ಕೊಲಂಬೊ: ಆರಂಭಕಾರ ಪಾಥುಮ್ ನಿಸ್ಸಂಕ ಅವರ ಅಮೋಘ ಶತಕ ಸಾಹಸದಿಂದ ಆಸ್ಟ್ರೇಲಿಯ ಎದುರಿನ 3ನೇ ಏಕದಿನ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ರವಿವಾರ ರಾತ್ರಿಯ ಈ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 6 ವಿಕೆಟಿಗೆ 291 ರನ್ ಬಾರಿಸಿದರೆ, ಶ್ರೀಲಂಕಾ 48.3 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 292 ರನ್ ಹೊಡೆದು ಜಯಭೇರಿ ಮೊಳಗಿಸಿತು. ಈ ಮೊತ್ತದಲ್ಲಿ ನಿಸ್ಸಂಕ ಕೊಡುಗೆ 137 ರನ್. ಇದು ಅವರ ಮೊದಲ ಏಕದಿನ ಶತಕ. 147 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ, 2 ಸಿಕ್ಸರ್ ಸೇರಿತ್ತು.
ನಿಸ್ಸಂಕ 48ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ಲಂಕಾ ಇನ್ನಿಂಗ್ಸ್ ಬೆಳೆಸಿದರು. ಇವರಿಗೆ ಕುಸಲ್ ಮೆಂಡಿಸ್ ಉತ್ತಮ ಬೆಂಬಲ ನೀಡಿದರು. ಇವರಿಂದ ದ್ವಿತೀಯ ವಿಕೆಟಿಗೆ 213 ರನ್ ಒಟ್ಟುಗೂಡಿತು. ಮೆಂಡಿಸ್ ಕೊಡುಗೆ 87 ರನ್ (85 ಎಸೆತ, 8 ಬೌಂಡರಿ).
ಇದು “ಆರ್. ಪ್ರೇಮದಾಸ ಸ್ಟೇಡಿಯಂ’ನಲ್ಲಿ ಶ್ರೀಲಂಕಾದ ಅತೀ ದೊಡ್ಡ ಯಶಸ್ವಿ ಚೇಸಿಂಗ್ ಆಗಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-6 ವಿಕೆಟಿಗೆ 291 (ಹೆಡ್ ಔಟಾಗದೆ 70, ಫಿಂಚ್ 62, ಕ್ಯಾರಿ 49, ವಾಂಡರ್ಸೆ 49ಕ್ಕೆ 3). ಶ್ರೀಲಂಕಾ-48.3 ಓವರ್‌ಗಳಲ್ಲಿ 4 ವಿಕೆಟಿಗೆ 292 (ನಿಸ್ಸಂಕ 137, ಮೆಂಡಿಸ್ 87, ಧನಂಜಯ 25, ಜೇ ರಿಚರ್ಡ್‌ಸನ್ 39ಕ್ಕೆ 2).
ಪಂದ್ಯಶ್ರೇಷ್ಠ: ಪಾಥುಮ್ ನಿಸ್ಸಂಕ.