Advertisement

ಶ್ರೀಕೃಷ್ಣಮಠದ ಸರೋವರದಲ್ಲಿ ಸುರಕ್ಷಾ ಸ್ನಾನ ಘಟ್ಟ ನಿರ್ಮಾಣ

12:55 AM Mar 03, 2020 | Sriram |

ಉಡುಪಿ: ಶ್ರೀಕೃಷ್ಣಮಠದ ಮಧ್ವ ಸರೋವರದಲ್ಲಿ ಭಕ್ತರು ಸ್ನಾನಕ್ಕೆಂದು ಇಳಿದಾಗ ಅವಘಡ ಸಂಭವಿಸಬಾರದೆಂಬ ಉದ್ದೇಶಕ್ಕಾಗಿ ಪರ್ಯಾಯ ಶ್ರೀಅದಮಾರು ಮಠದ ವತಿಯಿಂದ ಸುರಕ್ಷಿತ ಸ್ನಾನಘಟ್ಟವನ್ನು ನಿರ್ಮಿಸಲಾಗುತ್ತಿದೆ.

Advertisement

ಇದು ಸರೋವರದ ದಕ್ಷಿಣ ಪಾರ್ಶ್ವದಲ್ಲಿದೆ. ಸರೋವರಕ್ಕೆ ತಾಗಿ ರಥಬೀದಿ ಬದಿಯಿಂದ ಸ್ನಾನ ಘಟ್ಟಕ್ಕೆ ಇಳಿಯಬಹುದು. ಇಲ್ಲೊಂದು ಪ್ರವೇಶ ದ್ವಾರ ನಿರ್ಮಿಸಲಾಗಿದೆ. ಸುಮಾರು ನಾಲ್ಕು ಅಡಿ ಅಗಲದಲ್ಲಿ ಮೆಟ್ಟಿಲುಗಳನ್ನು ಸ್ಟೀಲ್‌ನಲ್ಲಿ ರಚಿಸಲಾಗಿದೆ. ಮೇಲಿಂದ ಸರೋವರದ ಬುಡದವರೆಗೆ 17.5 ಅಡಿ ಇಳಿಜಾರಾಗಿ ಎರಡೂ ಕಡೆ ರೇಲಿಂಗ್‌ ಅಳವಡಿಸಲಾಗಿದೆ. ಸ್ನಾನ ಮಾಡುವವರು ರೇಲಿಂಗ್‌ ಹಿಡಿದು ಮುಳುಗು ಹಾಕಬಹುದು. ಒಬ್ಬರು ಮುಳುಗು ಹಾಕುವಷ್ಟು ನೀರಿಗಿಂತ ಕೆಳಗೆ ಹೋಗದಂತೆ ಅಡ್ಡ ತಡೆ ಹಾಕಲಾಗುತ್ತದೆ. ಈ ತಡೆಗೋಡೆಯನ್ನು ನೀರು ಕೆಳಗೆ ಹೋದಂತೆ ಮತ್ತೆ ಮತ್ತೆ ಕೆಳಗೆ ಅಳವಡಿಸಬಹುದು. ತಡೆ ಇರುವುದರೊಳಗೆ ಮುಳುಗು ಹಾಕಬಹುದು. ಏನೇ ಆದರೂ ಸುತ್ತಲೂ ಸುರಕ್ಷಿತವಾದ ಸ್ನಾನ ಘಟ್ಟ ಆವರಣ ಹೊರತುಪಡಿಸಿ ಸರೋವರದೊಳಗೆ ಹೋಗಲು ಸಾಧ್ಯವಿಲ್ಲ.

ಸ್ನಾನ ಮಾಡಿದ ಬಳಿಕ ಮೇಲೆ ಬಂದು ಜಪ ಮಾಡುವವರು ಮಾಡಬಹುದು. ಇದಕ್ಕೂ ದಂಡೆಯ ಮೇಲೆ ಒಂದಿಷ್ಟು ಸ್ಥಳವನ್ನು ಮೀಸಲಾಗಿಡಲಾಗುತ್ತಿದೆ. ಸ್ನಾನ ಮಾಡಿ ನೇರವಾಗಿ ಹೊರಗೆ ಹೋಗುವವರು ಹೋಗಬಹುದು.

