Advertisement

ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಮಹೋತ್ಸವದ ಐದನೇ ದಿನದ ಕಾರ್ಯಕ್ರಮ

03:31 PM Jun 06, 2019 | Vishnu Das |

ಮುಂಬಯಿ: ತುಳುನಾಡಿನ ಅಧ್ಯಾತ್ಮಿಕ ಚಿಂತನೆಗಳನ್ನು, ಸಾಂಸ್ಕೃತಿಕ ವೈಭವಗಳನ್ನು ಮಹಾರಾಷ್ಟ್ರದ ನೆಲದಲ್ಲಿ ಪಸರಿಸಿದ ಬೊರಿವಲಿ ಪಶ್ಚಿಮದ ಜೈರಾಜ್‌ ನಗರದಲ್ಲಿರುವ ಶ್ರೀ ಮಹಿಷಮರ್ದಿನಿ ದೇವಸ್ಥಾನ ಪವಿತ್ರ ಸ್ಥಳವಾಗಿ ಬಿಂಬಿತವಾಗಿದೆ. ನೂತನ ಶಿಲಾಮಯದ ಗರ್ಭಗುಡಿ, ಸ್ವರ್ಣ ಲೇಪಿತ ತೀರ್ಥಮಂಟಪ, ಆಕರ್ಷಕ ಕೆತ್ತನೆಯ ಶಿಲಾಕೃತಿಗಳು ಭಕ್ತರ ಸಂತೃಪ್ತಿಯನ್ನು ದ್ವಿಗುಣಗೊಳಿಸಿವೆ. ಶಿಲ್ಪಶಾಸ್ತ್ರ, ವಾಸ್ತು ಶಾಸ್ತ್ರ ಆಗಮ ಶಾಸ್ತ್ರಗಳಿಂದ ರಚಿಸಲ್ಪಟ್ಟ ದೇವಾಲಯಗಳು ಸಂಸ್ಕೃತಿಯ ಪೋಷಕ ಸ್ಥಳಗಳಾಗಿವೆ ಎಂದು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ ತಿಳಿಸಿದರು.

Advertisement

ಜೂ. 4ರಂದು ಬೊರಿವಲಿ ಪಶ್ಚಿಮ ವಜೀರ್‌ನಾಕಾ, ಜೈರಾಜ್‌ ನಗರದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್‌ ಇದರ ಶ್ರೀ ಮಹಿಷಮರ್ದಿನಿ ದೇವಸ್ಥಾನದ 29ನೇ ವಾರ್ಷಿಕ ಮಹೋತ್ಸವದ 5ನೇ ದಿನದಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀಕ್ಷೇತ್ರದ ಪರಿವಾರ ದೇವರಾದ ಶ್ರೀ ಗಣಪತಿ, ಶ್ರೀ ಮುಖ್ಯಪ್ರಾಣ, ವಾಸುಕೀ ನಾಗರಾಜ, ನವಗ್ರಹ, ಧರ್ಮದೈವ ಕೊಡಮಣಿತ್ತಾಯ ದೈವಗಳ ಅರಾಧನೆ, ತುಲಾಭಾರ ಸೇವೆ, ಆಶ್ಲೇಷ ಬಲಿ, ತನು ತಂಬಿಲ ಸೇವೆ, ಇತ್ಯಾದಿಗಳ ಸೇವೆಯು ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದ ಅವರು ಅತಿಥಿ ಗಣ್ಯರನ್ನು ಪ್ರಸಾದ ನೀಡಿ ಗೌರವಿಸಿದರು.

ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿ, ಬೆಳ್ಮಣ್‌ ವೆಂಕಟರಮಣ ತಂತ್ರಿ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಕವಾಟೋದ್ಘಾಟನೆ, ಪಂಚಾಮೃತ ಅಭಿಷೇಕ, ತುಲಾಭಾರ ಸೇವೆ, ಶ್ರೀ ಮಹಿಷಮರ್ದಿನಿ ಭಜನ ಮಂಡಳಿಯವರಿಂದ ಭಜನೆ, ಪೂರ್ವಾಹ್ನ ಮಹಾಪೂಜೆ, ಚೂರ್ಣೋತ್ಸವ ಹರಿವಾಣ ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.

ಸಂಜೆಯ ಯಾತ್ರಾಹೋಮ ಬಳಿಕ ರಾತ್ರಿ ಉತ್ಸವ ಬಲಿ, ಪಲ್ಲಕಿ ಉತ್ಸವ, ಅವಭೃತ ಯಾತ್ರಾ ಮಹೋತ್ಸವ, ಧರ್ಮದೈವ ಕೊಡಮಣಿತ್ತಾಯ ದರ್ಶನದೊಂದಿಗೆ ದೇವರ ಭೇಟಿ, ಹರಿವಾಣ ಕಾಣಿಕೆ, ಕಟ್ಟೆ ಪೂಜೆ ಜರಗಿತು. ಈ ಸಂದರ್ಭದಲ್ಲಿ ಸ್ಥಾಪಕ ವಂಶಸ್ಥ ಮೊಕ್ತೇಸರರಾದ ಜಯರಾಜ ಶ್ರೀಧರ ಶೆಟ್ಟಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಮೊಕ್ತೇಸರರಾದ ಜಯಪಾಲಿ ಅಶೋಕ ಶೆಟ್ಟಿ, ಶಾಲಿನಿ ಪ್ರದೀಪ್‌ ಶೆಟ್ಟಿ, ಸಪ್ನಾ ಶೆಟ್ಟಿ, ಮುಂಡಪ್ಪ ಎಸ್‌. ಪಯ್ಯಡೆ, ಬಾಲಕೃಷ್ಣ ರೈ, ಪೇಟೆ ಮನೆ ಪ್ರಕಾಶ ಶೆಟ್ಟಿ, ಪೇಟೆಮನೆ ರವೀಂದ್ರ ಶೆಟ್ಟಿ, ಸತೀಶ್‌ ಶೆಟ್ಟಿ, ಜಯಂತ್‌ ಶೆಟ್ಟಿ, ಅಮೃತಾ ಶೆಟ್ಟಿ, ಜಿ. ಎಂ. ಕೋಟ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ, ಆರ್ಚಕ ವೃಂದ, ಭಜನ ಮಂಡಳಿ, ಪರಿಸರದ ಗಣ್ಯರು ಸಹಕರಿಸಿದರು. ರಾಜಕೀಯ ನೇತಾರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಮುದಾಯ ಸಂಘಟನೆ ಗಳ ಪ್ರತಿನಿಧಿಗಳು, ಉದ್ಯಮಿಗಳು, ತುಳು ಕನ್ನಡಿಗರು, ಕನ್ನಡೇತರರು ಅಪಾರ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next