ಮುಂಬೈ: ಜಿಂಬಾಬ್ವೆ ಸರಣಿಯ ಬಳಿಕ ಭಾರತ ತಂಡವು ಶ್ರೀಲಂಕಾ ಪ್ರವಾಸಕ್ಕೆ (Sri Lanka series ಸಿದ್ದವಾಗಿದೆ. ಜಿಂಬಾಬ್ವೆ ಸರಣಿಯಲ್ಲಿ 4-1 ಅಂತರದಿಂದ ಗೆಲುವು ಸಾಧಿಸಿದ ಟೀಂ ಇಂಡಿಯಾ (Team India) ಲಂಕಾ ವಿರುದ್ದ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಈ ತಿಂಗಳ ಅಂತ್ಯಕ್ಕೆ ಆರಂಭವಾಗಲಿರುವ ಸರಣಿಗೆ ಕೆಲವೇ ದಿನಗಳಲ್ಲಿ ತಂಡ ಪ್ರಕಟವಾಗಲಿದೆ.
ಜಿಂಬಾಬ್ವೆ ಸರಣಿಗೆ ಯುವ ಪಡೆಯನ್ನು ಆಡಿಸಲಾಗಿತ್ತು. ಹಿರಿಯ ಆಟಗಾರರೆಲ್ಲಾ ವಿಶ್ರಾಂತಿ ಪಡೆದಿದ್ದರು. ಕೆಲವು ಆಟಗಾರರನ್ನು ಹೊರತುಪಡಿಸಿ ಬಹುತೇಕ ಸೀನಿಯರ್ ಆಟಗಾರರು ಶ್ರೀಲಂಕಾ ಸರಣಿಗೆ ಮರಳಲಿದ್ದಾರೆ. ಕೋಚ್ ಗೌತಮ್ ಗಂಭೀರ್ ಅವರ ಉಸ್ತುವಾರಿಯಲ್ಲಿ ಮೊದಲ ಸರಣಿ ಇದಾಗಲಿದೆ.
ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರು ಟಿ20 ಮಾದರಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಚುಟುಕು ಮಾದರಿಗೆ ಹೊಸ ನಾಯಕನ ನೇಮಕವೂ ಆಗಬೇಕಿದೆ.
ವರದಿಯ ಪ್ರಕಾರ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸಲಾಗುತ್ತದೆ. ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ಭಾರತದ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಅರ್ಶದೀಪ್ ಸಿಂಗ್ ಅವರನ್ನು ಲಂಕಾ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯಿದೆ.
ಮತ್ತೊಂದೆಡೆ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ರಿಷಬ್ ಪಂತ್ ಅವರಂತಹವರು ಇಷ್ಟು ಬೇಗ ತಂಡಕ್ಕೆ ಮರಳುವ ನಿರೀಕ್ಷೆಯಿಲ್ಲ ಎನ್ನುತ್ತಿದೆ ವರದಿ.
ವರದಿಯ ಪ್ರಕಾರ ಹಾರ್ದಿಕ್ ಪಾಂಡ್ಯ ಅವರು ಲಂಕಾ ಪ್ರವಾಸದ ಏಕದಿನ ಸರಣಿಯ ಭಾಗವಾಗಿರುವುದಿಲ್ಲ. ವೈಯಕ್ತಿಕ ಕಾರಣ ನೀಡಿ ಅವರು ಬಿಸಿಸಿಐಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ರೋಹಿತ್ ಶರ್ಮಾ ಅವರು ಲಭ್ಯವಿರದ ಕಾರಣ ಕೆಎಲ್ ರಾಹುಲ್ ಅವರು ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ಇದೇ ವೇಳೆ ಅಶಿಸ್ತಿನ ಕಾರಣದಿಂದ ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್ ಅವರು ಲಂಕಾ ವಿರುದ್ದದ ಏಕದಿನ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಗಂಭೀರ್ ಅವರು ಮೆಂಟರ್ ಆಗಿದ್ದ ಕೆಕೆಆರ್ ತಂಡದಲ್ಲಿ ಶ್ರೇಯಸ್ ಅವರು ನಾಯಕರಾಗಿದ್ದರು ಎನ್ನುವುದು ಗಮನಾರ್ಹ.