Advertisement
ಗೋಕರ್ಣ ಪೌರಾಣಿಕವಾಗಿ ಐತಿಹಾಸಿಕವಾಗಿ ಅತ್ಯಂತ ಮಹತ್ವಪೂರ್ಣವಾದ ಮುಕ್ತಿಕ್ಷೇತ್ರವಾಗಿದೆ. ಇಲ್ಲಿಗೆ ಗೋಕರ್ಣ ಎಂದು ಹೆಸರು ಬರಲು ಹಲವು ಕಾರಣವಿದೆಯಂತೆ.
Related Articles
Advertisement
ರಾವಣನ ತಾಯಿ ಕೈಕಸಿ ದೇವಿಯು ಭಗವಾನ್ ಶಿವನ ಕಟ್ಟಾ ಭಕ್ತೆ, ತನ್ನ ಮಗನಿಗೆ ಸಮೃದ್ಧಿಯನ್ನು ತರಲು ಶಿವಲಿಂಗವನ್ನು ಪೂಜಿಸಲು ನಿರ್ಧರಿಸಿದಳು . ಈ ಪೂಜೆಯಿಂದ ಅಸೂಯೆಗೊಂಡ ಸ್ವರ್ಗದ ಅಧಿಪತಿ ಇಂದ್ರನು ಶಿವಲಿಂಗವನ್ನು ಕದ್ದು ಸಮುದ್ರಕ್ಕೆ ಎಸೆದನು. ಶಿವನ ಭಕ್ತಿಯ ಆರಾಧನೆಗೆ ಭಂಗವುಂಟಾಗಿದ್ದರಿಂದ ವಿಚಲಿತಳಾದ ರಾವಣನ ತಾಯಿ ಉಪವಾಸ ಸತ್ಯಾಗ್ರಹ ನಡೆಸಲು ಪ್ರಾರಂಭಿಸಿದಳು. ಇದನ್ನು ಕಂಡ ರಾವಣ ತನ್ನ ತಪೋಬಲದಿಂದ ಶಿವನನ್ನೇ ಒಲಿಸಿಕೊಳ್ಳಲು ನಿರ್ಧರಿಸುತ್ತಾನೆ ಅದರಂತೆ ರಾವಣ ಕೈಲಾಸಕ್ಕೆ ತೆರಳುತ್ತಾನೆ ಅಲ್ಲಿ ಶಿವನನ್ನು ಆರಾಧಿಸಿ ಶಿವನಿಂದ ಆತ್ಮಲಿಂಗವನ್ನು ಪಡೆದುಕೊಳ್ಳುತ್ತಾನೆ.
ಆತ್ಮಲಿಂಗವನ್ನು ಪಡೆದ ರಾವಣನಿಗೆ ಶಿವನು ಒಂದು ವಿಚಾರವನ್ನು ತಿಳಿಸುತ್ತಾನೆ ಈ ಆತ್ಮಲಿಂಗವನ್ನು ಎಲ್ಲಿ ಭೂ ಸ್ಪರ್ಶ ಮಾಡುತ್ತಿಯೋ ಅಲ್ಲೇ ಸ್ಥಾಪಿತವಾಗುತ್ತದೆ ಹಾಗಾಗಿ ಎಚ್ಚರದಿಂದ ಆತ್ಮಲಿಂಗವನ್ನು ಹಿಡಿದುಕೋ ಎಂದು. ಆತ್ಮಲಿಂಗ ಹಿಡಿದು ಹೊರಟ ರಾವಣನ ವಿಚಾರ ದೇವತೆಗಳಿಗೆ ಗೊತ್ತಾಗಿ ಗಣೇಶನನ್ನು ಗೊಲ್ಲನ ರೂಪದಲ್ಲಿ ರಾವಣನ ಬಳಿಗೆ ಕಳುಹಿಸಿ ಆತ್ಮಲಿಂಗದ ರಕ್ಷಣೆ ಮಾಡುವ ಉಪಾಯ ಮಾಡುತ್ತಾರೆ ಅದರಂತೆ ರಾವಣ ಗೋಕರ್ಣ ಕಡಲ ತೀರದಲ್ಲಿ ಸಂಚರಿಸುವ ವೇಳೆ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನು ಮರೆಮಾಚಿಸುತ್ತಾನೆ ಇದನ್ನು ಕಂಡ ರಾವಣ ಸಂಧ್ಯಾ ಕಾಲವಾಯಿತು