ಹೊಸದಿಲ್ಲಿ: ರಾಮಾಯಣದಲ್ಲಿ ಬರುವ ರಾವಣ, ಭಾರತೀಯರಿಗೆ ರಾಕ್ಷಸನಿರಬಹುದು. ಸೀತೆಯನ್ನು ಕದ್ದೊಯ್ದ ಖಳನಾಯಕನಿರಬಹುದು.
ಆದರೆ, ಶ್ರೀಲಂಕಾನ್ನರಿಗೆ ಆತ ಮಹಾನ್ ರಾಜ, ವಿದ್ವಾಂಸ ಹಾಗೂ ವಿಶ್ವದ ಮೊದಲ ವಾಯುಯಾನಿ.
ಮೊಟ್ಟಮೊದಲ ಬಾರಿಗೆ ವಿಮಾನದ ಮೂಲಕ ಹಾರಾಟ ನಡೆಸಿದ ರಾಜ ಎಂಬ ಬಲವಾದ ನಂಬಿಕೆ ಅವರದು.
5 ಸಾವಿರ ವರ್ಷಗಳಷ್ಟು ಹಿಂದೆಯೇ ಆತ ವಿಮಾನದ ಮೂಲಕ ಹಾರಾಟ ನಡೆಸಿದ್ದ ಎಂದು ಪ್ರತಿಪಾದಿಸುವ ಶ್ರೀಲಂಕಾದ ನಾಗರಿಕ ವಿಮಾನ ಯಾನ ಪ್ರಾಧಿಕಾರ, ಪ್ರಾಚೀನ ಕಾಲದಲ್ಲಿಯೇ ಆತ ವಿಮಾನ ಹಾರಿಸಲು ಬಳಸಿದ ತಂತ್ರಜ್ಞಾನ ಕುರಿತು ಸಂಶೋಧನೆ ಕೈಗೊಳ್ಳಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಪ್ರವಾಸೋದ್ಯಮ ಮತ್ತು ವಾಯುಯಾನ ಸಚಿವಾಲಯ ಪತ್ರಿಕೆಗಳಿಗೆ ಜಾಹೀರಾತೊಂದನ್ನು ನೀಡಿದ್ದು, ರಾವಣನ ಬಗ್ಗೆ ಮಾಹಿತಿ ಇದ್ದರೆ, ರಾವಣನ ಕುರಿತಾದ ದಾಖಲೆಗಳು, ಪುಸ್ತಕಗಳಿದ್ದರೆ ಅದನ್ನು ನಮಗೆ ಕಳುಹಿಸಿಕೊಡಿ. ಪೌರಾಣಿಕ ಹಿನ್ನೆಲೆಯ ರಾಜನ ಕುರಿತಾಗಿ, ಕಳೆದುಹೋದ ಪರಂಪರೆಯ ಕುರಿತಾಗಿ ಅಧ್ಯಯನ ನಡೆಸಲು, ಸಂಶೋಧನೆ ಕೈಗೊಳ್ಳಲು ಇದು ನಮಗೆ ನೆರವಾಗಬಹುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಶಶಿ ದನಾತುಂಗೆ, ರಾವಣ, ವಿಶ್ವದ ಮೊದಲ ವಾಯುಯಾನಿ ಎಂಬುದು ಪುರಾಣದ ಕತೆಯಲ್ಲ. ಸತ್ಯ ಸಂಗತಿ. ಇದಕ್ಕೆ ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ ಇದನ್ನು ಸಾಬೀತುಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಮಧ್ಯೆ, ಶ್ರೀಲಂಕಾ ಇತ್ತೀಚೆಗೆ ಮೊದಲ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ್ದು, ಅದಕ್ಕೆ ರಾವಣನ ಹೆಸರಿಟ್ಟಿದೆ.