Advertisement

ಶ್ರೀಚಕ್ರವೆಂದರೆ ಮಾತೃಶಕ್ತಿಯ ಆರಾಧನೆ…ಎಲ್ಲಕ್ಕೂಶ್ರೀಕಾರವೇಮೂಲ ಆಕಾರ

06:13 PM Jan 16, 2021 | Team Udayavani |

ಶ್ರೀವಿದ್ಯೆಯು ನಮ್ಮ ದೇಶದ ಒಂದು ಪಂಥ. ಚಾರಿತ್ರಿಕವಾಗಿ ಅದು ಎಷ್ಟು ಪ್ರಾಚೀನ ತಿಳಿದಿಲ್ಲ. ಅದರಲ್ಲಿ ಭಾರತೀಯ ತಂತ್ರಶಾಸ್ತ್ರದ, ತಾಂತ್ರಿಕ ಮಾರ್ಗದ ಆಧ್ಯಾತ್ಮ ಸಾಧನೆಯ ಅನೇಕ ಹಾದಿಗಳು ಸಂಗಮಿಸಿವೆ. ಅದೊಂದು ತಂತ್ರವಿದ್ಯೆಯ ಕೂಡಲ ಸಂಗಮ ಎಂದರೂ ನಡೆಯುತ್ತದೆ. ತಂತ್ರವಿದ್ಯೆಯಲ್ಲಿ ಇನ್ನೂ ಎರಡು ಅಂಗಗಳಿವೆ. ಅವೇ ಮಂತ್ರ ಮತ್ತು ಯಂತ್ರ. ತಂತ್ರ-ಮಂತ್ರ-ಯಂತ್ರ ಸೇರಿಯೇ ಶಾಕ್ತದ ದಾರಿ ಸಾಗಿ ಬಂದಿದೆ. ಒಂದಕ್ಕೊಂದು ಸಂಬಂಧ ಹೊಂದಿದೆ. ಎಲ್ಲವನ್ನೂ ದೇವಿಯೇ ನಡೆಸಿಕೊಡುತ್ತಾಳೆ ಎಂಬುದು ಈ ಪಂಥದವರ ನಂಬಿಕೆ. ಶ್ರೀವಿದ್ಯೆಯ ಯಂತ್ರಕ್ಕೆ “ಶ್ರೀಚಕ್ರ’ ಎಂದು ಹೆಸರು. ಅದರ ಮಂತ್ರಕ್ಕೆ ಪಂಚದಶೀ ಇಲ್ಲವೇ ಷೋಡಶೀ ಎಂದು ನಾಮಕರಣ ಉಂಟು.

Advertisement

ಈ ವಿದ್ಯೆಯು ರಾಷ್ಟ್ರದ ಎಲ್ಲಾ ಪ್ರಾಂತ್ಯಗಳಲ್ಲೂ ಪ್ರಚಲಿತ. ಅದಕ್ಕೆ ಕೆಲವು ಪ್ರಾದೇಶಿಕ ವ್ಯತ್ಯಾಸಗಳೂ ಉಂಟು. ಆದ್ದರಿಂದಲೇ ಅದರ ಯಂತ್ರವು ಪ್ರಸಿದ್ಧಿ ಪಡೆದಷ್ಟು ಮಂತ್ರ ಮತ್ತು ತಂತ್ರಗಳು ಪ್ರಸಿದ್ಧಿ ಪಡೆದಿಲ್ಲ. ನಿಜಕ್ಕೂ, ವಿದ್ಯಾಲಂಕಾರ ಸಾ.ಕೃ. ರಾಮಚಂದ್ರರಾಯರು ಹೇಳುವಂತೆ ಶ್ರೀಚಕ್ರದ ಅಸಲಿ ಪೂಜಕರು, ಸಾಧಕರು ಕಮ್ಮಿ. ಆದರೆ ಅದರ ಮೇಲಿನ ಭಕ್ತಿಯಿಂದ ಅದರ ಮಹಿಮೆ ಕೇಳಿರುವುದರಿಂದ ಅದನ್ನು ತಿಳಿದವರಿಂದ ಬರೆಸಿಕೊಂಡು ಹಾಳೆಯ ಮೇಲೋ ಅಥವಾ ಒಂದು ಲೋಹದ ತಗಡಿನ ಮೇಲೋ ಬರೆಸಿಕೊಂಡು ಅಂಗಡಿ, ಮನೆಯಲ್ಲಿ ತೂಗು ಹಾಕಿರುತ್ತಾರೆ. ಇದು ಅಂಗಡಿ ಬೀದಿಗೆ ಹೋದರೆ ಕಾಣುತ್ತದೆ. ಅವರು ಅದರ ಬಗ್ಗೆ ಶ್ರದ್ಧೆ ಇರುವ ಶ್ರದ್ಧಾಳುಗಳು ಆ ಮಾರ್ಗದ ನೇರ ಉಪಾಸಕರಲ್ಲ. ಆದರೆ, ಇಡೀ ದೇಶದಲ್ಲಿ ಶ್ರೀಚಕ್ರ ಮತ್ತು ಶ್ರೀ ಎಂಬ ಹೆಸರಿಗೆ ಅಷ್ಟು ಗೌರವಭಾವವಿದೆ. ಅದೊಂದು ಪವಿತ್ರ ಚಿತ್ರ. ಅದರ ಇರವು ಪವಿತ್ರತೆ, ಪಾತ್ರತೆ ತಂದುಕೊಡುತ್ತದೆ. ಆಚರಣೆಗೆ ಮುನ್ನವೇ ಇರುವಿಕೆಯಿಂದಲೇ ಈ ಯಂತ್ರಕ್ಕೆ ಅಷ್ಟು ಮಹತ್ವ ಬಂದಿದೆ. ಅದು ನಿಜವೂ ಹೌದು.

