Advertisement

ಮೂರನೇ ಪಂದ್ಯದಲ್ಲಿ ಶ್ರೀಲಂಕಾಗೆ ಜಯದ ಸಿಹಿ

07:44 AM Jun 11, 2019 | Suhan S |

ಬೆಳಗಾವಿ: ಮೂರನೇ ಪಂದ್ಯದಲ್ಲಿ ಕೆಲವೇ ಕೆಲ ನಿಮಿಷಗಳ ಕಾಲ ಬಿದ್ದ ಜಿನುಗು ಮಳೆ ಶ್ರೀಲಂಕಾದ ಅದೃಷ್ಟ ಬದಲಾಯಿಸಿ ಗೆಲುವಿನ ಜಯಭೇರಿ ಬಾರಿಸುವಂತಾಯಿತು.

Advertisement

ಗೆಲುವಿನ ಗುರಿ ಕಠಿಣ ಎನಿಸಿದರೂ ಭಾರತ ಎ ತಂಡದ ದುರ್ಬಲ ಬೌಲಿಂಗ್‌ ಹಾಗೂ ಸಡಿಲ ಕ್ಷೇತ್ರ ರಕ್ಷಣೆಯ ಲಾಭ ಪಡೆದ ಶ್ರೀಲಂಕಾ ಎ ತಂಡ ಬೆಳಗಾವಿಯಲ್ಲಿ ನಡೆದ ಮೂರನೇ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿ ಸರಣಿಯ ಉಳಿದ ಪಂದ್ಯಗಳನ್ನು ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಇಲ್ಲಿನ ಅಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 291 ರನ್‌ ಗಳಿಸಿತ್ತು. ಇದಕ್ಕೆ ಉತ್ತರವಾಗಿ ದಿಟ್ಟ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶ್ರೀಲಂಕಾ ಮಳೆಬಂದ ಕಾರಣ ಡಕ್‌ವರ್ತ್‌ ನಿಯಮದಂತೆ ಬದಲಾದ ಗೆಲವಿನ ಗುರಿಯನ್ನು ಸುಲಭವಾಗಿ ತಲುಪಿ ಜಯದ ನಗೆ ಬೀರಿತು. ಡಕ್‌ವರ್ತ ನಿಯಮದಂತೆ 46 ಓವರ್‌ಗಳಲ್ಲಿ 266 ರನ್‌ ಗಳಿಸಬೇಕಿದ್ದ ಶ್ರೀಲಂಕಾ 43.5 ಓವರ್‌ಗಳಲ್ಲಿಯೇ ಈ ಗುರಿ ತಲುಪಿತು.

ಐದು ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಈಗ ಭಾರತ 2-1 ರಿಂದ ಮುನ್ನಡೆಯಲ್ಲಿದೆ. ಉಳಿದ ಎರಡು ಪಂದ್ಯಗಳು ಹುಬ್ಬಳ್ಳಿಯಲ್ಲಿ ಜೂ.13 ಹಾಗೂ 15 ರಂದು ನಡೆಯಲಿವೆ.

