ಕೊಲಂಬೋ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ತೀವ್ರ ಇಂಧನ ಕೊರತೆಯ ಹಿನ್ನೆಲೆಯಲ್ಲಿ ಶ್ರೀಲಂಕಾ ಶಿಕ್ಷಣ ಸಚಿವಾಲಯ ಜುಲೈ 04ರಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಒಂದು ವಾರಗಳ ಕಾಲ ರಜೆ ಘೋಷಿಸಿದೆ.
ಇದನ್ನೂ ಓದಿ:ಪುತ್ತೂರು: ಮಗನನ್ನು ಬಸ್‌ಗೆ ಬಿಡಲು ತೆರಳುತ್ತಿರುವ ವೇಳೆ ಅಫಘಾತ; ತಂದೆ ಸಾವು
ಮುಂದಿನ ರಜೆಯ ಅವಧಿಯಲ್ಲಿ ಪಠ್ಯಕ್ರಮವನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಶ್ರೀಲಂಕಾ ಶಿಕ್ಷಣ ಸಚಿವ ತಿಳಿಸಿರುವುದಾಗಿ ವರದಿ ಹೇಳಿದೆ. ಇದಕ್ಕೂ ಮೊದಲು ಜೂನ್ 18ರಂದು ಶ್ರೀಲಂಕಾ ಸರ್ಕಾರ ಎಲ್ಲಾ ಶಾಲಾ, ಕಾಲೇಜುಗಳಿಗೆ ಒಂದು ವಾರ ರಜೆ ಘೋಷಿಸಿತ್ತು.
ಕೊಲಂಬೋ ನಗರ ವ್ಯಾಪ್ತಿಯಲ್ಲಿರುವ, ಇತರ ಪ್ರಾಂತ್ಯಗಳಲ್ಲಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮುಂದಿನ ಒಂದು ವಾರಗಳ ಕಾಲ ರಜೆ ನೀಡಲಾಗಿದೆ ಎಂದು ಡೈಲಿ ಮಿರರ್ ವರದಿ ಮಾಡಿದೆ.
ಈ ಕುರಿತು ಶ್ರೀಲಂಕಾ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ನಿಹಾಲ್ ರಣಸಿಂಘೆ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ಸಾರಿಗೆ ಸಮಸ್ಯೆ ಎದುರಿಸದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರು ಡಿವಿಷನಲ್ ಹಂತದಲ್ಲಿ ಕಡಿಮೆ ಪ್ರಮಾಣದ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಅನುಮತಿ ನೀಡಲಾಗುವುದು ಎಂದು ನಿಹಾಲ್ ತಿಳಿಸಿದ್ದಾರೆ.
1948ರಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ ಸ್ವತಂತ್ರಗೊಂಡ ನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ದೇಶದಲ್ಲಿನ ರಾಜಕೀಯ ಬಿಕ್ಕಟ್ಟಿನಿಂದ ಮಹಿಂದ್ರ ರಾಜಪಕ್ಸೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ತೀವ್ರ ಪ್ರತಿಭಟನೆ, ಹಿಂಸಾಚಾರ ನಡೆದಿತ್ತು. ಇದರ ಪರಿಣಾಮ ರಾಜಪಕ್ಸೆ ರಾಜೀನಾಮೆ ನೀಡಿದ್ದು, ರಣಿಲ್ ವಿಕ್ರಮಸಿಂಘೆ ಅವರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿತ್ತು.