ಶ್ರೀಚಕ್ರದ ದೇವತಾಣಗಳು
ನಮ್ಮ ಸನಾತನ ರಾಷ್ಟ್ರದಲ್ಲಿ ಅನೇಕ ದೇಗುಲಗಳು ದೊಡ್ಡ ದೇವಾಲಯಗಳಲ್ಲಿ ಶ್ರೀಚಕ್ರದ ಉಪಸ್ಥಿತಿ ಇದೆ. ಇದೆ ಎಂದರೆ ದೊಡ್ಡವರು ಅದನ್ನು ಇರಿಸಿ¨ªಾರೆ. ಮಾನವ ಮತಿ ಉದಾಹರಣೆ ಕೇಳುವುದನ್ನು ಅಭ್ಯಾಸ ಮಾಡಿಕೊಂಡಿದೆ. ಹೀಗಾಗಿ, ಉದಾಹರಣೆ ನೀಡಬೇಕು. ಕಾಂಚೀಪುರಂ (ಕಾಮಕೋಟಿ), ಚಿದಂಬರಂ (ಸಮ್ಮೇಲನ-ಚಕ್ರ), ಜಂಬುಕೇಶ್ವರಂ (ಲಲಿತಾ), ಕೂರ್ತಾಲಂ, ಅವಾಡೈಯ್ನಾರ್‌ ಕೋಯಿಲ್‌- ಇವು ತಮಿಳುನಾಡಿನ ಸ್ಥಳಗಳು, ಇವೆಲ್ಲ ದೇವಿಯನ್ನು ಶ್ರೀಮಾತೆಯನ್ನು ಶ್ರೀಚಕ್ರ ರೂಪದಲ್ಲಿ ಪೂಜಿಸುತ್ತಾರೆ. ಹಾಗಾದರೆ ನಮ್ಮ ನಾಡಿನಲ್ಲಿ? ನಮ್ಮಲ್ಲೂ ಇದು ಉಂಟು. ಶೃಂಗೇರಿ (ಶಾರದಾ) ಮತ್ತು ಕೊಲ್ಲೂರು (ಮೂಕಾಂಬಿಕಾ) ಕ್ಷೇತ್ರಗಳಲ್ಲಿ ಶ್ರೀಚಕ್ರವಿದೆ.