ಶ್ರೀಲಂಕಾ ತಂಡಕ್ಕೆ ಮತ್ತೆ ಆಸರೆಯಾಗಿ ಬಂದ ಸೇಹಾನ್‌ ಜಯಸೂರ್ಯ ಹಾಗೂ ದಸೂನ್‌ ಶನಾಕಾ ಮುರಿಯದ ನಾಲ್ಕನೇ ವಿಕೆಟ್‌ಗೆ ಅತ್ಯಮೂಲ್ಯ 61 ರನ್‌ ಸೇರಿಸಿ ಮೈದಾನದಲ್ಲಿ ತಂಡಕ್ಕೆ ಮೊದಲ ಜಯದ ಸವಿ ನೀಡಿದರು. ಒಟ್ಟು 67 ಎಸೆತಗಳನ್ನು ಎದುರಿಸಿದ ಜಯಸೂರ್ಯ ತಮ್ಮ ಅಜೇಯ 66 ರನ್‌ಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್‌ ಹೊಡೆದರೆ ದಸುನ್‌ ಶನಾಕಾ ಕೇವಲ 22 ಎಸೆತ್‌ಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ಸಹಾಯದಿಂದ ಅಜೇಯ 36 ರನ್‌ ಗಳಿಸಿದರು.ಕೊನೆಯ 3 ಓವರ್‌ನಲ್ಲಿ ಶ್ರೀಲಂಕಾದ ಈ ಜೋಡಿ ಭಾರತದ ಬೌಲರ್‌ಗಳನ್ನು ಮನಸಾರೆ ದಂಡಿಸಿದರು. ಇಬ್ಬರೂ ಬ್ಯಾಟ್ಸಮನ್‌ಗಳಿಂದ ಪೈಪೋಟಿಯ ಮೇಲೆ ಸಿಕ್ಸರ್‌ಗಳು ಬಂದವು. ಮಳೆಯಿಂದ 20 ನಿಮಿಷ ಸ್ಥಗಿತಗೊಂಡು ಮತ್ತೆ ಆಟ ಆರಂಭವಾದಾಗ ಡಕ್‌ವರ್ತ್‌ ನಿಯಮದಂತೆ ಶ್ರೀಲಂಕಾಗೆ 46 ಓವರ್‌ಗಳನ್ನು ಸೀಮಿತಗೊಳಿಸಿ ಜಯದ ಗುರಿಯನ್ನು 266 ರನ್‌ಗೆ ನಿಗದಿಪಡಿಸಲಾಯಿತು. ಈ ಗುರಿಯನ್ನು ಆತ್ಮವಿಶ್ವಾಸದಿಂದಲೇ ಸ್ವೀಕರಿಸಿದ ಲಂಕಾ ಆಟಗಾರರು ಪಂದ್ಯದ 41 ನೇ ಓವರಿನಲ್ಲಿಯೇ ಜಯ ಖಾತ್ರಿ ಮಾಡಿಕೊಂಡರು. ಇಶಾನ್‌ ಅವರ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್‌ ಎತ್ತಿದ ದಸುನ್‌ 42ನೇ ಓವರ್‌ನಲ್ಲಿ ವಾರಿಯರ್‌ ಬೌಲಿಂಗ್‌ನಲ್ಲಿ ನೇರ ಸಿಕ್ಸರ್‌ ಬಾರಿಸುವ ಮೂಲಕ ಲಂಕಾ ಶಿಬಿರದಲ್ಲಿ ಸಂತಸ ಮೂಡಿಸಿದರು. ಆಗ ಶ್ರೀಲಂಕಾ ಸ್ಕೋರು 4 ವಿಕೆಟ್ ನಷ್ಟಕ್ಕೆ 247 ಇತ್ತು. ನಂತರ ಕರ್ನಾಟಕದ ಶ್ರೇಯಸ್‌ ಅವರ ಬೌಲಿಂಗ್‌ನಲ್ಲಿ ತಮ್ಮ 3ನೇ ಸಿಕ್ಸರ್‌ ಎತ್ತಿದರು. 43. 5 ನೇ ಓವರಿನಲ್ಲಿ ಸೇಹಾನ್‌ ಜಯಸೂರ್ಯ ಒಂದು ರನ್‌ ಗಳಿಸುವ ಮೂಲಕ ಶ್ರೀಲಂಕಾ ವಿಜಯದ ಕೇಕೆ ಹಾಕಿತು.

Advertisement

ಇದಕ್ಕೂ ಮುನ್ನ ಮೊದಲ ಜೋಡಿ ನಿರೋಶನ್‌ ಡಿಕ್ವೆಲ್ಲಾ (62) ಹಾಗೂ ಸಂಗೀತ ಕೂರೆ ಶ್ರೀಲಂಕಾಕ್ಕೆ ಒಳ್ಳೆಯ ಆರಂಭವನ್ನೇ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಬಹಳ ಅಗತ್ಯವಾಗಿದ್ದ 82 ರನ್‌ಗಳು ಬಂದವು. ಆಗ ಡಿಕ್ವೆಲ್ಲಾ ಔಟಾದರು. ನಂತರ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಸಂಗೀತ ಕೂರೆ ಮೂರನೇ ವಿಕೆಟ್‌ಗೆ ಸೇಹಾನ್‌ ಜಯಸೂರ್ಯ ಅವರ ಜೊತೆ ಬಹುಮೂಲ್ಯ 10 9 ರನ್‌ ಸೇರಿಸಿದರು. ಒಟ್ಟು 11 ನಿಮಿಷಗಳ ಕಾಲ ಕ್ರೀಸ್‌ದಲ್ಲಿದ್ದ ಸಂಗೀತ 103 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್‌ಗಳ ಸಹಾಯದಿಂದ 88 ರನ್‌ ಗಳಿಸಿದರು.