ಸಂಧ್ಯಾವಂದನೆ ಮಾಡಬೇಕು ಆದರೆ ಕೈಯಲ್ಲಿರುವ ಆತ್ಮಲಿಂಗವನ್ನು ಕೆಳಗಿರಿಸುವಂತಿಲ್ಲ ಎಂದು ಆಲೋಚನೆ ಮಾಡುತ್ತಿರುವ ವೇಳೆ ಗೊಲ್ಲನ ವೇಷದಲ್ಲಿದ್ದ ಗಣೇಶ ಅಲ್ಲಿಗೆ ತೆರಳುತ್ತಾನೆ ಈ ವೇಳೆ ರಾವಣ ಗೊಲ್ಲನ ವೇಷದಲ್ಲಿರುವ ಗಣೇಶನ ಬಳಿ ತನ್ನ ಕೈಯಲ್ಲಿರುವ ಆತ್ಮಲಿಂಗವನ್ನು ಹಿಡಿದುಕೊಳ್ಳುವಂತೆ ಹೇಳಿ ಸಂಧ್ಯಾವಂದನೆ ಮಾಡಿ ಬರುವುದಾಗಿ ಹೇಳುತ್ತಾನೆ ಅದಕ್ಕೆ ಉತ್ತರಿಸಿದ ಗಣೇಶ ರಾವಣನಲ್ಲಿ ಒಂದು ಷರತ್ತು ವಿಧಿಸುತ್ತಾನೆ ಅದರಂತೆ ನಾನು ಮೂರು ಬಾರಿ ಹೆಸರು ಕರೆಯುವ ಮೊದಲು ಸಂಧ್ಯಾವಂದನೆ ಮುಗಿಸಿ ಬರಬೇಕು ಇಲ್ಲದಿದ್ದರೆ ಆತ್ಮಲಿಂಗವನ್ನು ಭೂ ಸ್ಪರ್ಶ ಮಾಡುವುದಾಗಿ ಷರತ್ತು ಹಾಕಿದ್ದ, ಇದಕ್ಕೆ ಒಪ್ಪಿದ ರಾವಣ ಸಂಧ್ಯಾವಂದನೆ ಮಾಡಲು ತೆರಳಿದ ವೇಳೆ ಉಪಾಯ ಮಾಡಿದ ಗಣೇಶ ಬೇಗ ಬೇಗ ಮೂರು ಬಾರಿ ಹೆಸರು ಕರೆದು ಆತ್ಮಲಿಂಗವನ್ನು ನೆಲದ ಮೇಲೆ ಇರಿಸಿಯೇ ಬಿಡುತ್ತಾನೆ. ಇದನ್ನು ಕಂಡ ರಾವಣ ಕೋಪಗೊಂಡು ಬಾಲಕ ಗಣೇಶನ ಮೇಲೆ ಮುಷ್ಟಿ ಪ್ರಹಾರ ಮಾಡುತ್ತಾನೆ, ಅದರಂತೆ ರಾವಣ ಗಣೇಶನ ಮೇಲೆ ಮುಷ್ಟಿ ಪ್ರಹಾರ ಮಾಡಿದ ಕುಳಿಯನ್ನು ಈಗಲೂ ಗೋಕರ್ಣ ಗಣಪತಿಯ ಶಿರದ ಮೇಲೆ ಕಾಣಬಹುದು.
ಭೂಸ್ಪರ್ಶಗೊಂಡ ಆತ್ಮಲಿಂಗವನ್ನು ಮೇಲೆತ್ತಲು ವಿಫಲನಾದ ರಾವಣ ಆತ್ಮಲಿಂಗದ ಸಂಪುಟವನ್ನು ಕಿತ್ತು ಎಸೆಯುತ್ತಾನಂತೆ, ಆ ಎಸೆದಿರುವ ಸಂಪುಟದಿಂದ ಪಂಚ ಮಹಾ ಸನ್ನಿದಾನಗಳು ನಿರ್ಮಾಣಗೊಳ್ಳುತ್ತವೆಯಂತೆ ಅದೇ ಮಹಾಬಲೇಶ್ವರ(ಗೋಕರ್ಣ), ಸಜ್ಜೆಶ್ವರ, ಧಾರೇಶ್ವರ, ಗುಣವಂತೇಶ್ವರ ಹಾಗೂ ಮುರುಡೇಶ್ವರ. ಹೀಗೆ ರಾವಣನಿಂದ ಆತ್ಮಲಿಂಗ ರೂಪದಲ್ಲಿ ಬಂದ ಮಹಾದೇವ ಗಣೇಶನಿಂದ ಭೂಸ್ಪರ್ಶಗೊಂಡು ಭೂಕೈಲಾಸವಾಗಿ ಗೋಕರ್ಣವಾಗಿ ಪರಿವರ್ತನೆಯಾಯಿತು.
