ಕೊಲಂಬೋ: ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ದ್ವೀಪರಾಷ್ಟ್ರದ ಜನರ ಆಕ್ರೋಶ ಭುಗಿಲೆದ್ದ ಪರಿಣಾಮ ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದು, ಗೊಟಬಯ ರಾಜಪಕ್ಸ ನಿವಾಸದಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಕಾರು ಪಲ್ಟಿ : ಎರಡುವರೆ ತಿಂಗಳ ಮಗು ಸ್ಥಳದಲ್ಲೇ ಸಾವು
ಗೊಟಬಯಾ ರಾಜಪಕ್ಸ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿ ಸಾವಿರಾರು ಮಂದಿ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಅಷ್ಟೇ ಅಲ್ಲ ಆರ್ಥಿಕ ಬಿಕ್ಕಟ್ಟಿನಿಂದ ದೇಶ ತತ್ತರಿಸಿ ಹೋಗಿದ್ದು, ಕೂಡಲೇ ರಾಜೀನಾಮೆ ಕೊಡಬೇಕೆಂಬ ಘೋಷಣೆ ಮುಗಿಲುಮುಟ್ಟಿದೆ.
ಮತ್ತೊಂದೆಡೆ ಶ್ರೀಲಂಕಾದಲ್ಲಿ ಪ್ರತಿಭಟನಾಕಾರರ ಆಕ್ರೋಶ, ಅಟ್ಟಹಾಸದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೊಚ್ಚಿಗೆದ್ದ ಪ್ರತಿಭಟನಾಕಾರರು ಸರ್ಕಾರಿ ಆಸ್ತಿ, ಪಾಸ್ತಿಗಳನ್ನು ಪುಡಿಗೈದಿದ್ದು, ಕೆಲವು ಪ್ರತಿಭಟನಾಕಾರರು ಅಧ್ಯಕ್ಷರ ಮನೆಯ ಈಜುಕೊಳದಲ್ಲಿ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಕೆಲವು ಪ್ರತಿಭಟನಾಕಾರರು ಶ್ರೀಲಂಕಾದ ಅಧ್ಯಕ್ಷರ ನಿವಾಸದೊಳಕ್ಕೆ ತೆರಳಿ ಪೀಠೋಪಕರಣ ಧ್ವಂಸಗೊಳಿಸಿದ್ದು, ಶ್ರೀಲಂಕಾದ ಅಧಿಕೃತ ಧ್ವಜವನ್ನು ಕೈಯಲ್ಲಿ ಹಿಡಿದು ಹಾರಾಡಿಸುತ್ತಿರುವ ದೃಶ್ಯ ಕೂಡಾ ಸೆರೆಯಾಗಿದೆ. ಅಷ್ಟೇ ಅಲ್ಲ ಶ್ರೀಲಂಕಾ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಹಲವರು ಸೆಲ್ಫಿ ತೆಗೆದುಕೊಂಡಿರುವ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ವರದಿ ತಿಳಿಸಿದೆ.
ಶ್ರೀಲಂಕಾ ಅಧ್ಯಕ್ಷ ಗೊಟಬಯಾ ಪರಾರಿಯಾದ ನಂತರ ಪ್ರತಿಭಟನಾಕಾರರ ವೈರಲ್ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. “ಕೊಲಂಬೊದ ಬಿಸಿಲಿನಿಂದಾಗಿ ಶ್ರೀಲಂಕಾದಲ್ಲಿ ಪ್ರತಿಭಟನಾಕಾರರು ಅಧ್ಯಕ್ಷ ರಾಜಪಕ್ಸ ಅವರ ನಿವಾಸದಲ್ಲಿನ ಈಜುಕೊಳದಲ್ಲಿ ಕೆಲವು ಪರಿಹಾರ ಕಂಡುಕೊಂಡಿರುವುದಾಗಿ” ಟ್ವಿಟರ್ ಬಳಕೆದಾರರೊಬ್ಬರು ಉಲ್ಲೇಖಿಸಿದ್ದಾರೆ.
“ಬೇಜವಾಬ್ದಾರಿಯ ಸಮಾಜವಾದ, ಅಂತ್ಯವಿಲ್ಲದ ಉಚಿತ ಘೋಷಣೆ ಮತ್ತು ಚೀನಾದ ಸಾಲದ ಪರಿಣಾಮ ದ್ವೀಪರಾಷ್ಟ್ರ ದಿವಾಳಿಯಾಗಿದೆ” ಎಂದು ಮತ್ತೊಬ್ಬ ಟ್ವೀಟರ್ ಬಳಕೆದಾರ ಆರೋಪಿಸಿದ್ದಾರೆ.
ಗೊಟಬಯಾ ರಾಜಪಕ್ಸೆ ವಿದೇಶಕ್ಕೆ ಪರಾರಿ?
ಶ್ರೀಲಂಕಾದಲ್ಲಿ ಶನಿವಾರ ನಡೆಯಲಿರುವ ಪ್ರತಿಭಟನೆ ಹಿಂಸಾಚಾರಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಶುಕ್ರವಾರ ರಾತ್ರಿ ತನ್ನ ಕುಟುಂಬದೊಂದಿಗೆ ಸೇನಾ ನೆಲೆಯಲ್ಲಿ ಆಶ್ರಯ ಪಡೆದಿದ್ದು, ಶನಿವಾರ ಹಡಗಿನ ಮೂಲಕ ಪರಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ರಾಜಪಕ್ಸೆ ತನ್ನ ಕುಟುಂಬದೊಂದಿಗೆ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಇದ್ದಿರುವುದಾಗಿ ಕೆಲವು ವರದಿಗಳು ಹೇಳಿವೆ.