ವ್ಯರ್ಥವಾದ ಪ್ರಶಾಂತ ಚೋಪ್ರಾ ಶತಕ

ಬೆಳಿಗ್ಗೆ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಭಾರತ ಎ ತಂಡ ಮತ್ತೂಮ್ಮೆ ಪ್ರವಾಸಿ ಲಂಕಾ ಬೌಲರ್‌ಗಳನ್ನು ದಂಡಿಸಿ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 291 ರನ್‌ ಗಳಿಸಿತು. ಕಳೆದ ಪಂದ್ಯದಲ್ಲಿ ಶತಕ ವೀರರಾಗಿದ್ದ ರುತುರಾಜ ಗಾಯಕವಾಡ ಹಾಗೂ ಶುಭಮನ್‌ ಗಿಲ್ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು. ಆದರೆ ಇವರಿಬ್ಬರ ಅನುಪಸ್ಥಿತಿ ಕಾಡದಂತೆ ಪ್ರಶಾಂತ ಮನಮೋಹಕ ಶತಕ ಸಿಡಿಸಿ ತಂಡಕ್ಕೆ ಒಳ್ಳೆಯ ಮೊತ್ತ ಬರುವಂತೆ ನೋಡಿಕೊಂಡರು. ಕಿಶನ್‌ (25) ಅವರೊಂದಿಗೆ ಸರದಿ ಆರಂಭಿಸಿದ ಪ್ರಶಾಂತ ಮೂರನೇ ವಿಕೆಟ್‌ಗೆ ದೀಪಕ್‌ ಹೂಡಾ ಜೊತೆ ಉಪಯುಕ್ತ 109 ರನ್‌ ಸೇರಿಸಿದರು. ಬಿರುಸಿನ ಬ್ಯಾಟಿಂಗ್‌ ಪ್ರದರ್ಶನ ನೀಡಿದ ದೀಪಕ ಹೂಡಾ 64 ಎಸೆತಗಳಲ್ಲಿ 53 ರನ್‌ ಗಳಿಸಿದರು. ಇದರಲ್ಲಿ 3 ಬೌಂಡರಿಗಳಿದ್ದವು. ಭಾರತಕ್ಕೆ ಸವಾಲಿನ ಮೊತ್ತ ಸೇರಿಸಿಕೊಟ್ಟ ಪ್ರಶಾಂತ 100 ಎಸೆತಗಳಲ್ಲಿ ತಮ್ಮ ಆಕರ್ಷಕ ಶತಕ ಪೂರೈಸಿದರು. ತಂಡದ ಮೊತ್ತ 203 ಆಗಿದ್ದಾಗ ಪ್ರಶಾಂತ ನಿರ್ಗಮಿಸಿದರು. ಒಟ್ಟು 125 ಎಸೆತಗಳನ್ನು ಎದುರಿಸಿದ ಚೋಪ್ರಾ 17 ಬೌಂಡರಿಗಳ ಸಹಾಯದಿಂದ 129 ರನ್‌ ಗಳಿಸಿದರು. ಕಳೆದ 2 ಪಂದ್ಯದಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಶ್ರೀಲಂಕಾ ಬೌಲರ್‌ಗಳ ಕಳಪೆ ಆಟ 3ನೇ ಪಂದ್ಯದಲ್ಲೂ ಮುಂದುವರಿಯಿತು. ಆದರೆ ಇದರಲ್ಲೇ ಮಿಂಚಿದ ಚಮಿಕಾ ಕರುಣರತ್ನೆ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿದರು. ಈ ಸರಣಿಯಲ್ಲಿ ಒಂದೇ ಪಂದ್ಯದಲ್ಲಿ 5 ವಿಕೆಟ್ (36 ಕ್ಕೆ 5) ಪಡೆದ ಮೊದಲ ಬೌಲರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌:

ಭಾರತ ಎ ತಂಡ: 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 291. (ಇಶಾನ್‌ ಕಿಶನ್‌ 25. ಪ್ರಶಾಂತ ಚೋಪ್ರಾ 129. ದೀಪಕ ಹೂಡಾ 53. ಶಿವಮ್‌ ದುಬೆ 28. ವಾಷಿಂಗ್ಟನ್‌ ಸುಂದರ 26. ಇತರೆ: 19. ಚಮಿಕಾ ಕುರುಣರತ್ನೆ 36 ಕ್ಕೆ 5.)
ಶ್ರೀಲಂಕಾ ಎ ತಂಡ: 43.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 266 (ನಿರೋಶನ್‌ ಡಿಕ್ವೆಲ್ಲಾ 62. ಸಂಗೀತ ಕೂರೆ 88, ಸೇಹಾನ್‌ ಜಯಸೂರ್ಯ ಅಜೇಯ 66. ದಸುನ್‌ ಶನಾಕಾ ಅಜೇಯ 36. ಶಿವಮ್‌ ದುಬೆ 27 ಕ್ಕೆ 2)
•ಕೇಶವ ಆದಿ
Advertisement

Udayavani is now on Telegram. Click here to join our channel and stay updated with the latest news.

Next