ಶಿವನ ಆತ್ಮಲಿಂಗವಿರುವ ಪ್ರಪಂಚದ ಏಕೈಕ ಕ್ಷೇತ್ರ ಇದಾಗಿರುವ ಕಾರಣ ಇದನ್ನು ಮುಕ್ತಿ ಕ್ಷೇತ್ರ ಎಂದು ಹೇಳಲಾಗುತ್ತದೆ. ಆದಿಶಕ್ತಿ ಪಾರ್ವತಿ ದೇವಿ ಶಿವನನ್ನು ಹುಡುಕುತ್ತಾ ಗೋಕರ್ಣಕ್ಕೆ ಬಂದಾಗ ಇಲ್ಲಿಗೆ ಸಮೀಪದ ತಾಮ್ರ ಪರ್ವತದಲ್ಲಿ ತಂಗುತ್ತಾಳಂತೆ ಈ ಕಾರಣದಿಂದ ಗೌರಿ ದೇವಿಗೆ ತಾಮ್ರ ಗೌರಿ ಎಂಬ ಹೆಸರು ಬಂದಿದ್ದಂತೆ.
ಕೋಟಿತೀರ್ಥಕೋಟಿತೀರ್ಥವು ಮಾನವ ನಿರ್ಮಿತ ಕೊಳವಾಗಿದೆ, ಇದನ್ನು ವಿಗ್ರಹಗಳನ್ನು ಮುಳುಗಿಸಲು ಮತ್ತು ಧಾರ್ಮಿಕ ಸ್ನಾನಕ್ಕಾಗಿ ಬಳಸಲಾಗುತ್ತದೆ. ಇದು ದೇವಾಲಯಗಳಿಂದ ಸುತ್ತುವರಿದಿದೆ ಮತ್ತು ಮಧ್ಯದಲ್ಲಿ ಸಣ್ಣ ವೇದಿಕೆಯನ್ನು ಹೊಂದಿದೆ. ಭಕ್ತರು ಸಾಮಾನ್ಯವಾಗಿ ಮಹಾಬಲೇಶ್ವರ ದೇವಸ್ಥಾನಕ್ಕೆ ಪೂಜೆಗೆ ಭೇಟಿ ನೀಡುವ ಮೊದಲು ಕೊಳದಲ್ಲಿ ಸ್ನಾನ ಮಾಡುತ್ತಾರೆ. ಶಿವನ ಕಲ್ಲಿನ ಶಿಲ್ಪ ಮತ್ತು ಶಾಲಿಗ್ರಾಮ ಪೀಠದೊಳಗೆ ಸುತ್ತುವರಿದಿರುವ ಬೃಹತ್ ಆತ್ಮಲಿಂಗ, ಮಹಾಬಲೇಶ್ವರ ದೇವಾಲಯ, ಗೋಕರ್ಣವು ಮಹಾ ಗಣಪತಿ, ತಾಮಿರ ಗೌರಿ (ಪಾರ್ವತಿ ದೇವಿ), ಚಂಡಿಕೇಶ್ವರ, ಆದಿ ಗೋಕರ್ಣೇಶ್ವರ, ಗೋಕರ್ಣನಾಯಕಿ ಮತ್ತು ದತ್ತಾತ್ರೇಯರ ಗುಡಿಗಳಿಂದ ಸುತ್ತುವರಿದಿದೆ. ಮಹಾಬಲೇಶ್ವರ ದೇವಸ್ಥಾನದ ಹೊರತಾಗಿ, ತಾಮ್ರ ಗೌರಿ ದೇವಸ್ಥಾನ, ಗಣಪತಿ ದೇವಸ್ಥಾನ, ಚಂಡಿಕೇಶ್ವರ, ಆದಿ ಗೋಕರ್ಣೇಶ್ವರ, ದತ್ತಾತ್ರೇಯ ಮತ್ತು ಕೋಟಿತೀರ್ಥ ಇತ್ಯಾದಿಗಳನ್ನು ಒಳಗೊಂಡಂತೆ ಈ ಸ್ಥಳಕ್ಕೆ ಹಲವಾರು ಆಕರ್ಷಣೆಗಳಿವೆ. ಆರು ಅಡಿ ಎತ್ತರದ ಶಿವಲಿಂಗವು ಚದರ ಸಾಲಿಗ್ರಾಮ ಪೀಠದಲ್ಲಿ ಸುತ್ತುವರಿದಿದೆ. 40 ವರ್ಷಗಳಿಗೊಮ್ಮೆ ಅಷ್ಟಬಂಧನ ಕುಂಭಾಭಿಷೇಕವನ್ನು ಮಾಡಿದಾಗ ಮಾತ್ರ ನೋಡಬಹುದು. ಮಹಾಬಲೇಶ್ವರ ದೇವಸ್ಥಾನವು ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಇದೆ. ಸಮುದ್ರ ತೀರಕ್ಕೆ ಸಮೀಪದಲ್ಲಿ ಇರುವ ಈ ದೇವಾಲಯವು ಅತ್ಯಂತ ಪಾವಿತ್ರ್ಯತೆಯಿಂದ ಕೂಡಿದೆ. ಈ ದೇವಸ್ಥಾನದಲ್ಲಿ ಶಿವನ ಆತ್ಮಲಿಂಗ ಇರುವುದನ್ನು ಕಾಣಬಹುದು. ಇಲ್ಲಿ ಶಿವನು ಸಮುದ್ರ ತೀರದ ಕಡೆಗೆ ಮುಖಮಾಡಿ ಇರುವುದು ವಿಶೇಷ. ಈ ದೇವಾಲಯದಲ್ಲಿ ಧನಾತ್ಮಕ ಶಕ್ತಿ ಅತಿಯಾಗಿ ಇರುವುದರಿಂದ ಭಕ್ತರು ಕೋರಿಕೊಂಡ ಆಸೆಗಳು ಬಹುಬೇಗ ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. ಮುಕ್ತಿಧಾಮ
