ಕೊಲಂಬೋ : ದ್ವೀಪ ರಾಷ್ಟ್ರ ಶ್ರೀಲಂಕಾ ದೇಶದ ಪ್ರಧಾನ ಮಂತ್ರಿ ಮಹಿಂದ್ರ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ದೇಶದ ಆರ್ಥಿಕ ಅಸ್ಥಿರತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಇದೀಗ ದೇಶದಲ್ಲಿ ಆರ್ಥಿಕ ಅಸ್ಥಿರತೆ ಜೊತೆಯಲ್ಲೇ ರಾಜಕೀಯ ಅಸ್ಥಿರತೆ ಕೂಡಾ ಎದುರಾದಂತಾಗಿದೆ.
ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಂತೂ ಉದ್ವಿಗ್ನ ಸ್ಥಿತಿ ನೆಲೆಯೂರಿದೆ.
ಶ್ರೀಲಂಕಾದಲ್ಲಿ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಅಭಾವವಿದೆ. ಪೆಟ್ರೋಲ್, ಡೀಸೆಲ್ ಕೂಡಾ ಸಿಗುತ್ತಿಲ್ಲ. ಇನ್ನು ಆಹಾರ, ಔಷಧಕ್ಕೂ ದ್ವೀಪ ರಾಷ್ಟ್ರದಲ್ಲಿ ಹಾಹಾಕಾರ ಎದುರಾಗಿದೆ. ಶ್ರೀಲಂಕಾ ದೇಶ ಸ್ವಾತಂತ್ರ್ಯ ಪಡೆದ ನಂತರದಿಂದ ಇಲ್ಲಿಯವರೆಗೂ ಇಂಥಾ ಕಠಿಣ ಪರಿಸ್ಥಿತಿ ಎದುರಿಸಿರಲಿಲ್ಲ ಎನ್ನುತ್ತಾರೆ ವಿಶ್ಲೇಷಕರು. ಇದೀಗ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನೂ ನಡೆಸಲು ಸಾಧ್ಯವಾಗದಂಥಾ ಪರಿಸ್ಥಿತಿ ಎದುರಾಗಿದೆ.
ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವವರ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ.
ಶ್ರೀಲಂಕಾ ದೇಶಾದ್ಯಂತ ಈಗ ಕರ್ಫ್ಯೂ ಎದುರಾಗಿದೆ. ಇದರ ನಡುವೆ ಪ್ರಧಾನಿ ರಾಜೀನಾಮೆಯಿಂದ ದೇಶದಲ್ಲಿ ರಾಜಕೀಯ ಅಸ್ಥಿರತೆ ಕೂಡಾ ಎದುರಾದಂತಾಗಿದೆ.