ಇದುವರೆಗೆ ಮಧ್ವಸರೋವರದ ಎದುರು ಭಾಗದಿಂದ ಕೆಳಗಿಳಿದು ಹೋಗಬೇಕಾಗುತ್ತಿತ್ತು. ಬಹಳ ಹಿಂದೆ ಸರೋವರದಲ್ಲಿಳಿದು ಕೈಕಾಲು ತೊಳೆದುಕೊಂಡೇ ದೇವರ ದರ್ಶನ ಮಾಡುವ ಕ್ರಮವಿತ್ತು. ಜನಸಂಖ್ಯೆ ಹೆಚ್ಚಾದಾಗ ಇದನ್ನು ನಿಯಂತ್ರಿಸಬೇಕಾಯಿತು. ಮುಂಜಾವದಲ್ಲಿ ಭಕ್ತರು ಬಂದು ಸ್ನಾನ ಮಾಡುವಾಗ ಅವಘಡಗಳು ಸಂಭವಿಸಿದ ಬಳಿಕ ಗೊತ್ತಾಗುವುದಿತ್ತು. ಸ್ನಾನಕ್ಕೆ ಬಿಡದೆ ಇದ್ದರೆ ಬೇಸರ ವ್ಯಕ್ತಪಡಿಸುತ್ತಾರೆ. ಇದೆಲ್ಲಕ್ಕೂ ತಡೆ ಎಂಬಂತೆ ಏನೇ ಆದರೂ ಅವಘಡ ಆಗದಂತೆ ಈ ಸ್ನಾನಘಟ್ಟವನ್ನು ನಿರ್ಮಿಸಲಾಗಿದೆ. ರೇಲಿಂಗ್‌ ಅಳವಡಿಸಲಾಗಿದ್ದು ಇನ್ನು ಕೆಲವೇ ಕೆಲಸ ಬಾಕಿ ಇದೆ. ಒಂದೆರಡು ದಿನಗಳಲ್ಲಿ ಇಲ್ಲಿ ಸ್ನಾನ ಮಾಡುವ ಅವಕಾಶ ಲಭ್ಯವಾಗಲಿದೆ.

ರಾಸಾಯನಿಕ ಮಿಶ್ರಿತ ಅರಿಶಿನ, ಕುಂಕುಮದ ಪೂಜೆ ಬೇಡ
ಸರೋವರಕ್ಕೆ ಬಂದು ತೊಂದರೆಗೆ ಸಿಲುಕಬಾರದೆಂಬ ಕಾರಣಕ್ಕೆ ಸುರಕ್ಷಿತವಾಗಿ ಸ್ನಾನ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಇಲ್ಲಿ ಎಷ್ಟೋ ಜನರು ಕೆಮಿಕಲ್‌ ಮಿಶ್ರಿತ ಅರಿಶಿನ, ಕುಂಕುಮ, ಹತ್ತಿಯ ಹಾರವನ್ನು ತಂದು ಸಮರ್ಪಿಸುತ್ತಾರೆ. ಇದೆಲ್ಲವೂ ಪುನಃ ನೀರಿಗೆ ಬಿದ್ದು ನೀರು ಮಲಿನವಾಗುತ್ತದೆ. ಸರೋವರದ ನೀರು ಶುದ್ಧವಾಗಿರಬೇಕಾದರೆ, ಯಾರೂ ಅರಿಶಿನ, ಕುಂಕುಮ, ಹತ್ತಿಯ ಹಾರವನ್ನು ಹಾಕಬಾರದು. ಒಂದು ವೇಳೆ ಪೂಜೆ ಮಾಡಬೇಕೆಂದಿದ್ದರೆ ಒಂದು ಚೆಂಬು ನೀರನ್ನು ಇಲ್ಲಿಂದಲೇ ಒಯ್ದು ಮನೆಯಲ್ಲಿ ಪೂಜೆ ಮಾಡಬಹುದು ಎಂದು ನಮ್ಮ ಅಪೇಕ್ಷೆ.
-ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀಅದಮಾರು ಮಠ, ಶ್ರೀಕೃಷ್ಣಮಠ, ಉಡುಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next