ಕೊಲಂಬೊ: ಇಲ್ಲಿ ಭಾನುವಾರ(ಆಗಸ್ಟ್ 4 ) ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಶ್ರೀಲಂಕಾ 32 ರನ್‌ಗಳ ಜಯ ಸಾಧಿಸಿ ತವರಿನಲ್ಲಿ ಪ್ರಾಬಲ್ಯ ಮೆರೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಂಕಾ ಒಂಬತ್ತು ವಿಕೆಟ್‌ಗೆ 240 ರನ್ ಗಳಿಸಲು ಸಾಕಷ್ಟು ಹೋರಾಟ ನಡೆಸಿತು.ಗುರಿ ಬೆನ್ನಟ್ಟಿದ ಭಾರತ ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅವರ ದಾಳಿಗೆ ಸಿಲುಕಿ ಪರದಾಡಿತು.42.2 ಓವರ್ ಗಳಲ್ಲಿ 208 ರನ್ ಗಳಿಗೆ ಆಲೌಟಾಯಿತು. ಮೊದಲ ಆರು ವಿಕೆಟ್ ಗಳನ್ನೂ ಜೆಫ್ರಿ ವಾಂಡರ್ಸೆ ಕಿತ್ತು ಗಮನ ಸೆಳೆದರು.
44 ಎಸೆತಗಳಲ್ಲಿ 64 ರನ್ ಗಳಿಸಿ ಅಬ್ಬರಿಸುತ್ತಿದ್ದ ನಾಯಕ ರೋಹಿತ್ ಶರ್ಮ ಅವರನ್ನು ಜೆಫ್ರಿ ವಾಂಡರ್ಸೆ ಔಟ್ ಮಾಡಿದರು. 35 ರನ್ ಗಳಿಸಿದ್ದ ಗಿಲ್, 14 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರನ್ನು ಎಲ್ ಬಿ ಡಬ್ಲ್ಯೂ ಗೆ ಔಟ್ ಮಾಡಿದರು. ಬೆನ್ನಲ್ಲೇ ಶಿವಂ ದುಬೆ ಅವರನ್ನು ಖಾತೆ ತೆರೆಯುವ ಮುನ್ನವೇ ಎಲ್ ಬಿ ಡಬ್ಲ್ಯೂ ಮಾಡಿದರು. 7 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಅವರನ್ನೂ ಎಲ್ ಬಿ ಡಬ್ಲ್ಯೂ ಮಾಡಿ, ಕೆ.ಎಲ್. ರಾಹುಲ್ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿ ವಾಂಡರ್ಸೆ ಪರಾಕ್ರಮ ಮೆರೆದರು.
ಸಂಕಷ್ಟದ ಕ್ಷಣದಲ್ಲಿ ತಂಡಕ್ಕೆ ಆಧಾರವಾಗಿ ಆಡಿದ ಅಕ್ಷರ್ ಪಟೇಲ್ 44 ರನ್ (44ಎಸೆತ) ಗಳಿಸಿದ್ದ ವೇಳೆ ಅಸಲಂಕಾ ಕ್ಯಾಚ್ & ಬೌಲ್ಡ್ ಮಾಡಿದರು. 15 ರನ್ ಗಳಿಸಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ಅಸಲಂಕಾ ಎಲ್ ಬಿ ಡಬ್ಲ್ಯೂ ಮಾಡಿದರು. ಅಸಲಂಕಾ 3 ವಿಕೆಟ್ ಕಿತ್ತು ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು.
ವೇಗಿ ಸಿರಾಜ್ ಅವರು ಪಾಥುಮ್ ನಿಸ್ಸಂಕ ಅವರನ್ನು ಮೊದಲ ಎಸೆತದಲ್ಲೇ ಪೆವಿಲಿಯನ್ ಗೆ ಕಳುಹಿಸಿ ಆರಂಭಿಕ ಶಾಕ್ ನೀಡಿದರು. ಸ್ಪಿನ್ ಸಹಕಾರಿ ಪಿಚ್‌ನಲ್ಲಿ ಭಾರತದ ಸ್ಪಿನ್ನರ್ ವಾಷಿಂಗ್ಟನ್ 30 ರನ್ ನೀಡಿ 3 ವಿಕೆಟ್ ಕಿತ್ತರು. ಕುಲದೀಪ್ ಯಾದವ್ 33ಕ್ಕೆ 2 ವಿಕೆಟ್ ಪಡೆದು ಲಂಕಾ ಬ್ಯಾಟ್ಸ್ ಮ್ಯಾನ್ ಗಳಿಗೆ ದೊಡ್ಡ ಮೊತ್ತದತ್ತ ಹೋಗದಂತೆ ತಡೆದರು. ಕುಸಾಲ್ ಮೆಂಡಿಸ್ 30 ರನ್ ಕೊಡುಗೆ ಸಲ್ಲಿಸಿ ಔಟಾದರು. ನಾಯಕ ಅಸಲಂಕಾ 25 ರನ್ ಗಳಿಸಿ ಔಟಾದರು.
136 ಕ್ಕೆ 6 ವಿಕೆಟ್ ಕಳೆದುಕೊಂಡ ವೇಳೆ ದುನಿತ್ ವೆಲ್ಲಲಾಗೆ (39) ಮತ್ತು ಕಾಮಿಂದು ಮೆಂಡಿಸ್ (40) ನಡುವೆ ಏಳನೇ ವಿಕೆಟ್‌ಗೆ ಗೆ 72 ರನ್‌ಗಳ ಜತೆಯಾಟ ಉತ್ತಮ ಗುರಿಯತ್ತ ಸಾಗಲು ನೆರವಾಯಿತು. ಅವಿಷ್ಕಾ ಫೆರ್ನಾಂಡೊ 40 ರನ್ ಗಳಿಸಿ ಔಟಾದರು.
ಲಂಕಾ ಆರು ವಿಕೆಟ್‌ಗೆ 136 ರನ್ ಗಳಿಸಿದ್ದ ವೇಳೆ ಮತ್ತೊಮ್ಮೆ ಧೈರ್ಯದ ಕೆಲಸವನ್ನು ಯುವ ಆಟಗಾರ ದುನಿತ್ ವೆಲ್ಲಲಾಗೆ ತೋರಿದರು. 39 ರನ್ ಕೊಡುಗೆ ಸಲ್ಲಿಸಿ ಔಟಾದರು. ಧನಂಜಯ 15 ರನ್ ಗಳಿಸಿದ್ದ ವೇಳೆ ರನೌಟ್ ಆದರು. ಕೊನೆಯ ಐದು ಓವರ್‌ಗಳಲ್ಲಿ ಭಾರತೀಯ ಬೌಲರ್‌ಗಳು ಶ್ರೀಲಂಕಾಕ್ಕೆ 44 ಅಮೂಲ್ಯ ರನ್‌ಗಳನ್ನು ಬಿಟ್ಟುಕೊಟ್ಟರು.
ಭಾರತ T 20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಪರಾಕ್ರಮ ತೋರಿತ್ತು. ಆದರೆ ಏಕದಿನ ಸರಣಿಯ ಮೊದಲ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು.ಮುಂದಿನ ಸರಣಿ ನಿರ್ಣಾಯಕ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ.