ಶಿರಸಿ: ಇಲ್ಲಿನ ಯಕ್ಷ ಸಂಭ್ರಮ ಟ್ರಸ್ಟ್‌ನಿಂದ ತಾಳ ಮದ್ದಲೆ ಸಪ್ತಾಹ ಎಂಟು ದಿನ ನಡೆಯಲಿದೆ. ಶ್ರೀ ಕೃಷ್ಣನ ಕಥಾ ಹಂದರದ ಕಥೆಗಳನ್ನೇ ಆಯ್ದುಕೊಂಡು “ಶ್ರೀಕೃಷ್ಣಾಷ್ಟಕ’ ತಾಳಮದ್ದಲೆಗಳನ್ನು ಆ.6 ರಿಂದ 13ರ ತನಕ ನಿತ್ಯ ಸಂಜೆ 4ರಿಂದ ಹಮ್ಮಿಕೊಳ್ಳಲಾಗಿದೆ.
ಈ ವಿಷಯ ತಿಳಿಸಿದ ಯಕ್ಷ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ, ತಾಳಮದ್ದಲೆ ನಗರದ ಟಿಎಂಎಸ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಏರ್ಪಡಿಸಲಾಗಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಸುಮಾರು 40ಕ್ಕೂ ಅಧಿಕ ಕಲಾವಿದರಿಂದ ತೆಂಕು ಬಡಗಿನ ಸಮ್ಮಿಲನ ಇಲ್ಲಾಗಲಿದೆ ಎಂದಿದ್ದಾರೆ.
ಶ್ರೀಕೃಷ್ಣ ಜನ್ಮದಿಂದ: ಎಂಟೂ ದಿನ ತಾಳಮದ್ದಲೆ ಶ್ರೀಕೃಷ್ಣ ಜನ್ಮದಿಂದ ಶ್ರೀಕೃಷ್ಣಾನುಗ್ರಹದ ತನಕ ನಡೆಯಲಿದೆ. ಆ.6 ರಂದು ಪಾರ್ತಿಸುಬ್ಬ, ಮಟ್ಟಿವಾಸುದೇವ ರಚನೆಯ ಶ್ರೀಕೃಷ್ಣಾವತಾರ ಕಂಸವಧೆ, 7ರಂದು ವಿಷ್ಣು ಭಟ್ಟ ಕಿರಿಕ್ಕಾಡರ ಪಾಂಚಜನ್ಯ, 8ರಂದು ಬಲಿಪ ನಾರಾಯಣ ಭಾಗವತರ ರುಕ್ಮಿಣೀ ಸ್ವಯಂವರ, 9ರಂದು ಪಾರ್ತಿಸುಬ್ಬ, ಹಲಸಿನಳ್ಳಿ ನರಸಿಂಹ ಶಾಸ್ತ್ರಿಗಳ ಪಾರಿಜಾತಾಪಹರಣ ನಡೆಯಲಿದೆ. 10 ರಂದು ಅಜ್ಞಾತ ಕವಿಯ ಅಗ್ರಪೂಜೆ, 11ರಂದು ಹಳೆಮಕ್ಕಿ ರಾಮ, ಸಂಕಯ್ಯ ಭಾಗವತರ ಸತ್ವ ಪರೀಕ್ಷೆ, 12ರಂದು ದೇವಿದಾಸರ ಶ್ರೀಕೃಷ್ಣ ಸಾರಥ್ಯ, 13ರಂದು ಹಲಸಿನಳ್ಳಿ ಹಾಗೂ ದೇವಿದಾಸರ ರಚನೆಯ ಶ್ರೀಕೃಷ್ಣಾನುಗ್ರಹ ತಾಳಮದ್ದಲೆಗಳು ನಡೆಯಲಿವೆ.
