Advertisement

ಹರಿಯ ಕಾಣಲು ಜನರು ಹರಿದು ಬಂದರು

06:02 PM Aug 26, 2019 | sudhir |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರ ಅದ್ದೂರಿಯಾಗಿ ಸಂಪನ್ನಗೊಂಡಿತು. ಶ್ರೀಮನ್ನಾರಾಯಣನ ಅಷ್ಟಮಾವತಾರ
ವಾಗಿ ಜನ್ಮವೆತ್ತಿದ ಬಾಲಕೃಷ್ಣನಿಗೆ ಬೆಳಗ್ಗೆ ವಿಶೇಷ ಮಹಾಪೂಜೆ, ರಾತ್ರಿ ಕೃಷ್ಣಾರ್ಘ್ಯ ಪ್ರದಾನ ನೆರವೇರಿತು. ಸಾವಿರಾರು ಭಕ್ತರು ತಮ್ಮದೇ ಮನೆಯ ಕಂದನ ಹುಟ್ಟುಹಬ್ಬವೆಂಬಂತೆ ಸಡಗರದಿಂದ ಭಾಗಿಯಾದರು.

Advertisement

ಯಶೋದಾಲಂಕಾರ
ಪ‌ರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬೆಳಗ್ಗೆ ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಸುವರ್ಣ ತೊಟ್ಟಿಲಿನಲ್ಲಿ ಯಶೋದೆಯು ಬಾಲಕೃಷ್ಣನನ್ನು ಆಟವಾಡಿಸಿದ ಅಲಂಕಾರ ಮಾಡಿ ಪೂಜಿಸಿದರು. ಅನಂತರ ಭೋಜನ ಶಾಲೆಯಲ್ಲಿ ಪರ್ಯಾಯ ಶ್ರೀಗಳು ಮತ್ತು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಶ್ರೀ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಕೃಷ್ಣನಿಗೆ ರಾತ್ರಿ ಪೂಜೆಯ ಸಂದರ್ಭ ಸಮರ್ಪಿಸುವ ಲಡ್ಡುಗೆಗಳ ತಯಾರಿಗೆ ಚಾಲನೆ ನೀಡಿದರು. ಕೃಷ್ಣಾಷ್ಟಮಿಯಂದು ನಿರ್ಜಲ ಉಪವಾಸ ಇರುವ ಕಾರಣ ರಾತ್ರಿಯೂ ಸ್ವಾಮೀಜಿಯವರು ವಿಶೇಷ ಮಹಾಪೂಜೆ ನಡೆಸಿದರು. ಅನಂತರ ಚಂದ್ರೋದಯದ ಹೊತ್ತಿಗೆ 12.12ಕ್ಕೆ ಪರ್ಯಾಯ ಶ್ರೀಗಳು ಶ್ರೀಕೃಷ್ಣಾರ್ಘ್ಯ ಸಮರ್ಪಿಸಿದರು. ಆ ಬಳಿಕ ಸ್ಥಳೀಯ ಮತ್ತು ದೂರದೂರುಗಳಿಂದ ಬಂದ ಭಕ್ತರು ಕೃಷ್ಣಾರ್ಘ್ಯ ಸಮರ್ಪಿಸಿದರು.

ಭಜನೆ, ಸ್ಪರ್ಧೆ, ವೇಷ ಸಡಗರ
ಬೆಳಗ್ಗೆ ವಿಶೇಷ ಭಜನ ಕಾರ್ಯಕ್ರಮ, ಮುದ್ದುಕೃಷ್ಣ ವೇಷ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬೆಳಗ್ಗಿನಿಂದಲೇ ಶ್ರೀಕೃಷ್ಣ ದೇವರ ದರ್ಶನಕ್ಕೆ ಸರದಿ ಸಾಲು ಕಂಡು ಬಂತು.

ರಥಬೀದಿಯಲ್ಲಿಯೂ ಭಕ್ತರು ನೆರೆದಿದ್ದರು. ರಥಬೀದಿಗೆ ಹಲವು ವೇಷಧಾರಿ ತಂಡಗಳು ಆಗಮಿಸಿ ಪರ್ಯಾಯ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡು ಬಳಿಕ ಪ್ರದರ್ಶನ ನೀಡಿದವು. ನಗರದ ವಿವಿಧೆಡೆ ಬ್ಯಾಂಡ್‌, ತಾಸೆಯ ಸದ್ದು, ವೇಷಧಾರಿಗಳ ಆರ್ಭಟ ಕೇಳಿಬಂತು.