ಆದಿ ಶಂಕರರು ತಿರುಮಲ-ತಿರುಪತಿಯಲ್ಲಿ ಶ್ರೀಚಕ್ರವನ್ನು ಸ್ಥಾಪಿಸಿದರು, ಹೀಗಾಗಿ ಅಲ್ಲಿ ಯಥೇಷ್ಟ ವೈಭವವಿದೆ ಎಂಬ ಐತಿಹ್ಯವಿದೆ. ಒಟ್ಟಿನಲ್ಲಿ ಲೌಕಿಕ ಭೋಗ ಮತ್ತು ಆಧ್ಯಾತ್ಮಿಕ ಸಾಧನೆಯ ಮೂಲಕ ಪ್ರಾಪ್ತವಾಗುವ ಐಶ್ವರ್ಯ- ಇವು ಹೇಯವಲ್ಲ, ಅವು ಭಗವತಿಯ ಭಗವಂತನ ಪ್ರಸಾದ ಎಂಬುದು ಸನಾತನ ಧರ್ಮದ ದೃಷ್ಟಿ. ಎಷ್ಟು ಬೇಕೋ ಅಷ್ಟನ್ನು ತಂತ್ರ ವಿದ್ಯೆಯಿಂದ ಪಡೆಯೋಣ, ಪಡೆಯುವಾಗ ನಮ್ಮ ಯೋಗ್ಯತೆ, ಹಸಿವಿನ ಅಳತೆಯ ಅಂದಾಜು ನಮಗಿರಲಿ. ಪಡೆದದ್ದನ್ನು ಆಕೆಯ ಕರುಣೆ ಎಂದು ಸ್ವೀಕರಿಸೋಣ, ಪಡೆದ ಶಕ್ತಿಯನ್ನು ಹಾಳುಮಾಡುವುದು, ಪೋಲು ಮಾಡುವುದು ಬೇಡ ಇದು ತಾಂತ್ರಿಕ ಉಪಾಸನೆಯ ದಿಟ್ಟಿ. ಇಂದಿನದು ಇಂದಿಗೆ-ನಾಳಿನದು ನಾಳೆಗೆ, ನಾಡಿದ್ದರ ಚಿಂತೆ ಬೇಡ, ಎಲ್ಲಾ ಅವಳೇ ನಡೆಸುತ್ತಾಳೆ ಇದು ತಾಂತ್ರಿಕ ಭಕ್ತಿಯ ರೀತಿ.

ಇರಲಿ. ತಿರುಪತಿಯಲ್ಲಿ ಹೀಗೆ ಶ್ರೀಚಕ್ರ ಸ್ಥಾಪನೆಯಾಗಿದೆ ಎಂಬ ನಂಬಿಕೆಯ ಮೇರೆಗೇ ದೇಶದ ಅನೇಕ ದೇಗುಲಗಳಲ್ಲಿ ಅದರ ಸ್ಥಾಪನೆಯಾಗತೊಡಗಿತು. ಕರ್ನಾಟಕದ ಕಲ್ಬುರ್ಗಿಯ ಸನ್ನತಿಯಲ್ಲಿ ಚಂದ್ರಲಾ ಪರಮೇಶ್ವರೀ ದೇಗುಲವಿದೆ, ಅದರ ವಿಮಾನದಲ್ಲಿ ಒಂದು ದೊಡ್ಡ ಶ್ರೀಚಕ್ರಾಕೃತಿಯಿದೆ. ನಮ್ಮ ದೇಶದಲ್ಲಿ ಒಂದು ಕಾಲಕ್ಕೆ ಉಪಾಸನೆಯ ಮಾರ್ಗಗಳಲ್ಲಿ ಯಾವುದು ತಾಂತ್ರಿಕ, ಯಾವುದು ಶುದ್ಧಾಂಗ ವೈದಿಕ ಎಂಬ ಚರ್ಚೆ ನಡೆದಿತ್ತು. ಆ ಪ್ರಕಾರ ಶ್ರೀಚಕ್ರಾರಾಧನೆ ವೈದಿಕ ಎಂಬ ವಾದಗಳೂ ಹೊರಟವು. ಆದರೆ ವೈದಿಕ ಸಂಪ್ರದಾಯ ಎತ್ತಿ ಹಿಡಿಯುವ ಸ್ವತಃ ಕುಲ್ಲೂಕ ಭಟ್ಟನ ಪ್ರಕಾರ (ಇವರ ಕಾಲ ಕ್ರಿಸ್ತಾಬ್ಧ 1150-1300ರ ನಡುವೆ) ಶ್ರುತಿಯಲ್ಲಿ ಎರಡು ವಿಧ: ವೈದಿಕ ಮತ್ತು ತಾಂತ್ರಿಕ. ಭಾಗವತ ಮಹಾಪುರಾಣದ 11ನೆಯ ಸ್ಕಂಧ ಕೂಡ ವೈದಿಕೀ, ತಾಂತ್ರಿಕೀ ಮತ್ತು ಮಿಶ್ರ ಎಂಬ ಮೂರು ದಾರಿಗಳನ್ನು ಹೇಳಿದೆ.