ಒಂದೇ ವೇದಿಕೆ, 40 ಕಲಾವಿದರು!: ವೇದಿಕೆ ಒಂದೇ. ಆದರೆ ಎಂಟು ದಿನಗಳಲ್ಲಿ ನಾಡಿನ ಹೆಸರಾಂತ ಕಲಾವಿದರು, ತಾಳಮದ್ದಲೆ ಅರ್ಥದಾರಿಗಳು ವೇದಿಕೆ ಹಂಚಿಕೊಳ್ಳಲಿದ್ದಾರೆ. ಭಾಗವತರಾದ ಕೇಶವ ಹೆಗಡೆ ಕೊಳಗಿ, ರಾಮಕೃಷ್ಣ ಹಿಲ್ಲೂರು, ರಾಘವೇಂದ್ರ ಜನ್ಸಾಲೆ, ಗಣಪತಿ ಭಟ್ಟ, ಅನಂತ ದಂತಳಿಕೆ, ರವಿಚಂದ್ರ ಕನ್ನಡಿಕಟ್ಟೆ, ಮದ್ದಲೆ ವಾದಕರಾದ ಶಂಕರ ಭಾಗವತ, ಎ.ಪಿ. ಪಾಠಕ, ನರಸಿಂಹ ಭಟ್ಟ ಹಂಡ್ರಮನೆ, ಅನಿರುದ್ಧ ಹೆಗಡೆ, ಚೈತನ್ಯ ಪದ್ಯಾಣ, ಚಂಡೆಯಲ್ಲಿ ಭಾರ್ಗವ ಹೆಗ್ಗೊàಡು, ವಿN°àಶ್ವರ ಗೌಡ, ಪ್ರಸನ್ನ ಭಟ್ ಹೆಗ್ಗಾರು ಪಾಲ್ಗೊಳ್ಳುವರು.
ಅರ್ಥದಾರಿಗಳಾಗಿ ವಿದ್ಯಾ ವಾಚಸ್ಪತಿ ಉಮಾಕಾಂತ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ರಂಗಾ ಭಟ್ಟ, ವಿ.ಗಣಪತಿ ಭಟ್ಟ ಸಂಕದಗುಂಡಿ, ಅಶೋಕ ಭಟ್ಟ ಸಿದ್ದಾಪುರ, ವಿ.ರವಿಶಂಕರ ದೊಡ್ನಳ್ಳಿ, ರಾಧಾಕೃಷ್ಣ ಕಲ್ಚಾರ್, ವಿ. ರಾಮಚಂದ್ರ ಭಟ್ಟ, ವಿ.ಬಾಲಚಂದ್ರ ಭಟ್ಟ, ವಿ.ವಿನಾಯಕ ಭಟ್ಟ, ಡಿ.ಕೆ. ಗಾಂವಕರ್, ಮಂಜುನಾಥ ಗೊರಮನೆ, ಎಂ.ವಿ. ಹೆಗಡೆ ಅಮಚಿಮನೆ, ಜಬ್ಟಾರ ಸುಮೋ, ದಿವಾಕರ ಕೆರೆಹೊಂಡ, ವಾದಿರಾಜ ಕಲ್ಲೂರಾಯ, ಸುಬ್ರಾಯ ಕೆರೆಕೊಪ್ಪ, ಎಂ.ಎನ್. ಹೆಗಡೆ ಹಲವಳ್ಳಿ, ಹರೀಶ ಬೊಳಂತಿಮೊಗರು, ಪ್ರದೀಪ ಸಾಮಗ, ಶ್ರೀಧರ ಚಪ್ಪರಮನೆ, ವಿ.ಮಹೇಶ ಭಟ್ಟ, ಗಣೇಶ ಸುಂಕಸಾಳ, ವಿ.ಹಿರಣ್ಯ ವೆಂಕಟೇಶ ಭಟ್ಟ, ಡಾ|ಜಿ.ಎಲ್. ಹೆಗಡೆ ಕುಮಟಾ ಪಾಲ್ಗೊಳ್ಳುವರು.