ಕೊಲಂಬೊ: ಶ್ರೀಲಂಕಾದ ಹಿರಿಯ ಎಡಗೈ ಸ್ಪಿನ್ನರ್ ರಂಗನ ಹೆರಾತ್ ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ನ. 6ರಿಂದ ಗಾಲೆಯಲ್ಲಿ ಆರಂಭವಾಗಲಿರುವ ಗಾಲೆ ಟೆಸ್ಟ್ ಪಂದ್ಯವೇ ಹೆರಾತ್ ಆಡಲಿರುವ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ. ಇದ ರೊಂದಿಗೆ 19 ವರ್ಷಗಳ ಹಿಂದೆ ಗಾಲೆಯಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿಯಿರಿಸಿದ ಹೆರಾತ್ ಗಾಲೆಯಲ್ಲೇ ಕೊನೆಯ ಎಸೆತ ವನ್ನಿಕ್ಕಲಿರುವುದು ಕಾಕತಾಳೀಯ. 71 ಏಕದಿನ ಹಾಗೂ 17 ಟಿ20 ಪಂದ್ಯಗಳನ್ನೂ ಆಡಿರುವ ಹೆರಾತ್, ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ಈಗಾಗಲೇ ದೂರ ಸರಿದಿದ್ದಾರೆ.
ಮುರಳಿ ನಿವೃತ್ತಿ ಬಳಿಕ ಅವಕಾಶ
1999ರಲ್ಲಿ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಗಾಲೆ ಯಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ರಂಗನ ಹೆರಾತ್ ಮೊದಲ ಇನ್ನಿಂಗ್ಸ್‌ನಲ್ಲೇ 4 ವಿಕೆಟ್ ಕಿತ್ತು ಗಮನ ಸೆಳೆದಿದ್ದರು. ಮುರಳೀಧರನ್‌ಗೆ 5 ವಿಕೆಟ್ ಲಭಿಸಿತ್ತು. ಆದರೆ ಮುರಳಿ ಪರಾಕ್ರಮದಿಂದಾಗಿ ಹೆರಾತ್‌ಗೆ ಹೆಚ್ಚಿನ ಅವಕಾಶ ಲಭಿಸಲಿಲ್ಲ. 1999ರಿಂದ ಜುಲೈ 2010ರ ತನಕ, ಅಂದರೆ ಮುರಳೀಧರನ್ ನಿವೃತ್ತರಾಗುವ ವರೆಗೆ ಹೆರಾತ್ ಆಡಿದ್ದು 22 ಟೆಸ್ಟ್ ಮಾತ್ರ. ಉರುಳಿಸಿದ್ದು 71 ವಿಕೆಟ್.
ಮುರಳೀಧರನ್ ನೇಪಥ್ಯಕ್ಕೆ ಸರಿದ ಬಳಿಕವಷ್ಟೇ ಹೆರಾತ್‌ಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ಲಭಿಸತೊಡಗಿತು. ಅನಂತರ ಶ್ರೀಲಂಕಾ ಆಡಿದ 81 ಟೆಸ್ಟ್‌ಗಳಲ್ಲಿ ಹೆರಾತ್ 70ರಲ್ಲಿ ಕಾಣಿಸಿಕೊಂಡಿದ್ದರು. ಉರುಳಿಸಿದ್ದು ಬರೋಬ್ಬರಿ 359 ವಿಕೆಟ್, ಸರಾಸರಿ 25.98. ದಕ್ಷಿಣ ಆಫ್ರಿಕಾದಲ್ಲಿ ಲಂಕಾದ ಪ್ರಪ್ರಥಮ ಟೆಸ್ಟ್ ವಿಜಯದಲ್ಲಿ ಮಿಂಚುವುದರೊಂದಿಗೆ ಹೆರಾತ್ ಸ್ಪಿನ್ ಜಾದೂ ಹೊಸ ಮಜಲನ್ನು ಪಡೆದುಕೊಳ್ಳುತ್ತದೆ. ಅದು 2011ರ ಡರ್ಬನ್ ಟೆಸ್ಟ್. ಲಂಕಾ ಇದನ್ನು 208 ರನ್ನುಗಳ ಭಾರೀ ಅಂತರದಿಂದ ಗೆದ್ದಿತ್ತು. ಒಟ್ಟು 9 ವಿಕೆಟ್ ಕಿತ್ತ ಹೆರಾತ್ ಪಂದ್ಯಶ್ರೇಷ್ಠರಾಗಿ ಮೂಡಿಬಂದಿದ್ದರು.
