Advertisement

ಲಂಕಾ ಸರಕಾರಕ್ಕೆ ಕುತ್ತು; ಅಲ್ಪಮತಕ್ಕೆ ಕುಸಿದ ಬೆಂಬಲ ;41 ಸಂಸದರು ಸಂಸತ್‌ಗೆ ಗೈರು

01:44 AM Apr 06, 2022 | Team Udayavani |

ಕೊಲೊಂಬೊ: ಲಂಕಾ ದ್ವೀಪವನ್ನು ಇನ್ನಿಲ್ಲದಂತೆ ಸುಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬೆಂಕಿ ಈಗ ಮೈತ್ರಿಕೂಟ ಸರಕಾರದ ಬುಡಕ್ಕೇ ಬಿದ್ದಿದೆ. ಮಂಗಳವಾರ ಜರುಗಿದ ಸಂಸತ್‌ ಅಧಿವೇಶನದಲ್ಲಿ ಮೈತ್ರಿಕೂಟ ಸರಕಾರ ಅಲ್ಪಮತಕ್ಕೆ ಕುಸಿದಿರುವುದು ಅತ್ಯಂತ ಸ್ಪಷ್ಟವಾಗಿದ್ದು, ಅಧ್ಯಕ್ಷ ಗೋಟಬಯ ರಾಜಪಕ್ಸ ಸರಕಾರ ಯಾವುದೇ ಕ್ಷಣದಲ್ಲೂ ಪತನವಾಗುವ ಅಪಾಯ ಎದುರಿಸುತ್ತಿದೆ. ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ಇದೇ ಮೊದಲ ಬಾರಿಗೆ ಸಂಸತ್‌ ಅಧಿವೇಶನ ನಡೆದಿದ್ದು, ಮೈತ್ರಿಕೂಟದಲ್ಲಿನ ಕೆಲವು ಪಕ್ಷಗಳು ತಟಸ್ಥ ಧೋರಣೆ ಅನುಸರಿಸಲು ನಿರ್ಧರಿಸಿವೆ. ಬಹುತೇಕ ಸಂಸದರು ಅಧಿವೇಶನಕ್ಕೆ ಗೈರಾಗಿ, ದೂರವೇ ಉಳಿದಿದ್ದರು.

Advertisement

ಬಹುಮತದ ಕೊರತೆ: 2020ರಲ್ಲಿ 150 ಸಂಸದ ಬಲದಿಂದ ಶ್ರೀಲಂಕಾ ಪೊದುಜನ ಪೆರಮುನಾ (ಎಸ್‌ಎಲ್‌ಪಿಪಿ) ಮೈತ್ರಿಕೂಟ ಸರಕಾರ ಅಧಿಕಾರ ಹಿಡಿದಿತ್ತು. ಪ್ರಸ್ತುತ 41 ಸಂಸದರು ಅಧಿವೇಶನ ದಿಂದ ದೂರ ಉಳಿದಿದ್ದರಿಂದಾಗಿ, ಮೈತ್ರಿಕೂಟ ಸರಕಾರದ ಸಂಖ್ಯಾಬಲ 109ಕ್ಕೆ ಕುಸಿತ ಕಂಡಿದೆ. ಸರಳ ಬಹುಮತಕ್ಕೆ 113 ಸ್ಥಾನಗಳ ಬೆಂಬಲ ಆವ ಶ್ಯಕತೆ ಇದ್ದು, 4 ಸ್ಥಾನಗಳ ಕೊರತೆಯನ್ನು ರಾಜಪಕ್ಸ ಸರಕಾರ ಅನುಭವಿಸುತ್ತಿದೆ. ಶ್ರೀಲಂಕಾದ ಸಂಸತ್‌ ಒಟ್ಟು 225 ಸ್ಥಾನಗಳನ್ನು ಹೊಂದಿದೆ.

