ಉಡುಪಿಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯೋತ್ಸವಕ್ಕೆ ಇಡೀ ನಗರ ಸ್ವಾಗತ ಗೋಪುರ, ಕೇಸರಿ ಧ್ವಜ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. ಜ.17ರ ಮಧ್ಯಾಹ್ನ ದಿಂದಲೇ ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವದ ಅಧಿಕೃತ ಕಾರ್ಯದ ವಿವಿಧ ಚಟುವಟಿಕೆಗಳು ಆರಂಭವಾಗಲಿದೆ. ರಾತ್ರಿ ಪರ್ಯಾಯ ಮೆರವಣಿಗೆ, ಜ.18ರ ಬೆಳಗ್ಗೆ ಪರ್ಯಾಯ ದರ್ಬಾರ್ ಸಹಿತವಾಗಿ ಸಾಂಪ್ರದಾಯಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಕೊರೊನಾ ಮೂರನೇ ಅಲೆಯ ಕಾಲಘಟ್ಟದಲ್ಲಿ ನಾವಿದ್ದೇವೆ. ರಾಜ್ಯದಲ್ಲಿ ದಿನೇ ದಿನೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಜತೆಗೆ ಜಿಲ್ಲೆಯಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರಕಾರ, ಜಿಲ್ಲಾಡಳಿತವೂ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ. ಇದರ ಮಧ್ಯದಲ್ಲೇ ಪರ್ಯಾಯೋತ್ಸವವೂ ನಡೆಯುತ್ತಿದೆ.
ಎರಡು ದಿನಗಳು ನಡೆಯುವ ಪರ್ಯಾಯೋತ್ಸವ ನಿಮಿತ್ತ ಜಿಲ್ಲಾಡಳಿತ ಹಾಗೂ ಸಮಿತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಪರ್ಯಾಯ ಪೀಠ ಅಲಂಕರಿಸಲಿರುವ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಈಗಾಗಲೇ ಸಾಂಪ್ರದಾಯಿಕವಾಗಿ ತೀರ ಸರಳ ರೀತಿಯಲ್ಲಿ ಪರ್ಯಾಯೋತ್ಸವ ನಡೆಯಲಿದೆ ಮತ್ತು ಇದಕ್ಕೆ ಸಹಕರಿಸುವಂತೆ ನಾಗರಿಕರು, ಭಕ್ತರಲ್ಲಿ ಮನವಿ ಮಾಡಿದ್ದಾರೆ. ಸಾಂಪ್ರದಾಯಿಕ ಆಚರಣೆಗೆ ಹೆಚ್ಚು ಒತ್ತು ನೀಡಿ ಸರಳವಾಗಿಯೇ ಪರ್ಯಾಯೋತ್ಸವ ನಡೆಯಲಿದೆ. ಜ.17ರ ರಾತ್ರಿ 9 ಗಂಟೆ ಅನಂತರ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ.
ಸಾರ್ವಜನಿಕರು, ಭಕ್ತರು ಪರ್ಯಾಯೋತ್ಸವ, ದೇವರ ದರ್ಶನಕ್ಕೆ ಬರುವಾಗ ಸ್ವಯಂ ಜಾಗೃತಿ ವಹಿಸಲೇ ಬೇಕಾಗುತ್ತದೆ. ಕೊರೊನಾ ಲಸಿಕೆಯ ಎರಡು ಡೋಸ್ ಪಡೆದವರು ಮಾತ್ರ ಬರಬೇಕು ಎಂಬ ಮನವಿಯನ್ನು ಈಗಾಗಲೇ ಪರ್ಯಾಯೋತ್ಸವ ಸಮಿತಿ ಮಾಡಿಕೊಂಡಿದೆ. ಆದರೆ ಇದೊಂದು ಉತ್ಸವವಾಗಿರುವುದ ರಿಂದ ಪ್ರತಿಯೊಬ್ಬರ ಪರಿಶೀಲನ ಕಾರ್ಯ ಕಷ್ಟಸಾಧ್ಯ. ಹೀಗಾಗಿ ಸಾರ್ವಜನಿಕರೇ ಸ್ವಯಂ ಜಾಗೃತಿ ನಿಯಮ ಪಾಲನೆ ಮಾಡುವುದು ಮುಖ್ಯವಾಗಿರುತ್ತದೆ. ಕೊರೊನಾ ಪ್ರಕರಣಗಳು ಹೆಚ್ಚಿರುವುದರಿಂದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ.
ಕೊರೊನಾದ ಜತೆಗೆ ಜ್ವರ, ಶೀತ, ಕೆಮ್ಮು ಹಾಗೂ ದಿಢೀರ್ ಅಸ್ವಸ್ಥತೆ ಮೊದಲಾದ ಸಾಂಕ್ರಾಮಿಕ ರೋಗಗಳು ಜಿಲ್ಲೆಯಾದ್ಯಂತ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲೂ ಶೀತ, ಜ್ವರ, ಕೆಮ್ಮು ಹೆಚ್ಚಾಗಿದೆ. ಈ ಬಾರಿ ಚಳಿ ತೀವ್ರತೆಯೂ ಹೆಚ್ಚಿದ್ದರಿಂದ ಹೆಚ್ಚಿನ ಕಡೆ ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡಿದೆ. ಇಂತಹ ಪ್ರತಿಕೂಲ ಸಂದರ್ಭದಲ್ಲಿ ಆರೋಗ್ಯದ ವಿಷಯವಾಗಿ ಸ್ವಯಂ ಜಾಗೃತಿ ಅತ್ಯವಶ್ಯಕವಾಗಿದೆ. ನಾವು ಜಾಗೃತರಾಗಿರುವ ಮೂಲಕ ನಮ್ಮ ಮನೆ, ಕುಟುಂಬ, ಇಡೀ ಸಮಾಜವನ್ನು ಜಾಗೃತವಾಗಿಡಲು ಸಾಧ್ಯ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿ, ಕೊರೊನಾ ನಿಯಮ ಪಾಲಿಸದೇ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ತಪಾಸಣೆ ಸರಿಯಾಗಿ ನಡೆಯದೇ ಇದ್ದರೂ ಸ್ವಯಂ ಜಾಗೃತಿ ಮರೆಯಬಾರದು.
-ಸಂ