ಬೆಳಗಾವಿ: ಅಭಿಮನ್ಯು ಈಶ್ವರನ್ ದ್ವಿಶತಕ (233 ರನ್) ಹಾಗೂ ಅನ್ಮೋಲ್ಪ್ರೀತ್ ಸಿಂಗ್ ಅಜೇಯ ಶತಕ (116 ರನ್) ನೆರವಿನಿಂದ ಶ್ರೀಲಂಕಾ ‘ಎ’ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ‘ಎ’ 5 ವಿಕೆಟ್‌ಗೆ 622ಕ್ಕೆ ಡಿಕ್ಲೇರ್ ಮಾಡಿಕೊಂಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಪ್ರವಾಸಿ ಲಂಕಾ ಆಟಗಾರರು ಭಾರೀ ವೈಫಲ್ಯ ಕಂಡರು. ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಲಂಕಾ 2ನೇ ದಿನದಾಟದ ಅಂತ್ಯಕ್ಕೆ ಪ್ರಮುಖ 4 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿ ಆತಂಕದಲ್ಲಿದೆ.
ಇಲ್ಲಿಯ ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್‌ನಲ್ಲಿ ಭಾರತ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ದ್ವಿಶತಕ ಬಾರಿಸಿದ ಅಭಿಮನ್ಯು ಒಟ್ಟಾರೆ 500 ನಿಮಿಷ ಕ್ರೀಸ್‌ನಲ್ಲಿ ನೆಲೆನಿಂತರು. 22 ಬೌಂಡರಿ, 3 ಸಿಕ್ಸರ್ ನೆರವಿನಿಂದ 317 ಎಸೆತಗಳಲ್ಲಿ 233 ರನ್ ಗಳಿಸಿದರು. ಅನ್ಮೋಲ್ಪ್ರೀತ್ ಶತಕ ಹಾಗೂ ಎಸ್.ಡಿ.ಲಾಡ್ 76 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.
ಕುಸಿದ ಶ್ರೀಲಂಕಾ ‘ಎ’: ಶ್ರೀಲಂಕಾ ‘ಎ’ ಮೊದಲ ಇನಿಂಗ್‌ನ ಆರಂಭದಲ್ಲಿಯೇ ಮುಗ್ಗರಿಸಿತು. ಮಧ್ಯಾಹ್ನ ಬ್ಯಾಟಿಂಗ್ ಆರಂಭಿಸುತ್ತಿದ್ದಂತೆ ಎರಡನೇ ಮುಕ್ತಾಯದೊಳಗೆ 4 ವಿಕೆಟ್ ಕಳೆದುಕೊಂಡು ವೈಫಲ್ಯ ಪ್ರದರ್ಶನ ನೀಡಿತು. ಶಿವಂ ದುಬೆ ಹಾಗೂ ಸಂದೀಪ್ ವಾರಿಯರ್ ಬೌಲಿಂಗ್‌ಗೆ ಲಂಕಾ ತಂಡ ಮುಗ್ಗರಿಸಿತು. ಎದುರಾಳಿಗಳ ಬೌಲಿಂಗ್‌ಗೆ ನಲುಗಿದ ಆರಂಭಿಕ ಆಟಗಾರ ಸಂಗೀತ ಕೂರೆ(0) ಎರಡನೇ ಓವರ್‌ನಲ್ಲಿ ವಾರಿಯರ್ ಎಸೆತದಲ್ಲಿ ಬೌಲ್ಡ್ ಆದರು. ಭಾನುಕಾ ರಾಜಪಕ್ಷ(0) ಕೂಡ ಒಂದೇ ಎಸೆತ ಎದುರಿಸಿ ಶಿವಮ್ ದುಬೆ ಬಾಲಿಂಗ್‌ನಲ್ಲಿ ಪಾಂಚಾಲ್ಗೆ ಕ್ಯಾಚ್ ನೀಡಿದರು. ದುಬೆ ಹಾಗೂ ವಾರಿಯರ್ ತಲಾ 2 ವಿಕೆಟ್ ಕಬಳಿಸಿ ಲಂಕೆಯ ಆಟಗಾರರ ಬೆವರಿಳಿಸಿದರು. ಸದೀರಾ ಸಮರವಿಕ್ರಮ್ 56 ಎಸೆತ ಎದುರುಸಿ 31 ರನ್ ಗಳಿಸಿ ಔಟಾದರು. ನಾಯಕ ಆಶನ್ ಪ್ರಿಯರಂಜನ್ ಹಾಗೂ ನಿರೋಶನ್ ಡಿಕ್‌ವೆಲ್ಲಾ ತಲಾ 22 ರನ್ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಭಾರತ ‘ಎ’ 1ನೇ ಇನಿಂಗ್ಸ್ 622/5 (ಅಭಿಮನ್ಯು 233, ಅನ್ಮೋಲ್ಪ್ರೀತ್ 116*, ಫರ್ನಾಂಡೊ 83ಕ್ಕೆ2), ಶ್ರೀಲಂಕಾ ‘ಎ’ 1ನೇ ಇನಿಂಗ್ಸ್ 28 ಓವರ್‌ಗೆ 83/4 (ಸಮರವಿಕ್ರಮ 31, ನಿರೋಶನ್ 22*,ಶಿವಂ ದುಬೆ 11ಕ್ಕೆ2)
-ಭೈರೋಬಾ ಕಾಂಬಳೆ