Advertisement

ಭಕ್ತರ ಸಂಖ್ಯೆ ಹೆಚ್ಚಳ: ನ. 4ರಿಂದ ಉಡುಪಿ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಸಮಯ ವಿಸ್ತರಣೆ

06:28 PM Nov 01, 2020 | sudhir |

ಉಡುಪಿ: ಶ್ರೀಕೃಷ್ಣಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಭಕ್ತರು ದರ್ಶನ ಪಡೆಯುವ ಅವಕಾಶವನ್ನು ವಿಸ್ತರಿಸಲಾಗುತ್ತಿದೆ.

Advertisement

ಕೊರೊನಾ ಸೋಂಕು ಆರಂಭವಾದ ಬಳಿಕ ಮಾ. 22ರಿಂದ ಭಕ್ತರ ದರ್ಶನವನ್ನು ಬಂದ್‌ ಮಾಡಲಾಗಿತ್ತು. ಸುಮಾರು ಆರು ತಿಂಗಳ ಬಳಿಕ ಸೆ. 28ರಿಂದ ಅಪರಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ಭಕ್ತರಿಗೆ ದೇವಸ್ಥಾನವನ್ನು ತೆರೆಯಲಾಯಿತು. ಈಗ ಬೆಳಗ್ಗೆ 8.30ರಿಂದ 10 ಗಂಟೆ ವರೆಗೆ ಮತ್ತು ಅಪರಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ಭಕ್ತರು ದರ್ಶನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದು ನ. 4ರಿಂದ ಜಾರಿಗೆ ಬರಲಿದೆ.

ಬೆಳಗ್ಗೆ ಶ್ರೀಕೃಷ್ಣಮಠದಲ್ಲಿ ನಡೆಯುವ ಅಲಂಕಾರ ಪೂಜೆಯ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಇದೇಕೆಂದರೆ ಅಲಂಕಾರ ನಡೆಸುವಾಗ ಹಿಂದೆಯೂ ದರ್ಶನಕ್ಕೆ ಅವಕಾಶವಿರುತ್ತಿರಲಿಲ್ಲ. ಇದು ಸುಮಾರು 8.30ರ ವರೆಗೆ ಇರಲಿದೆ. ಇದಾದ ಬಳಿಕ ಮಹಾಪೂಜೆ ವರೆಗೆ ಸುಮಾರು 10 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈಗ ಅಪರಾಹ್ನ 2ರಿಂದ 5 ಗಂಟೆವರೆಗೆ ದರ್ಶನಕ್ಕೆ ಅವಕಾಶವಿತ್ತು. ಅದನ್ನು ಒಂದು ಗಂಟೆ ವಿಸ್ತರಿಸಲಾಗಿದೆ.

ಇದನ್ನೂ ಓದಿ:ಪ್ರತ್ಯೇಕ ತುಳು ರಾಜ್ಯ ಹೋರಾಟವನ್ನು ಬೆಂಬಲಿಸುವುದಿಲ್ಲ: ಕತ್ತಲ್‌ಸಾರ್ ಸ್ಪಷ್ಟನೆ

ಈಗ ನಿತ್ಯ ಎರಡು ಮೂರು ಸಾವಿರ ಭಕ್ತರು ಆಗಮಿಸುತ್ತಿದ್ದಾರೆ. ಇದುವರೆಗೆ ಗರಿಷ್ಠವೆಂದರೆ 3,750 ಭಕ್ತರು ಆಗಮಿಸಿದ್ದರು. ಸಮಯ ವಿಸ್ತರಿಸಿದ್ದ‌ರಿಂದ ಹಿಂದಿನ ದಿನ ಬಂದು ತಂಗುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದುವರೆಗೆ ಅಪರಾಹ್ನದಿಂದಲೇ ದೇವಸ್ಥಾನ ತೆರೆಯುವುದರಿಂದ ಹಿಂದಿನ ದಿನ ರಾತ್ರಿ ಬಂದು ಉಳಿದುಕೊಂಡರೆ ಮರು ದಿನ ಮಧ್ಯಾಹ್ನದವರೆಗೆ ಕಾಯಬೇಕಾಗಿದೆ. ಅಪರಾಹ್ನವೂ ಒಮ್ಮೆಲೆ ಭಕ್ತರ ಸಂಖ್ಯೆ ಹೆಚ್ಚುವುದರಿಂದ ಬೆಳಗ್ಗೆಯೂ ದರ್ಶನ ಮಾಡಿ ಒಂದಿಷ್ಟು ಭಕ್ತರು ತೆರಳಿದರೆ ಅನುಕೂಲವಾಗುತ್ತದೆ.

