಡ್ಡ ಕೊಡುಗೆಯನ್ನು ಮೊಗವೀರ ಸಮಾಜ ನೀಡಿ ಅದ್ವಿತೀಯ ಕಾರ್ಯ ಮಾಡಿದೆ ಎಂದು ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.
ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನವಿತ್ತರು.ಕಡಲಿನಲ್ಲಿ ಕಷ್ಟಪಟ್ಟು ದುಡಿಯುವವರು ಮೊಗವೀರರು. ಶ್ರದ್ಧೆಯ ಮೂಲಕವೇ ತಮ್ಮ ಕಾರ್ಯ ನಡೆಸುತ್ತಾ ಬಂದಸಮುದಾಯ ಕರಾವಳಿಯಲ್ಲಿ ಅದ್ವಿತೀಯ ಕಾರ್ಯಕ್ರಮ ಗಳನ್ನು ಸಂಘಟಿಸಿ ಹಿಂದೂ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ ಎಂದರು.
ಪುಣ್ಯ ಕ್ಷೇತ್ರ ಬೆಳಗಲು 12 ವರ್ಷಕ್ಕೊಮ್ಮೆ ಬ್ರಹ್ಮಕಲಶ ನಡೆದು ಮತ್ತೂಮ್ಮೆ ದೇವರ ಸನ್ನಿಧಾನವನ್ನು ಪುನಸ್ಥಾಪಿಸುವುದು ಅದ್ವಿತೀಯ ಪರಿಕಲ್ಪನೆ. ಆ ಮೂಲಕ ಸನ್ನಿಧಾನದಲ್ಲಿ ಚೈತನ್ಯ ಕಂಡುಭಕ್ತರಿಗೆ ದೇವತಾನುಗ್ರಹ ಪ್ರಾಪ್ತವಾಗುತ್ತದೆ. ಹಿಂದಿನವರು ಕಾಪಾಡಿಕೊಂಡ ಬಂದ ಪರಂಪರೆ, ಸಂಸ್ಕೃತಿಯನ್ನು ಮುಂದಿನ ಜನಾಂಗ ಕಾಪಿಡಬೇಕು. ವಿದೇಶೀ ಸಂಸ್ಕೃತಿಯ ಹಿಂದೆ ಹೋಗುವ ಮುನ್ನ ನಮ್ಮ ದೇಶದ ಸಂಸ್ಕೃತಿಯನ್ನು ಪಾಲಿಸಬೇಕಿದೆ ಎಂದು ಅವರು ಹೇಳಿದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಶುಭಹಾರೈಸಿದರು. ಜನತಾ ಫಿಶ್ ಮಿಲ್ ಕಂಪೆನಿ ಕೋಟದ ಆಡಳಿತ ನಿರ್ದೇಶಕರಾದ ಆನಂದ ಸಿ.ಕುಂದರ್ ಮಾತನಾಡಿ, ಮೊಗವೀರ ಸಮಾಜದ ಎಲ್ಲಾ ಬಂಧುಗಳು ಒಗ್ಗಟ್ಟಿನಿಂದ ಕರಾವಳಿಯ ಪ್ರಮುಖ ಆಲಯಗಳ ಅಭಿವೃದ್ದಿಗೆ ವಿಶೇಷವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.
ಉದ್ಯಮಿ ಆನಂದ್ ಪಿ.ಸುವರ್ಣ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ, ಅಂಬಿಗ ಅರ್ಥ್ ಮೂವರ್ ಮಾಲಕರಾದ ಶಿವಾನಂದ ಅಂಬಿಗ, ಹಿರಿಯ ವಕೀಲರಾದ ಎಸ್.ಕೆ.ಉಳ್ಳಾಲ್, ಅವಿಭಜಿತ ದ.ಕ. ಜಿಲ್ಲಾ ಮೊಗವೀರ ಮಹಿಳಾ ಸಂಘ ಉಚ್ಚಿಲ ಇದರ ಅಧ್ಯಕ್ಷರಾದ ಉಷಾರಾಣಿ ಬೋಳೂರು, ಉರ್ವ ಮೀನು ಮಾರುಕಟ್ಟೆ ಮಹಿಳೆಯರ ಸಂಘದ ಅಧ್ಯಕ್ಷೆ ಉರ್ಮಿಳಾ ಬೈಕಂಪಾಡಿ, ಉರ್ವ ಕ್ಷೇತ್ರದ ಲಲಿತ ಸಹಸ್ರನಾಮ ಪಾರಾಯಣ ಪ್ರತಿನಿಧಿ ನೀನಾ ವಿ. ಬೋಳೂರು ಮುಖ್ಯ ಅತಿಥಿಗಳಾಗಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕರ್ಕೇರ ಬೊಕ್ಕಪಟ್ಣ, ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್ ಕೋಡಿಕಲ್, ಏಳುಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್ ಸುವರ್ಣ ಕುದ್ರೋಳಿ ಉಪಸ್ಥಿತರಿದ್ದರು. ಸಮಿತಿ ಪ್ರ. ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್ ಸ್ವಾಗತಿಸಿ, ಯಶವಂತ ಬೋಳೂರು, ಅನುರಾಗ್ ನಿರೂಪಿಸಿದರು.