ದಾವಣಗೆರೆ: ಬಸವ ಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 60ನೇ ಸ್ಮರಣೋತ್ಸವ, ಜಯದೇವಶ್ರೀ ಮತ್ತು ಶೂನ್ಯಪೀಠ ಪ್ರಶಸ್ತಿ ಪ್ರದಾನ, ಶರಣ ಸಂಸ್ಕೃತಿ ಉತ್ಸವ ಮಾ.31 ರಿಂದ ಏ.2ರ ವರೆಗೆ ಜಯದೇವ ವೃತ್ತದಲ್ಲಿರುವ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆಯಲಿದೆ.
ಶುಕ್ರವಾರ 7.15ಕ್ಕೆ ನಾಡೋಜ ಸಾಲುಮರದ ತಿಮ್ಮಕ್ಕ ಬಸವ ತತ್ವ ಧ್ವಜಾರೋಹಣ ನೆರವೇರಿಸುವ ಮೂಲಕ ಸ್ಮರಣೋತ್ಸವಕ್ಕೆ ಚಾಲನೆ ನೀಡುವರು. 7.30ಕ್ಕೆ ಡಾ| ಶಿವಮೂರ್ತಿ ಮುರುಘಾ ಶರಣರು ಸಹಜ ಶಿವಯೋಗ ನಡೆಸಿಕೊಡುವರು. ಹೆಬ್ಟಾಳು ವಿರಕ್ತ ಮಠದ ಶ್ರೀ ಮಹಾಂತರುದ್ರೇಶ್ವರ ಸ್ವಾಮೀಜಿ,
ಲಿಂಗಸುಗೂರಿನ ಶ್ರೀ ಸಿದ್ದಲಿಂಗ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವಕುಮಾರ ಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ಶ್ರೀ ಗುರುಸಿದ್ಧಸ್ವಾಮೀಜಿ, ಮಾಜಿ ಶಾಸಕ ಮಹಿಮ ಜೆ. ಪಟೇಲ್, ನಗರಪಾಲಿಕೆ ಸದಸ್ಯೆ ಶೋಭಾ ಪಲ್ಲಾಗಟ್ಟೆ ಇತರರು ಭಾಗವಹಿಸುವರು.
10ಕ್ಕೆ ನಡೆಯುವ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಡಾ| ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸುವರು. ಮುಂಡರಗಿಯ ಡಾ| ಲೋಕೇಶ್ ಟೇಕಲ್, ಡಾ| ಚಪ್ಪನ್ ಮs…, ಡಾ| ವಿಶ್ವೇಶ್ವರಯ್ಯ ಅವರು ಮೂತ್ರಕೋಶದ ಹರಳು, ಅರ್ಧ ತಲೆನೋವು, ಗಂಟು, ನಾರುಳ್ಳಿ, ನಾಳ, ಮೂಲವ್ಯಾಧಿಗೆ ಚಿಕಿತ್ಸೆ ನೀಡುವರು.
ಸಂಜೆ 6.30ಕ್ಕೆ ನಡೆಯುವ ಮಹಾನ್ ಸಾಧಕರ ಸಮಾವೇಶದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಬಿ.ಆರ್. ಯಾವಗಲ್, ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಇತರರು ಭಾಗವಹಿಸುವರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಜಯದೇವಶ್ರೀ, ಪ್ರಜಾವಾಣಿ ಪ್ರಧಾನ ಸಂಪಾದಕ ಕೆ.ಎನ್. ಶಾಂತಕುಮಾರ್‌ಗೆ ಶೂನ್ಯಪೀಠ ಚನ್ನಬಸವ, ಖ್ಯಾತ ಸಂಶೋಧಕ, ಸಾಹಿತಿ ಡಾ| ಎಸ್.ಆರ್. ಗುಂಜಾಳ್ ಗೆ ಶೂನ್ಯಪೀಠ ಅಲ್ಲಮ ಹಾಗೂ ಖ್ಯಾತ ರಂಗಭೂಮಿ ಕಲಾವಿದೆ ಅರುಂಧತಿನಾಗ್ ಅವರಿಗೆ ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ 25 ಸಾವಿರ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿದೆ.