ಉಡುಪಿ: ಶ್ರೀಕೃಷ್ಣ ಮಠದೆದುರಿಗಿನ ಮಳೆ ನೀರು ಹರಿಯುವ ಚರಂಡಿಯನ್ನು ದುರಸ್ತಿಪಡಿಸಲಾಗುತ್ತಿದೆ.
ಇಲ್ಲಿ ನೀರು ಹರಿಯುವಿಕೆ ಸಮಸ್ಯೆಯಾಗಿತ್ತು. ಇದನ್ನು ನಗರಸಭೆ ನಿಧಿಯಿಂದ ದುರಸ್ತಿಪಡಿಸಲಾಗುತ್ತಿದೆ. ಈ ನೀರು ಅದಮಾರು ಮಠ ಅತಿಥಿಗೃಹದ ಬಳಿಯಿಂದ ಹರಿದುಬಂದು ಕಾಣಿಯೂರು ಮಠದ ಪಕ್ಕದ ತೋಡಿನ ಮೂಲಕ ಬೈಲಕೆರೆ ಕಲ್ಸಂಕ ದೊಡ್ಡ ತೋಡಿಗೆ ಸೇರುತ್ತದೆ.
ಚರಂಡಿಯನ್ನು 7.2 ಲ.ರೂ. ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ಕಾಂಕ್ರೀಟ್ ಬೆಡ್ ಹಾಕಿ ಆಚೀಚೆ ಸಮತಟ್ಟುಗೊಳಿಸುವ ಕಾಮಗಾರಿ ಮಾಡಲಾಗುವುದು.
ರಾಷ್ಟ್ರಪತಿಯವರು ಬರುವ ಸಂದರ್ಭ ಜಿಲ್ಲಾಧಿಕಾರಿಯವರಿಗೆ ಇದರ ಬಗ್ಗೆ ತಿಳಿಸಿದ್ದೆವು. ಅವರು ಕೂಡಲೇ ಸ್ಪಂದಿಸಿದರು. ಆದರೆ ನಿಯಮಾವಳಿ ಪ್ರಕಾರ ಕೆಲವು ದಿನಗಳು ಬೇಕಾದವು. ಆಗ ಸಪ್ತೋತ್ಸವ ಆರಂಭಗೊಂಡಿತು. ಹೀಗಾಗಿ ಸಪ್ತೋತ್ಸವ ಮುಗಿದ ಬಳಿಕ ಮಾಡಲು ತಿಳಿಸಿದೆವು. ಈಗ ಕಾಮಗಾರಿ ನಡೆಯುತ್ತಿದೆ ಎಂದು ಶ್ರೀಕೃಷ್ಣಮಠ ಪರ್ಯಾಯ ಶ್ರೀಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ್ ತಿಳಿಸಿದರು.
ಕಾಮಗಾರಿಯನ್ನು ಆದಷ್ಟು ಶೀಘ್ರ ಮುಗಿಸುವುದಾಗಿ ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.