ಬುಲವಾಯೊ : ಇಲ್ಲಿನ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಭಾನುವಾರ ನಡೆದ ವಿಶ್ವಕಪ್ ಅರ್ಹತಾ ಸೂಪರ್ ಸಿಕ್ಸ್ ಪಂದ್ಯದಲ್ಲಿ ಅಮೋಘ ಆಟವಾಡಿದ ಶ್ರೀಲಂಕಾ ತಂಡ ಜಿಂಬಾಬ್ವೆ ಎದುರು 9 ವಿಕೆಟ್‌ಗಳಿಂದ ಅಮೋಘ ಗೆಲುವು ಸಾಧಿಸಿ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಆಡುವ ಅರ್ಹತೆ ಪಡೆದಿದೆ.
ಶ್ರೀಲಂಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪ್ರಭಾವಯುತ ಬೌಲಿಂಗ್ ಮಾಡಿದ ಶ್ರೀಲಂಕಾ ಬೌಲರ್‌ಗಳು ಜಿಂಬಾಬ್ವೆಯನ್ನು 165ಕ್ಕೆ ಆಲೌಟ್ ಮಾಡಿದರು. ಸೀನ್ ವಿಲಿಯಮ್ಸ್ 56, ರಾಝಾ 31 ಹೊರತು ಪಡಿಸಿ ಉಳಿದ ಆಟಗಾರರು ರನ್ ಗಳಿಸುವಲ್ಲಿ ಪರದಾಡಿದರು. ಲಂಕಾ ಪರ ಬಿಗು ದಾಳಿ ನಡೆಸಿದ ಎಂ. ತೀಕ್ಷಣ 4 ವಿಕೆಟ್ ಕಬಳಿಸಿದರು ಮತ್ತು ಪಂದ್ಯಪುರುಷ ಎನಿಸಿಕೊಂಡರು. ದಿಲ್ಶನ್ ಮಧುಶಂಕ 3,ಮಥೀಶ ಪತಿರಣ 2 ಮತ್ತು ನಾಯಕ ಶನಕ 1 ವಿಕೆಟ್ ಪಡೆದರು.
ಸುಲಭ ಗುರಿ ಬೆನ್ನಟ್ಟಿದ ಲಂಕಾ 33.1 ಓವರ್ ಗಳಲ್ಲಿ ಏಕಮಾತ್ರ ವಿಕೆಟ್ ಕಳೆದುಕೊಂಡು ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಪಾತುಮ್ ನಿಸ್ಸಾಂಕ ಔಟಾಗದೆ ಅಮೋಘ ಶತಕ ಸಿಡಿಸಿದರು. 102 ಎಸೆತಗಳಲ್ಲಿ 101 ರನ್ ಗಳಿಸಿದ ಅವರು ಭರ್ಜರಿ 14 ಬೌಂಡರಿಗಳನ್ನು ಬಾರಿಸಿದ್ದರು.
ದಿಮುತ್ ಕರುಣರತ್ನೆ30 ರನ್ ಗಳಿಸಿ ಔಟಾದರು.ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಔಟಾಗದೆ 25 ರನ್ ಗಳಿಸಿದರು.
ಜಿಂಬಾಬ್ವೆ ಈಗ ಮಂಗಳವಾರ(July 4) ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಸ್ಕಾಟ್ಲೆಂಡ್ ತಂಡ ವೆಸ್ಟ್ ಇಂಡೀಸ್ ಗೆ ಸೋಲಿನ ಶಾಕ್ ನೀಡಿ ಉತ್ಸಾಹದಲ್ಲಿದೆ.