Advertisement

ಹಿಂದಿನಂತೆ ರಾಜಾಂಗಣ ಬಳಿಯ ಪೂರ್ವದ್ವಾರದಿಂದ ಭೋಜನ ಶಾಲೆ ಮಹಡಿ ಮೇಲಿಂದ ತೆರಳಿ ದರ್ಶನ ಮಾಡಿ ಅದೇ ದಾರಿಯಿಂದ ಹಿಂದಿರುಗಬೇಕು. ಮಾರ್ಗದಲ್ಲಿ ಭಕ್ತರು ಅಪೇಕ್ಷಿಸಿದರೆ ಪ್ರಸಾದವನ್ನು ಕೊಂಡುಕೊಳ್ಳಬಹುದಾಗಿದೆ. ಎಣ್ಣೆ ತಂದುಕೊಡುವ ಭಕ್ತರು ಎಣ್ಣೆಯ ಬದಲು ಎಳ್ಳು ತಂದುಕೊಡಲು ತಿಳಿಸಲಾಗಿದೆ. ಈ ಎಳ್ಳಿನಿಂದಲೇ ಶುದ್ಧ ಎಣ್ಣೆಯನ್ನು ತಯಾರಿಸಿ ದೀಪವನ್ನು ಉರಿಸಲಾಗುತ್ತಿದೆ. ಮಠದ ಕೌಂಟರ್‌ನಲ್ಲಿ ಎಳ್ಳು ಪಡೆದುಕೊಳ್ಳಲು ಅವಕಾಶವಿದ್ದು, ಹೊರಗಿನಿಂದಲೂ ತರಬಹುದಾಗಿದೆ.

ಇದನ್ನೂ ಓದಿ:ಹಿಜ್ಬುಲ್ ಸಂಘಟನೆಯ ಕಾಶ್ಮೀರ ಮುಖ್ಯಸ್ಥನನ್ನು ಎನ್ ಕೌಂಟರ್ ಮೂಲಕ ಹತ್ಯೆಗೈದ ಭದ್ರತಾಪಡೆಗಳು

ನಿಯಮ ಪಾಲನೆ
ಭಕ್ತರ ಸಂಖ್ಯೆ ಹೆಚ್ಚಿದಂತೆ ರಾಜಾಂಗಣದಲ್ಲಿ ಕುಳಿತುಕೊಳ್ಳಲು ಅವಕಾಶಗಳಿವೆ. ಇಲ್ಲಿಂದ ಗುಂಪು ಗುಂಪಾಗಿ ಜನರನ್ನು ಸ್ಯಾನಿಟೈಸ್‌ ಹಾಕಿ ಒಳಗೆ ಬಿಡಲಾಗುತ್ತದೆ. ಎಲ್ಲರೂ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮವನ್ನುಪಾಲಿಸಲಾಗುತ್ತಿದೆ.

2,000 ಪಾಸ್‌ಗೆ ಕೋರಿಕೆ
ಸ್ಥಳೀಯ ಭಕ್ತರಿಗೆ ಅನುಕೂಲವಾಗಲು ರಥಬೀದಿಯ ಮಹಾದ್ವಾರದ ಬಳಿಯಿಂದ ಬಿಡಲಾಗುತ್ತಿದೆ. ಆದರೆ ಇವರಿಗೆ ಶ್ರೀಮಠದಿಂದ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಈ ಪಾಸ್‌ ತೋರಿಸಿದರೆ ಎದುರಿನಿಂದಲೇ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. ಇದುವರೆಗೆ ಸುಮಾರು 2,000 ಭಕ್ತರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ1,600 ಪಾಸುಗಳು ಮುದ್ರಣವಾಗಿ ಬಂದಿದ್ದು ಸುಮಾರು 1,000 ಪಾಸುಗಳನ್ನು ವಿತರಿಸಲಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಗೋವಿಂದರಾಜ್‌ ತಿಳಿಸಿದ್ದಾರೆ.

ಶ್ರೀಕೃಷ್ಣ ದರ್ಶನ ಮಾಡಬೇಕೆಂದು ಭಕ್ತರಿಗೆ ಅಪೇಕ್ಷೆ ಇದೆ. ಸರಕಾರವೂ ದೇವಸ್ಥಾನಗಳನ್ನು ತೆರೆದಿದೆ. ಹೀಗಾಗಿ ನಾವೂ ಇದಕ್ಕೆ ಸ್ಪಂದಿಸಿ ದರ್ಶನದ ವೇಳೆಯನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ.
– ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next