ಬೆಂಗಳೂರು: ಹನುಮಂತ ನಗರದಲ್ಲಿರುವ ಐತಿಹಾಸಿಕ ಶಿವದೇವಾಲಯ ಗವಿಗಂಗಾಧರೇಶ್ವರನ ಸನ್ನಿಧಿ ಶುಕ್ರವಾರ ಸೂರ್ಯನ ರಶ್ಮಿಯ ಚಮತ್ಕಾರಕ್ಕೆ ಸಾಕ್ಷಿಯಾಯಿತು.
ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಸೂರ್ಯರಶ್ಮಿ ಶಿವನ ಪಾದವನ್ನು ಸ್ಪರ್ಶಿಸಿದ್ದು, ಕೆಲವು ನಿಮಿಷಗಳ ಕಾಲ ಗವಿಗಂಗಾಧರನಿಗೆ ಸೂರ್ಯಾಭಿಷೇಕ ನಡೆಯಿತು.
ಗರ್ಭ ಗುಡಿಯೊಳಗಿನ ಲಿಂಗದ ಮುಂದಿರುವ ನಂದಿಕೊಂಬಿನಿಂದ ಹಾದು ಹೋದ ಸೂರ್ಯನ ಕಿರಣಗಳು ಬಳಿಕ ಪಾಣಿ ಪೀಠದ ಮೂಲಕ ಶಿವಲಿಂಗದ ಮೇಲೆ ಪ್ರಕಾಶಮಾನವಾಗಿ ಬೆಳಗಿತು. ಸುಮಾರು 2 ನಿಮಿಷ 13 ಸೆಕೆಂಡುಗಳ ಕಾಲ ಸೂರ್ಯನ ನೆರಳು ಬೆಳಕಿನಾಟ ಘಟಿಸಿತು. ಸೂರ್ಯರಶ್ಮಿ ಸ್ಪರ್ಶಿಸಿದ ಬಳಿಕ ಕ್ಷೀರಾಭಿಷೇಕ ಸಹಿತ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಕಳೆದ ಬಾರಿ ಮೋಡ ಕವಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿರಲಿಲ್ಲ.
ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಪ್ರತಿಕ್ರಿಯಿಸಿ, ಸೂರ್ಯನು ದಕ್ಷಿಣಾಯನ ಮುಗಿಸಿ ಉತ್ತರಾಯಣದತ್ತ ಹಾದು ಹೋಗಿದ್ದಾನೆ. ಕಳೆದ ಬಾರಿ ಮೋಡದ ಮರೆಯಲ್ಲಿ ಸೂರ್ಯ ಹಾದುಹೋಗಿದ್ದ. ಈ ಬಾರಿ ಸೂರ್ಯ ರಶ್ಮಿ ಚೆನ್ನಾಗಿ ಗೋಚರಿಸಿದೆ. ಕೊರೊನಾ ಮಹಾಮಾರಿಯಿಂದ ಈ ವರ್ಷ ಭಕ್ತರಿಗೆ ಅವಕಾಶ ಕಲ್ಪಿಸಲಾಗಿರಲಿಲ್ಲ. ಸೂರ್ಯನ ಕಿರಣಗಳ ಸ್ಪರ್ಶದ ಬಳಿಕ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು ಎಂದರು.
ಇದನ್ನೂ ಓದಿ:ರಾಜ್ಯದಲ್ಲಿಂದು ದಾಖಲೆಯ ಕೋವಿಡ್ ಪರೀಕ್ಷೆ : 28,723 ಕೇಸ್, 14 ಸಾವು
ಈ ವರ್ಷ ಶುಭ ನಿರೀಕ್ಷೆ
ಕಳೆದ ಬಾರಿ ಮೋಡದ ಮರೆಯಲ್ಲಿ ಸೂರ್ಯ ಹಾದುಹೋಗಿದ್ದ ಹಿನ್ನೆಲೆಯಲ್ಲಿ ಹಲವು ಸಂಕಷ್ಟಗಳನ್ನು ಅನುಭವಿಸಿದ್ದೆವು. ಕೋವಿಡ್‌ನಿಂದಾಗಿ ಹಲವು ರೀತಿಯ ತೊಂದರೆಗಳನ್ನು ಕಂಡೆವು. ಆದರೆ ಈ ವರ್ಷ ಸೂರ್ಯ ರಶ್ಮಿ ಶಿವಲಿಂಗವನ್ನು ಸಂಪೂರ್ಣವಾಗಿ ಸ್ಪರ್ಶಿಸಿದೆ. ಹೀಗಾಗಿ ಎಲ್ಲವೂ ಶುಭವಾಗಿಯೇ ಇರಲಿದೆ ಎಂದು ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ತಿಳಿಸಿದರು.
ಡಿಸೆಂಬರ್ ಅಂತ್ಯ ಮತ್ತು ಜನವರಿ ಆರಂಭದಲ್ಲೇ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಜಗತ್ತು ಕೋವಿಡ್ ಮಹಾಮಾರಿಯಿಂದ ಮುಕ್ತವಾಗಲಿ. ಆ ಮೂಲಕ ವಿಶ್ವಕ್ಕೆ ಒಳಿತಾಗಲಿ ಎಂದು ಆಶಿಸಿದರು.