ಕೊಲಂಬೋ: ನಾಟಕೀಯ ಬೆಳವಣಿಗೆಯೊಂದರಲ್ಲಿ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸ ಅವರು ಲಂಕಾ ಸಂಸತ್ ಅಧಿವೇಶನವನ್ನು ದಿಢೀರ್ ಒಂದು ವಾರಗಳ ಅಮಾನತ್ತಿನಲ್ಲಿಟ್ಟು, ಸಿಂಗಾಪುರಕ್ಕೆ ತೆರಳಿರುವ ಘಟನೆ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:20 ವರ್ಷದಿಂದ ತೆಂಗಿನ ಕಾಯಿ ವ್ಯಾಪಾರದಲ್ಲಿ ಸೈ ಎನಿಸಿಕೊಂಡ ವಸಂತ ನಾಯ್ಕ
ಸಂಸತ್ ಅಧಿವೇಶನವನ್ನು ಒಂದು ವಾರಗಳ ಕಾಲ ಅಮಾನತಿನಲ್ಲಿಟ್ಟಿರುವ ಅಧ್ಯಕ್ಷ ರಾಜಪಕ್ಸ ಅವರ ನಿರ್ಧಾರದ ಬಗ್ಗೆ ಶ್ರೀಲಂಕಾ ಸರ್ಕಾರ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ನಿಗದಿಯಂತೆ ಸಂಸತ್ ಕಲಾಪ ಶುಕ್ರವಾರ ಅಂತ್ಯಗೊಂಡಿತ್ತು.
ಇದಾದ ನಂತರ ಜನವರಿ 11ರಿಂದ ಸಂಸತ್ ಅಧಿವೇಶನ ಆರಂಭವಾಗಬೇಕಿದ್ದು, ಅಧ್ಯಕ್ಷ ರಾಜಪಕ್ಸ ಅವರು ದಿಢೀರನೆ ಒಂದು ವಾರಗಳ ಕಾಲ ಅಧಿವೇಶನ ಮುಂದೂಡಿದ್ದರಿಂದ ಜನವರಿ 18ರಿಂದ ಆರಂಭವಾಗಲಿದೆ ಎಂದು ವರದಿ ವಿವರಿಸಿದೆ.
ವಿಶೇಷ ಗಜೆಟ್ ನೋಟಿಫಿಕೇಶನ್ ಮೂಲಕ ಸಂಸತ್ ಅಧಿವೇಶನವನ್ನು ಅಮಾನತುಗೊಳಿಸಿರುವುದಾಗಿ ಡಿಸೆಂಬರ್ 12ರಂದು ಆದೇಶ ಹೊರಡಿಸಿದ್ದರು. ಸಂಸತ್ ಅಧಿವೇಶನ ಮುಂದೂಡಿದ ಬಳಿಕ ಗೋಟಬಯಾ(72) ಅವರು ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ವರದಿ ಹೇಳಿದೆ.
ರಾಜಪಕ್ಸ ಅವರ ಸಿಂಗಾಪುರ್ ಭೇಟಿ ಖಾಸಗಿಯಾಗಿದ್ದು, ಇದೊಂದು ವೈದ್ಯಕೀಯ ಉದ್ದೇಶದ ಭೇಟಿಯಾಗಿರಬೇಕು ಎಂದು ಶ್ರೀಲಂಕಾ ಅಧ್ಯಕ್ಷರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಧ್ಯಕ್ಷ ಗೋಟಬಯಾ ಅವರ ಗೈರುಹಾಜರಿಯಿಂದಾಗಿ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಎರಡು ಪ್ರಮುಖ ವಿಚಾರಗಳ ಚರ್ಚೆಯನ್ನು ಕೈಗೆತ್ತಿಕೊಂಡಿಲ್ಲ ಎಂದು ಇಂಧನ ಸಚಿವ ಉದಯ್ ಗಮ್ಮನ್ ಪಿಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.