ದಾವಣಗೆರೆ: ಸಾಮಾಜಿಕ ಜೀವನದಲ್ಲಿ ಸಮಾನತೆಗಾಗಿ ಅಹರ್ನಿಶಿ ಶ್ರಮಿಸಿದ ಜಯದೇವ ಜಗದ್ಗುರುಗಳನ್ನು ಸ್ಮರಿಸಿಕೊಳ್ಳುವುದು ಪುಣ್ಯದ ಕೆಲಸ, ಜೀವನದ ಭಾಗ್ಯ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದ್ದಾರೆ.
ಶಿವಯೋಗಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಜಯದೇವ ಮುರುಘರಾಜೇಂದ್ರ ಶ್ರೀಗಳ 60ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ-2017ರ ಪೂರ್ವಸಿದ್ಧತಾ ಸಮಾಲೋಚನಾ ಸಭೆ ಸಾನ್ನಿಧ್ಯ ವಹಿಸಿ, ಮಾತನಾಡಿದ ಅವರು, ಜಯದೇವ ಶ್ರೀಗಳು ಶಿಕ್ಷಣ ಪ್ರೇಮಿ, ಸಮಾನತೆಯ ಹರಿಕಾರ.
12ನೇ ಶತಮಾನದ ಬಸವಾದಿ ಶರಣರು ಕಂಡ ಸಮ ಸಮಾಜ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ಜಯದೇವ ಶ್ರೀ ಸ್ಮರಣೆ ಪುಣ್ಯದ ಕೆಲಸ ಎಂದರು. ಮಾ.31, ಏಪ್ರಿಲ್ 1, 2ರಂದು ಮೂರು ದಿನಗಳ ಕಾಲ ನಡೆಯುವ ಈ ಸ್ಮರಣೋತ್ಸವದಲ್ಲಿ ಸಮಕಾಲೀನ ಸಮಸ್ಯೆಗಳ ಕುರಿತು ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಗತವೈಭವ ಮೆಲುಕು ಹಾಕಲಾಗುವುದು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಗುತ್ತದೆ. ನಾಡಿನ ಗಣ್ಯರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು. ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಪ್ರಾಸ್ತವಿಕವಾಗಿ ಮಾತನಾಡಿ, ಜಯದೇವ ಶ್ರೀಗಳ ಸ್ಮರಣೆ ಒಂದು ರೀತಿಯಲ್ಲಿ ಪವಾಡದಂತೆ ನಡೆದುಹೋಗುತ್ತದೆ.
ಅನೇಕ ಬಾರಿ ಹೆಸರು ಹೇಳಬಯಸದವರು ಶ್ರೀಗಳ ಸ್ಮರಣೆಗೆ ದೇಣಿಗೆ ನೀಡುತ್ತಾರೆ. ಅವರ ಮೇಲಿನ ಭಕ್ತಿ, ಪೀತಿ ಇಂದಿಗೂ ಕಡಮೆ ಆಗಿಲ್ಲ. ಅವರನ್ನು ಸದಾ ಸ್ಮರಿಸೋರು ಹೆಚ್ಚಿದ್ದಾರೆ ಎಂದರು. ನಾಡಿನಾದ್ಯಂತ ಮೊಟ್ಟ ಮೊದಲ ಬಾರಿಗೆ ಉಚಿತ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿದ ಜಯದೇವ ಶ್ರೀಗಳು ಅನೇಕ ಗಣ್ಯರ ಬೆಳವಣಿಗೆಗೆ ಕಾರಣ ಆಗಿದ್ದಾರೆ.
ದಾವಣಗೆರೆಯ ಜಯದೇವ ನಿಲಯದಲ್ಲಿ ಓದಿದ ಜಿ.ಎಸ್. ಶಿವರುದ್ರಪ್ಪ, ಎಂ. ಚಿದಾನಂದ ಮೂರ್ತಿಯವರು ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಇಂತಹ ಅನೇಕ ಸಾಧಕರು ಜಯದೇವ ಶ್ರೀಗಳ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಮುಖಂಡರಾದ ಎಚ್.ಎಸ್. ನಾಗರಾಜ್, ಹಿರಿಯ ವೈದ್ಯ ಎಸ್.ಎಂ. ಯಲಿ, ಡಾ| ಜಿ.ಸಿ. ಬಸವರಾಜ್, ಜಿ. ಶಿವಯೋಗಪ್ಪ, ದೇವರಮನಿ ಶಿವಕುಮಾರ್ ಇತರರು ವೇದಿಕೆಯಲ್ಲಿದ್ದರು. ವಿವಿಧ ಸಮಾಜದ ಗಣ್ಯರು, ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳು, ಭಕ್ತರು, ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಸ್ಮರಣೋತ್ಸವಕ್ಕೆ ತಮ್ಮದೇ ಆದ ಕೊಡುಗೆ ನೀಡುವ ವಾಗ್ಧಾನ ಮಾಡಿದರು.