ಉಡುಪಿ: ಗೋಸಂಕುಲಕ್ಕೆ ಶ್ರೀಕೃಷ್ಣನೇ ಅಭಯ. ಇಂದು ಗೋವುಗಳಿಗೆ ಪ್ರಾಣಾಪಾಯ ಎದುರಾಗಿದೆ. ಹಟ್ಟಿಯಿಂದಲೇ ಗೋವುಗಳನ್ನು ಕರದೊಯ್ಯಲಾಗುತ್ತಿದೆ. ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅವರು ಶ್ರೀಕೃಷ್ಣ ಮಠದ ಪರವಿದ್ಯಾ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಯ ಗೋಯಾತ್ರೆ ಸಂದೇಶ ಸಭೆಯಲ್ಲಿ ಗೋರಕ್ಷಣೆಯ ಪ್ರಮಾಣ ವಚನ ಬೋಧಿಸಿ ಆಶೀರ್ವಚನ ನೀಡಿದರು.
ದೇಶದಲ್ಲಿ ಗೋವುಗಳ ರಕ್ತ ಹರಿ ಯುವುದನ್ನು ತಡೆಯುವ ಸಲುವಾಗಿ ನಾಡಿನ 50ಕ್ಕೂ ಹೆಚ್ಚು ಸಂತರು ಈಗಾಗಲೇ ಗೋಸಂರಕ್ಷಣೆಯ ಸ್ವರಕ್ತಾ ಕ್ಷರ ಬರೆದು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಮುಂದಾಗಿದ್ದಾರೆ. ಗೋಮಾತೆ ರಾಷ್ಟ್ರ ಮಾತೆ ಯಾಗಿ ಸ್ಥಾನ ಪಡೆಯಬೇಕು. ದೇಶದಲ್ಲಿ ಗೋಜಾಗೃತಿಯಾಗಬೇಕು. ಇದಕ್ಕಾಗಿ ಸರ್ವರೂ ಯಾವುದೇ ತ್ಯಾಗಕ್ಕೆ ಸಿದ್ಧರಾಗಬೇಕೆಂದು ಅವರು ನುಡಿದರು.
ಗೋಸಂಕುಲ ಅಳಿಯುವ, ಪ್ರತೀ ಗೋವಿನ ಮೃತ್ಯುಭಯವನ್ನು ನಿವಾರಿಸುವುದೇ ಅಭಯಾಕ್ಷರದ ಉದ್ದೇಶ. ಪೊಡವಿಗೊಡೆಯ ಶ್ರೀಕೃಷ್ಣನ ನೆಲವು ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದದ್ದು. ಹೀಗಾಗಿ ಜಿಲ್ಲೆಯ ಪ್ರತಿ ಯೊಬ್ಬರಿಂದಲೂ ಅಭಯಾಕ್ಷರ ಸಂಗ್ರಹಿಸುವ ಕಾರ್ಯ ನಡೆಯಬೇಕು ಎಂದು ಅವರು ಕರೆ ನೀಡಿದರು.
ಗೋವಂಶ ಭೂಪಟದಿಂದಲೇ ಮಾಯವಾಗುವ ಭಯ ಕಾಡುತ್ತಿದೆ. ಡೈನೋಸಾರಸ್ ಭೂಮಿಯಿಂದ ಮರೆಯಾದಂತೆ ಮುಂದೊಂದು ದಿನ ಗೋವು ನಿರ್ವಂಶವಾಗುವ ಅಪಾಯವಿದೆ. ಗೋವು ಇಲ್ಲದಿದ್ದರೆ ಪ್ರಪಂಚ ಸುಸ್ಥಿರವಾಗಿರಲು ಸಾಧ್ಯವೇ ಇಲ್ಲ ಎಂದು ಶ್ರೀಗಳು ವಿಶ್ಲೇಷಿಸಿದರು. ಗೋವು ಹಾಗೂ ಕೃಷ್ಣನಿಂದ ಲೋಕ ಶೋಭಿಸುತ್ತದೆ. ಶ್ರೀಕೃಷ್ಣನ ಸನ್ನಿಧಿಯಲ್ಲಿ ಗೋರಕ್ಷಣೆಗಾಗಿ ನಡೆಯುತ್ತಿರುವ ಅಪೂರ್ವ ಸಮಾರಂಭ ಅರ್ಥಪೂರ್ಣ ಎಂದರು.
ಉಡುಪಿ ಜಿಲ್ಲಾ ಗೋಪರಿವಾರದ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪಾದೇ
ಕಲ್ಲು ವಿಷ್ಣು ಭಟ್ ನಿರೂಪಿಸಿ, ನಾರಾಯಣ ಮಣಿಯಾಣಿ ವಂದಿಸಿದರು.