Advertisement
ಕೊಲಂಬೋದ ಏಕೈಕ ಟೆಸ್ಟ್ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಶ್ರೀಲಂಕಾ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿತು. ಗೆಲುವಿಗೆ 388 ರನ್ ಗುರಿ ಪಡೆದಿದ್ದ ಲಂಕಾ, ಪಂದ್ಯದ ಅಂತಿಮ ದಿನವಾದ ಮಂಗಳವಾರ 6 ವಿಕೆಟಿಗೆ 391 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಲಂಕಾ 3ಕ್ಕೆ 170 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಆಗ ಜಿಂಬಾಬ್ವೆಗೂ ಗೆಲುವಿನ ಉಜ್ವಲ ಅವಕಾಶವಿತ್ತು.
ಆದರೆ 6ನೇ ವಿಕೆಟಿಗೆ ಜತೆಗೂಡಿದ ನಿರೋಷನ್ ಡಿಕ್ವೆಲ್ಲ ಮತ್ತು ಅಸೇಲ ಗುಣರತ್ನೆ ನಿಧಾನವಾಗಿ ಕ್ರೀಸ್ ಆಕ್ರಮಿಸಿಕೊಳ್ಳುವುದರೊಂದಿಗೆ ಪಂದ್ಯದ ಚಿತ್ರಣ ನಿಧಾನವಾಗಿ ಬದಲಾಗತೊಡಗಿತು. ಲಂಕಾ ಗೆಲುವಿನತ್ತ ಒಂದೊಂದೇ ಹೆಜ್ಜೆ ಯನ್ನು ಇಡತೊಡಗಿತು. ಇಬ್ಬರೂ “80 ಪ್ಲಸ್’ ರನ್ ಬಾರಿಸುವುದರೊಂದಿಗೆ 6ನೇ ವಿಕೆಟಿಗೆ 121 ರನ್ ಪೇರಿಸಿದರು.
Related Articles
Advertisement
ಗುಣರತ್ನೆ ಜತೆ ಅಜೇಯರಾಗಿ ಉಳಿ ದವರು 29 ರನ್ ಮಾಡಿದ ದಿಲುವಾನ್ ಪೆರೆರ. 76 ಎಸೆತ ಎದುರಿಸಿದ ಪೆರೆರ 4 ಬೌಂಡರಿ ಹೊಡೆದರು. ಇವರಿಬ್ಬರ ಮುರಿಯದ 7ನೇ ವಿಕೆಟ್ ಜತೆಯಾಟದಲ್ಲಿ 67 ರನ್ ಒಟ್ಟುಗೂಡಿತು. ಜಿಂಬಾಬ್ವೆ ಪರ ಗ್ರೇಮ್ ಕ್ರೆಮರ್ 150 ರನ್ನಿಗೆ 4 ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸ್ ನಲ್ಲಿ ಕ್ರೆಮರ್ 5 ವಿಕೆಟ್ ಹಾರಿಸಿದ್ದರು. ಒಟ್ಟು 11 ವಿಕೆಟ್ ಕಿತ್ತ ರಂಗನ ಹೆರಾತ್ “ಸರಣಿಶ್ರೇಷ್ಠ’ರೆನಿಸಿದರು.
ಲಂಕಾದಲ್ಲಿ ದಾಖಲೆ ಚೇಸಿಂಗ್ ಇದು ಟೆಸ್ಟ್ ಇತಿಹಾಸದ 5ನೇ ಅತೀ ದೊಡ್ಡ ಹಾಗೂ ಶ್ರೀಲಂಕಾ ನೆಲದ ದಾಖಲೆ ಮೊತ್ತದ ಯಶಸ್ವೀ ಚೇಸಿಂಗ್ ಆಗಿದೆ. ಇದಕ್ಕೂ ಮುನ್ನ 2015ರ ಪಲ್ಲೆಕಿಲೆ ಟೆಸ್ಟ್‌ನಲ್ಲಿ ಪಾಕಿಸ್ಥಾನ 3ಕ್ಕೆ 382 ರನ್ ಬಾರಿಸಿ ಲಂಕಾವನ್ನು ಸೋಲಿಸಿದ್ದು ದಾಖಲೆಯಾಗಿತ್ತು. ಲಂಕಾದ ಈವರೆಗಿನ ದೊಡ್ಡ ಮೊತ್ತದ ಚೇಸಿಂಗ್‌ಗೆ ಸಾಕ್ಷಿಯಾಗಿ ಉಳಿದದ್ದು 2006ರ ದಕ್ಷಿಣ ಆಫ್ರಿಕಾ ವಿರುದ್ಧದ ಕೊಲಂಬೊ ಪಂದ್ಯ. ಇದರಲ್ಲಿ ಲಂಕಾ 9ಕ್ಕೆ 352 ರನ್ ಬಾರಿಸಿ ಒಂದು ವಿಕೆಟ್ ಅಂತರದ ರೋಚಕ ಜಯ ಸಾಧಿಸಿತ್ತು. ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ-356 ಮತ್ತು 377. ಶ್ರೀಲಂಕಾ-346 ಮತ್ತು 6 ವಿಕೆಟಿಗೆ 391 (ಡಿಕ್ವೆಲ್ಲ 80, ಗುಣರತ್ನೆ ಔಟಾಗದೆ 80, ಮೆಂಡಿಸ್ 66, ಕರುಣಾರತ್ನೆ 49, ಕ್ರೆಮರ್ 150ಕ್ಕೆ 4, ವಿಲಿಯಮ್ಸ್ 146ಕ್ಕೆ 2). ಪಂದ್ಯಶ್ರೇಷ್ಠ: ಅಸೇಲ ಗುಣರತ್ನೆ. ಸರಣಿಸ್ರೇಷ್ಠ: ರಂಗನ ಹೆರಾತ್.