ಹೆರಾತ್ ಅವರ ಪರಾಕ್ರಮಕ್ಕೆ ಸಾಕ್ಷಿಯಾಗುವ ಮತ್ತೂಂದು ಟೆಸ್ಟ್ ಪಂದ್ಯ 2014ರಲ್ಲಿ ಪಾಕಿಸ್ಥಾನ ವಿರುದ್ಧ ಕೊಲಂಬೊದಲ್ಲಿ ನಡೆದಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಉಡಾಯಿಸಿದ ಹೆರಾತ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೆ 5 ಮಂದಿ ಪಾಕ್ ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಹೆರಾತ್ ಅವರ ಜಬರ್ದಸ್ತ್ ಪ್ರದರ್ಶನ ಮೂಡಿಬಂದದ್ದೇ ಪಾಕಿಸ್ಥಾನ ವಿರುದ್ಧ. ಉರುಳಿಸಿದ ಒಟ್ಟು 430 ವಿಕೆಟ್‌ಗಳಲ್ಲಿ 230 ವಿಕೆಟ್ ಪಾಕ್ ವಿರುದ್ಧವೇ ಬಂದಿದೆ. “100 ಟೆಸ್ಟ್ ಪಂದ್ಯಗಳನ್ನು ಪೂರೈಸ ಬಹುದಿತ್ತು. ಆದರೆ ಇದಕ್ಕಾಗಿ ನಾನು ಕಾಯಲಾರೆ. ನಮ್ಮ ಕನಸು ಯಾವತ್ತೂ ಒಂದು ಮಿತಿಯಲ್ಲಿರಬೇಕು. ಇಷ್ಟು ಕಾಲ ದೇಶವನ್ನು ಪ್ರತಿನಿಧಿಸಿದ ತೃಪ್ತಿ ಇದೆ’ ಎಂಬುದಾಗಿ ಹೆರಾತ್ ಈ ಸಂದರ್ಭ ಹೇಳಿದ್ದಾರೆ.
7ನೇ ಬೌಲಿಂಗ್ ಸಾಧಕ
800 ವಿಕೆಟ್‌ಗಳ ಸರದಾರ ಮುತ್ತಯ್ಯ ಮುರಳೀಧರನ್ ಬಳಿಕ ಶ್ರೀಲಂಕಾದ ಅತ್ಯಂತ ಯಶಸ್ವಿ ಬೌಲರ್ ಆಗಿ ಮೂಡಿಬಂದ ರಂಗನ ಹೆರಾತ್, ಈವರೆಗಿನ 92 ಟೆಸ್ಟ್‌ಗಳಿಂದ 430 ವಿಕೆಟ್ ಉರುಳಿಸಿದ್ದಾರೆ. ಸಮಕಾಲೀನ ಬೌಲರ್‌ಗಳಲ್ಲಿ ಜೇಮ್ಸ್ ಆ್ಯಂಡರ್ಸನ್ (564) ಮತ್ತು ಸ್ಟುವರ್ಟ್ ಬ್ರಾಡ್ (433) ಅನಂತರದ ಸ್ಥಾನದಲ್ಲಿದ್ದಾರೆ.
ಸರ್ವಾಧಿಕ ವಿಕೆಟ್ ಉರುಳಿಸಿದ ಸಾಧಕರ ಯಾದಿಯಲ್ಲಿ ಹೆರಾತ್‌ಗೆ 7ನೇ ಸ್ಥಾನ. ಅಂತಿಮ ಟೆಸ್ಟ್‌ನಲ್ಲಿ ಅವರು ರಿಚರ್ಡ್ ಹ್ಯಾಡ್ಲಿ (431), ಸ್ಟುವರ್ಟ್ ಬ್ರಾಡ್ (432) ಮತ್ತು ಕಪಿಲ್‌ದೇವ್ (434) ಅವರ ಸಾಧನೆಯನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಅಲ್ಲದೇ ಗಾಲೆಯಲ್ಲಿ 100ನೇ ಟೆಸ್ಟ್ ವಿಕೆಟ್ ಉರುಳಿಸುವ ಸುವರ್ಣಾವಕಾಶವೂ ಇವರ ಮುಂದಿದೆ. ಇದಕ್ಕೆ ಬೇಕಿರುವುದು ಒಂದು ವಿಕೆಟ್ ಮಾತ್ರ. ಗಾಲೆಯಲ್ಲಿ 100 ವಿಕೆಟ್ ಉರುಳಿಸಿದ ಏಕೈಕ ಸಾಧಕನೆಂದರೆ ಮುರಳೀಧರನ್.