Advertisement

ಲಂಕಾ ಪ್ರಧಾನಿಗೆ ಕಂಬಳದ ಉಡುಗೊರೆ!

08:17 AM Nov 23, 2017 | |

ಮಂಗಳೂರು: ಶ್ರೀ ಕ್ಷೇತ್ರ ಕೊಲ್ಲೂರಿನಿಂದ ಹಿಂದಿರುಗುವ ಹಾದಿಯಲ್ಲಿ ಮಂಗಳವಾರ ರಾತ್ರಿ ನಗರದ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ ಸಿಂಘೆ ಅವರು ಬುಧ ವಾರ ಬೆಳಗ್ಗೆ 9.05ರ ಜೆಟ್‌ಏರ್‌ವೆಸ್‌ ವಿಮಾನದಲ್ಲಿ ಹೊಸದಿಲ್ಲಿಗೆ ತೆರಳಿದರು.

Advertisement

ವಿದೇಶದ ಪ್ರಧಾನಿಯೊಬ್ಬರು ಮಂಗಳೂರಿನಲ್ಲಿ ರಾತ್ರಿ ತಂಗಿರುವುದು ಮಂಗಳೂರಿನ ಇತಿಹಾಸದಲ್ಲಿ  ಪ್ರಥಮ. ಮಂಗಳವಾರ ಮಧ್ಯಾಹ್ನ ನಗರದ ಗೇಟ್‌ವೇ ಹೊಟೇಲ್‌ಗೆ ಆಗಮಿಸಿದ ಅವರು ಬುಧವಾರ ಬೆಳಗ್ಗಿನವರೆಗೂ ಅಲ್ಲಿಯೇ ವಿಶ್ರಾಂತಿ ಪಡೆದರು. ಅವರ ಪತ್ನಿ ಮಂಗಳವಾರ ಸಂಜೆ ಪೊಲೀಸ್‌ ಭದ್ರತೆಯೊಂದಿಗೆ ಕೊಡಿಯಾಲ್‌ಬೈಲ್‌ ಪರಿಸರದಲ್ಲಿ ಶಾಪಿಂಗ್‌ ನಡೆಸಿದರು. ಬುಧವಾರ ಮುಂಜಾನೆ ದಕ್ಷಿಣ ಭಾರತದ ಉಪಾಹಾರ ಸೇವಿಸಿ ಪತ್ನಿ ಸಮೇತರಾಗಿ ಹೊಟೇಲ್‌ನ ಸ್ವಾಗತ ಕೊಠಡಿಗೆ ಆಗಮಿಸಿ ಅಲ್ಲಿದ್ದ ಕೆಲವರ ಜತೆಗೆ ಉಭಯ ಕುಶಲೋಪರಿ ನಡೆಸಿದರು. ತಮಗೆ ಒದಗಿಸಿದ ಖಾದ್ಯಗಳು ಹಾಗೂ ತಿಂಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಂಗಳೂರು ಜನರ ಪ್ರೀತಿಗೆ ಅಭಿನಂದನೆ ಸಲ್ಲಿಸಿದರು.

ಬಳಿಕ ಹೊಟೇಲ್‌ನ ಪ್ರಮುಖರು ಹಾಗೂ ಸಿಬಂದಿ ಜತೆಗೆ ಗುಂಪು ಛಾಯಾ ಚಿತ್ರಕ್ಕೆ ಪೋಸ್‌ ನೀಡಿದರು. ಹೊಟೇಲ್‌ನ ಸೇವೆಯ ಬಗ್ಗೆ ಅಭಿಪ್ರಾಯಗಳನ್ನು ದಂಪತಿ ಹೊಟೇಲ್‌ನ ಪುಸ್ತಕದಲ್ಲಿ ನಮೂದಿಸಿದರು. ದ.ಕ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯ ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.

ಪುಸ್ತಕ ಸ್ಮರಣಿಕೆ
ಹೊಟೇಲ್‌ನ ಪರವಾಗಿ ದ.ಕ. ಜಿಲ್ಲೆಯ ಸಮಗ್ರ ವಿವರಗಳನ್ನು ದಾಖಲಿಸಿರುವ “ಸೌತ್‌ ಕೆನರಾ’ ಎಂಬ ಪುಸ್ತಕವೊಂದನ್ನು ಶ್ರೀಲಂಕಾ ಪ್ರಧಾನಿಗೆ ಕೊಡುಗೆಯಾಗಿ ಹಸ್ತಾಂತರಿಸಲಾಯಿತು.  ಆ ಪುಸ್ತಕದ ಮುಖಪುಟದಲ್ಲಿ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದ ಚಿತ್ರವಿದೆ. ಅದನ್ನು ನೋಡಿ ಕುತೂಹಲದಿಂದ ಪ್ರಧಾನಿ ಕಂಬಳದ ವೈಶಿಷ್ಟ ದ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಪೊಲೀಸ್‌ ಭದ್ರತೆ ಯೊಂದಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದರು.

ಶ್ರೀಲಂಕಾ ಪ್ರಧಾನಿ ಜತೆಗೆ ಪತ್ನಿ, ಓರ್ವ ಸಚಿವ ಹಾಗೂ ನಾಲ್ವರು ಅಧಿಕಾರಿಗಳು ಜತೆಗಿದ್ದರು. ಆದರೆ ಬುಧವಾರ ಬೆಳಗ್ಗೆ ಪ್ರಧಾನಿ ಸೇರಿದಂತೆ ಐವರು ಜೆಟ್‌ಏರ್‌ವೆಸ್‌ ಮೂಲಕ ಹೊಸದಿಲ್ಲಿಗೆ ತೆರಳಿದರೆ, ಇಬ್ಬರು ಬೆಂಗಳೂರು ವಿಮಾನದಲ್ಲಿ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next