ಗೋಕರ್ಣವನ್ನು ಮುಕ್ತಿಧಾಮ ಅಥವಾ ಮುಕ್ತಿಸ್ಥಳ ಎಂದು ಸಹ ಕರೆಯುತ್ತಾರೆ. ಬಹುತೇಕ ಜನರು ಹಿರಿಯರು ಮರಣ ಹೊಂದಿದ ಮೇಲೆ ಇಲ್ಲಿಗೇ ಬಂದು ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದ ಕ್ರಿಯೆಗಳನ್ನು ಮಾಡುತ್ತಾರೆ. ಶಿವರಾತ್ರಿಯ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆ ಮಾಡಲಾಗುವುದು. ಹಬ್ಬದಂದು ಇಡೀ ಪಟ್ಟಣವನ್ನೇ ಅಲಂಕರಿಸುವರು. ಜೊತೆಗೆ ದೇವತೆಯನ್ನು ಮೆರವಣಿಗೆಗೆ ಕೊಂಡೊಯ್ಯುವರು. ಅಂತೆಯೇ ಕಾರ್ತಿಕೋತ್ಸವದ ಸಮಯದಲ್ಲೂ ಭವ್ಯವಾದ ಆಚರಣೆ ನಡೆಯುತ್ತದೆ. ಗಣಪತಿ
ಗೋಕರ್ಣದಲ್ಲಿ ಮಹಾಬಲೇಶ್ವರನ ಸ್ಥಾಪನೆಗೆ ಕಾರಣನಾದ ಗಣಪತಿಯ ದೇವಾಲಯವಿದೆ. ಇಲ್ಲಿರುವ ನಿಂತಿರುವ ಗಣಪನ ವಿಗ್ರಹ ಕರ್ನಾಟಕದ ಅತಿ ಪ್ರಾಚೀನ ಗಣೇಶ ವಿಗ್ರಹಗಳಲ್ಲಿ ಒಂದಾಗಿದೆ. ಇದು ಸುಮಾರು 6 ಅಥವಾ 7ನೇ ಶತಮಾನದ್ದೆನ್ನುತ್ತಾರೆ ಇತಿಹಾಸತಜ್ಞರು. ಮಹಾಶಿವರಾತ್ರಿ:
ಮಹಾ ಶಿವರಾತ್ರಿಯ ಪರ್ವ ಕಾಲದಲ್ಲಿ ಇಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನೆರವೇರುತ್ತವೆ ಅಲ್ಲದೆ ದೇವಳದ ರಥೋತ್ಸವವೂ ಇದೇ ಕಾಲದಲ್ಲಿ ನೆರವೇರುತ್ತದೆ ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಿ ದೇವರ ಪೂಜಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ದೇವಸ್ಧಾನಕ್ಕೆ ಹೋಗುವ ಮಾರ್ಗ
ಬೆಂಗಳೂರಿನಿಂದ ಸುಮಾರು 450 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಗಳ ಮೂಲಕವೂ ಇಲ್ಲಿಗೆ ಬರಬಹುದು. ಅಲ್ಲದೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಿಂದ ಬರುವವರು ಬಸ್ಸು ಅಥವಾ ರೈಲಿನ ಮೂಲಕವೂ ಬರಬಹುದು. – ಸುಧೀರ್. ಎ