ಕೊಲಂಬೊ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ರವಿವಾರ ನಡೆದ ದ್ವಿತೀಯ ಏಕದಿನ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಶ್ರೀಲಂಕಾ ಸರಣಿ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 8 ವಿಕೆಟಿಗೆ 238 ರನ್ ಗಳಿಸಿದರೆ, ಶ್ರೀಲಂಕಾ 44.4 ಓವರ್‌ಗಳಲ್ಲಿ 3 ವಿಕೆಟಿಗೆ 242 ರನ್ ಬಾರಿಸಿತು.
ಲಂಕಾ ಪರ ಆರಂಭಕಾರ ಆವಿಷ್ಕ ಫೆರ್ನಾಂಡೊ 82 ರನ್ (75 ಎಸೆತ, 9 ಬೌಂಡರಿ, 2 ಸಿಕ್ಸರ್) ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಏಂಜೆಲೊ ಮ್ಯಾಥ್ಯೂಸ್ ಅಜೇಯ 52 ರನ್ ಮಾಡಿದರು.
ಲಸಿತ ಮಾಲಿಂಗ ಅವರ ವಿದಾಯದ ಬಳಿಕ ಮೊದಲ ಏಕದಿನ ಪಂದ್ಯ ಆಡುತ್ತಿರುವ ಲಂಕೆಗೆ ನುವಾನ್ ಪ್ರದೀಪ್, ಇಸುರು ಉದಾನ, ಅಖೀಲ ಧನಂಜಯ ಬೌಲಿಂಗ್‌ನಲ್ಲಿ ನೆರವಾದರು. ಮೂವರೂ ತಲಾ 2 ವಿಕೆಟ್ ಹಾರಿಸಿದರು. 25 ಓವರ್ ಮುಗಿಯುವಷ್ಟರಲ್ಲಿ ಕೇವಲ 88 ರನ್ನಿಗೆ ಬಾಂಗ್ಲಾದ 5 ಮಂದಿ ಪೆವಿಲಿಯನ್ ಸೇರಿಕೊಂಡರು.
ಈ ಹಂತದಲ್ಲಿ ಅನುಭವಿ ಆಟಗಾರ ಮುಶ್ಫಿಕರ್ ರಹೀಂ ತಂಡದ ನೆರವಿಗೆ ನಿಂತರು. ಅಜೇಯರಾಗಿ ಉಳಿದ ರಹೀಂಗೆ ಕೇವಲ 2 ರನ್ ಕೊರತೆಯಿಂದ ಶತಕ ತಪ್ಪಿತು. ಅವರ 98 ರನ್ 110 ಎಸೆತಗಳಿಂದ ಬಂತು. ಇದರಲ್ಲಿ 6 ಬೌಂಡರಿ, ಒಂದು ಸಿಕ್ಸರ್ ಒಳಗೊಂಡಿತ್ತು