14 ಸಂಸದರೊಂದಿಗೆ ಸರಕಾರದ ಜತೆ ಕೈಜೋಡಿಸಿದ್ದ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್‌ಎಲ್‌ಎಫ್ಪಿ) ಬೆಂಬಲ ಹಿಂತೆಗೆದುಕೊಂಡಿದ್ದು, ರಾಜ ಪಕ್ಸ ಸರಕಾರಕ್ಕೆ ಬಹುದೊಡ್ಡ ಹಿನ್ನಡೆ ಉಂಟಾಗಿದೆ. 41 ಸಂಸದರ ಗೈರಾಗಿದ್ದಾಗ್ಯೂ, ಎಸ್‌ಎಲ್‌ಪಿಪಿ ಸರಕಾರದ ಸಂಸದ ರೋಹಿತಾ ಅಬೇ ಗುಣವರ್ಧನ, “ಸರಕಾರಕ್ಕೆ ಸಂಪೂರ್ಣ ಬಹು ಮತವಿದೆ. ಕನಿಷ್ಠ 138 ಸಂಸದರು ಸರಕಾರ‌ ಜತೆಗಿದ್ದಾರೆ. ಯಾವುದೇ ಅಪಾಯವಿಲ್ಲ’ ಎಂದೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾರ್ವೆ, ಇರಾಕ್‌ನ ರಾಯಭಾರಿ ಕಚೇರಿ ಬಂದ್‌
ಆರ್ಥಿಕ ದಿವಾಳಿತನದ ಬೆನ್ನಲ್ಲೇ ಶ್ರೀಲಂಕಾ ಸರ್ಕಾರ ನಾರ್ವೆ, ಇರಾಕ್‌ನಲ್ಲಿನ ತನ್ನ ರಾಯಭಾರಿ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಮುಂದಾಗಿದೆ. ಆಸ್ಟ್ರೇಲಿಯಾದಲ್ಲಿನ ಕಾನ್ಸುಲೇಟ್‌ ಜನರಲ್‌ ಹುದ್ದೆಯ ರದ್ದತಿಗೂ ಆದೇಶಿಸಿದೆ. “ಎಪ್ರಿಲ್‌ 30ರಿಂದ ಈ ಆದೇಶ ಜಾರಿಗೆ ಬರಲಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಸಾಗರೋತ್ತರ ರಾಜತಾಂತ್ರಿಕ ಪುನರ್ರಚನೆಯ ಆವಶ್ಯಕತೆ ಮನಗಂಡು ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸರಕಾರ ಸ್ಪಷ್ಟಪಡಿಸಿದೆ.

ಲಂಕಾಕ್ಕೆ ಬೀಸಿದ್ದು ಅರಬ್‌ ಹೋರಾಟದ ಗಾಳಿ?
ಭ್ರಷ್ಟಾಚಾರ, ಹಣದುಬ್ಬರ ವಿರೋಧಿಸಿ, 2010ರಲ್ಲಿ ಅರಬ್‌ ರಾಷ್ಟ್ರಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. “ಅರಬ್‌ ರಾಷ್ಟ್ರಗಳ ಮಾದರಿಯಲ್ಲೇ ಈಗ ಲಂಕೆಯಲ್ಲಿ ಹೋರಾಟ ಶುರುವಾಗಿದೆ’ ಎನ್ನುತ್ತಾರೆ, ಲಂಕಾ ಆರ್ಥಿಕ ತಜ್ಞ ಶಶಿ ದಾನತುಂಗೆ.

Advertisement

“ಅರಬ್‌ ಮಾದರಿಯ ಈ ಹೋರಾಟ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಯುವಕರ ನ್ನೊಳಗೊಂಡ ನೂತನ ಆಡಳಿತ ರಚಿಸುವ ಸಾಧ್ಯತೆ ಇದೆ. ವಿದ್ಯಾವಂತ ಯುವಕರೇ ಅಧಿಕ ಸಂಖ್ಯೆಯಲ್ಲಿ ಪ್ರತಿಭಟನೆಯ ನೇತೃತ್ವ ವಹಿಸುತ್ತಿದ್ದಾರೆ. ಅವರೆಲ್ಲರೂ ಹಳೇ ಊಳಿಗಮಾನ್ಯ ಮತ್ತು ಭ್ರಷ್ಟಾಚಾರ ವ್ಯವಸ್ಥೆ ಕಿತ್ತೂ ಗೆಯಲು ಕಾತರರಾಗಿದ್ದಾರೆ’ ಎಂದು ವಿಶ್ಲೇಷಿಸಿದ್ದಾರೆ.

ಏತನ್ಮಧ್ಯೆ, ಮಂಗಳವಾರ ಜೋರು ಮಳೆಯನ್ನೂ ಲೆಕ್ಕಿಸದೆ ಸಹಸ್ರಾರು ವಿದ್ಯಾರ್ಥಿಗಳು ಬೀದಿಗಿಳಿದು, ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ದೃಶ್ಯ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next