Advertisement

ಹೂವಿನ ಅಲಂಕಾರ
ವಿಶೇಷ ಹೂವಿನ ಅಲಂಕಾರದಿಂದ ಶ್ರೀಕೃಷ್ಣ ಮಠವನ್ನು ಸಿಂಗರಿಸಲಾಗಿತ್ತು. ಗರ್ಭಗುಡಿ, ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹಗುಡಿ ಮೊದಲಾದೆಡೆ ವಿಶೇಷವಾಗಿ ಹೂವುಗಳಿಂದ ಮತ್ತು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ವಿವಿಧ ದೇವಸ್ಥಾನಗಳಲ್ಲಿ
ಮನೆ ಮನೆಗಳಲ್ಲಿಯೂ ರಾತ್ರಿ ವೇಳೆ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ ಭಕ್ತರು ಅರ್ಘ್ಯ ಪ್ರದಾನ ಮಾಡಿದರು. ಶ್ರೀ ವೆಂಕಟರಮಣ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳಲ್ಲಿ ರಾತ್ರಿ ಭಜನೆ, ಪೂಜೆ ನಡೆದ ಬಳಿಕ ಅರ್ಘ್ಯಪ್ರದಾನ ನಡೆಯಿತು.

ಪೊಲೀಸ್‌ ಕಣ್ಗಾವಲು
ಶನಿವಾರ ರಥಬೀದಿ ಮತ್ತು ಸುತ್ತಮುತ್ತ ಪೊಲೀಸರು ವಿಶೇಷ ನಿಗಾ ಇರಿಸಲಿದ್ದಾರೆ. ಬಂದೋಬಸ್ತ್¤ಗಾಗಿ ಸುಮಾರು 500 ಪೊಲೀಸರನ್ನು ಜಿಲ್ಲಾಡಳಿತ ನಿಯೋಜಿಸಿದೆ.

ದ.ಕ.: ಭಕ್ತಿ ಸಂಭ್ರಮದ ಜನ್ಮಾಷ್ಟಮಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಶ್ರೀ ಕೃಷ್ಣನಿಗೆ ಪೂಜೆ ಪುನಸ್ಕಾರಗಳು ನಡೆದವು. ಜಿಲ್ಲಾಡಳಿತದ ವತಿಯಿಂದ ನಗರದ ಪುರಭವನ ಶ್ರೀ ಕೃಷ್ಣ ಜನ್ಮಾಷ್ಟಮಿ ಹಮ್ಮಿಕೊಳ್ಳಲಾಯಿತು.

ವಿವಿಧೆಡೆ ಮೊಸರು ಕುಡಿಕೆ ಉತ್ಸವ, ಶ್ರೀ ಕೃಷ್ಣ ವೇಷ ಸ್ಪರ್ಧೆ, ಇಸ್ಕಾನ್‌ ವತಿಯಿಂದ ಶ್ರೀ ಕೃಷ್ಣಾಷ್ಟಮಿ ಆ.24ರಂದು ನಡೆಯಲಿದೆ.

ಇಂದು ವಿಟ್ಲಪಿಂಡಿ ವೈಭವ
ಶನಿವಾರ ಬೆಳಗ್ಗೆ ದ್ವಾದಶಿ ರೀತಿಯಲ್ಲಿ ಪೂಜೆ ನಡೆಯಲಿದೆ. ಶ್ರೀಕೃಷ್ಣ ಮಠದಲ್ಲಿ 3 ಗಂಟೆಯ ವೇಳೆಗೆ ವಿಟ್ಲಪಿಂಡಿ ಉತ್ಸವ ಜರಗಲಿದೆ.

ಗೋಪಾಲಕರಿಂದ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ, ಹುಲಿವೇಷ ಸ್ಪರ್ಧೆ ಸಂಪನ್ನಗೊಳ್ಳಲಿವೆ. ಶ್ರೀಕೃಷ್ಣ ಮೃಣ್ಮಯ ಮೂರ್ತಿ ಸಹಿತ ರಥೋತ್ಸವ ನಡೆಯಲಿದೆ. ಉತ್ಸವದಲ್ಲಿ ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೇಶ್ವರ ದೇಗುಲಗಳ ಉತ್ಸವಮೂರ್ತಿಗಳೂ ಇರುತ್ತವೆ.

ಬೆಳಗ್ಗೆ 10ರಿಂದ ನಗರದ ವಿವಿಧೆಡೆ ಮುಂಬಯಿಯ ಆಲಾರೆ ಗೋವಿಂದ ತಂಡದಿಂದ ದಹೀ ಹಂಡಿ ನಡೆಯಲಿದೆ. ಹುಲಿವೇಷ ಸೇರಿದಂತೆ ವಿವಿಧ ವೇಷಗಳ ಪ್ರದರ್ಶನವಿರುತ್ತದೆ. ಶುಕ್ರವಾರ ವಿಶೇಷ ಭಜನೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿದ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯು ಶನಿವಾರ ಮಧ್ಯಾಹ್ನ ವಿಶೇಷ ಅನ್ನಸಂತರ್ಪಣೆ ಏರ್ಪಡಿಸಿದ್ದು, ಶುಕ್ರವಾರ ಸಂಜೆ ಪರ್ಯಾಯ ಶ್ರೀಗಳು ತರಕಾರಿ ಮುಹೂರ್ತ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next