ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾ. 10 ರಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಮಾರ್ಗದರ್ಶನದಲ್ಲಿ, ಸಂಘದ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿ ಅವರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯ ಪೂಜಾ ಸತ್ಕರ್ಮದಲ್ಲಿ ಸಹಕರಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಮಾ. 9ರಂದು ಸಂಜೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹ ವಾಚನ, ವಾಸ್ತುಪೂಜೆ, ವಾಸ್ತು ಹೋಮ, ರಾತ್ರಿ ಪೂಜಾ ಕಾರ್ಯಕ್ರಮಗಳು ನಡೆಯಿತು. ಕೃಷ್ಣ ವಿ. ಶೆಟ್ಟಿ ಮತ್ತು ಕಲ್ಪನಾ ಶೆಟ್ಟಿ ದಂಪತಿ ವಿವಿಧ ಪೂಜೆಗಳ ಯಜಮಾನತ್ವ ವಹಿಸಿದ್ದರು.
ಮಾ. 10ರಂದು ಬೆಳಗ್ಗೆ 9ರಿಂದ ಗಣಹೋಮ, ಪಂಚ ವಿಶಂತಿ, ಕಲಶಾಭಿಷೇಕ, ಆಶ್ಲೇಷಾ ಬಲಿ, ಪ್ರಸನ್ನ ಪೂಜೆ, ಮಧ್ಯಾಹ್ನ 1ರಿಂದ 2ರವರೆಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಗಣಹೋಮ ಮತ್ತು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಮತ್ತು ಮಾಲಿನಿ ಪಯ್ಯಡೆ ದಂಪತಿ ಹಾಗೂ ವಿಟuಲ್ ಎಸ್. ಆಳ್ವ ದಂಪತಿ ಪಾಲ್ಗೊಂಡಿದ್ದರು.
ಅಪರಾಹ್ನ 4ರಿಂದ ಬಂಟರ ಸಂಘದ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ, ಸಂಜೆ 6ರಿಂದ ದುರ್ಗಾಪೂಜೆ, ರಂಗಪೂಜೆ, ದರ್ಶನ ಬಲಿ, ಉತ್ಸವ ಹಾಗೂ ಪ್ರಸಾದ ವಿತರಣೆ ಜರಗಿತು. ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ದಂಪತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದರು. ಆನಂತರ ಅನ್ನಸಂತರ್ಪಣೆ ನಡೆಯಿತು. ಮಾ. 11ರಂದು ಬೆಳಗ್ಗೆ 8ರಿಂದ ಸಂಪ್ರೋಕ್ಷಣೆ ಹಾಗೂ ಮಂತ್ರಾಕ್ಷತೆ ನಡೆದು ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಸರ್ವ ಪದಾಧಿಕಾರಿಗಳು, ವಿಶ್ವಸ್ಥರು, ಮಾಜಿ ಅಧ್ಯಕ್ಷರು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ-ಸದಸ್ಯೆಯರು, ತುಳು-ಕನ್ನಡಿಗ ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.