Advertisement

ಈಗ ಅದೆಲ್ಲಾ ಇತಿಹಾಸದ ವಿಷಯ. ವೈದಿಕ ಮತ್ತು ತಾಂತ್ರಿಕ ಹೇಗೆ ಪರಸ್ಪರ ಪೂರಕ ಎಂದು ಸಾಧನೆ ಪುಸ್ತಕರಾಶಿಯ ಓದು ಇರುವ ಹಿರಿಯರು ತೋರಿಸಿಕೊಟ್ಟಿದ್ದಾರೆ. ಇವರ ಪಟ್ಟಿ ದೊಡ್ಡದಿದೆ. ಸದ್ಯಕ್ಕೆ ಮಹಾಮಹೋಪಾಧ್ಯಾಯ ಗೋಪೀನಾಥ ಕವಿರಾಜ್‌, ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣ ಮತ್ತು ಪ್ರೊ. ಸಾ.ಕೃ. ರಾಮಚಂದ್ರ ರಾಯರನ್ನು ಇಲ್ಲಿ ಸ್ಮರಿಸಬಹುದು.

ಶ್ರೀಚಕ್ರವೆಂದರೆ ಮಾತೃಶಕ್ತಿಯ ಆರಾಧನೆ. ವೇದಾಂತಿಗಳು ಹೇಳುವ ಬ್ರಹ್ಮನ್‌ ಮತ್ತು ಬೌದ್ಧರ ಶೂನ್ಯ ಎರಡರ ತಾಂತ್ರಿಕ ರೂಪವೇ ಮಹಾದೇವಿ ಲಲಿತಾ. ಈಕೆಗೆ ತ್ರಿಪುರಸುಂದರೀ, ಷೋಡಶೀ ಮತ್ತು ರಾಜರಾಜೇಶ್ವರೀ ಎಂಬ ಹೆಸರುಗಳಿವೆ. ತಾಯಿಯಾದ್ದರಿಂದ ಅಮ್ಮ ಎಂದರೂ ಸಾಕು. ಅವಳಿಗೆ ಅವಳದ್ದೇ ದೇವತಾ ಪರಿವಾರವಿದೆ, ಸಹಾಯಕರಾದ ಯೋಗಿನಿಯರಿದ್ದಾರೆ. ಇವರ ಸಂಖ್ಯೆಯನ್ನು 64 ಎಂದು ಹೇಳುವುದುಂಟು. ಇದು 64 ಲಕ್ಷ, 64 ಕೋಟಿ ಎಂದೂ ಉಲ್ಲೇಖಗಳಿವೆ. ಈ ಯೋಗಿನಿಯರನ್ನು ಆರಾಧಿಸುವ ಉಪಾಸಕರೂ ಇದ್ದಾರೆ. ಅದರ ಸುತ್ತ ಅನೇಕ ರೋಚಕ ಕಥಾ ಸಾಹಿತ್ಯ ಕೂಡ ಇದೆ.

ಮನುಷ್ಯನ ಮನಸ್ಸಿನಲ್ಲಿ ಸೃಷ್ಟಿಯ ಮೂಲ ಎಂದರೆ ಕುತೂಹಲ, ಭಯ ಮತ್ತು ಭಕ್ತಿ. ಈ ಕಲ್ಪನೆ ತಾಂತ್ರಿಕ ಉಪಾಸನೆಯಲ್ಲಿ ಯೋನಿಯ ಪರಿಕಲ್ಪನೆಯಾಗಿ ಬಂದಿದೆ. ಸತ್ಯಕಾಮರ ಒಂದು ಗ್ರಂಥದ ಹೆಸರೇ ತಂತ್ರಯೋನಿ. ಅದರ ಅರ್ಥ ಎಲ್ಲಕ್ಕೂ ಮೂಲ ಎಂದು. ಎಲ್ಲಕ್ಕೂ ಮೂಲ ಯಾರು? ತಾಯಿ ತಾನೆ. ಹೀಗಾಗಿ ತಾಯಿಯ ಮೂಲಕ ನಾವು ಹೊರಗೆ ಬರುವುದರಿಂದ ಈ ಕಲ್ಪನೆ ತಂತ್ರದ ಉಪಾಸನೆಯಲ್ಲಿ ಸೇರಿಕೊಂಡಿದೆ. ಭಾರತೀಯ ಅಧ್ಯಾತ್ಮವನ್ನು ಅರಿಯಲು ದೊಡ್ಡ ತೊಡಕು ನಮ್ಮ ಪಶ್ಚಿಮ ಬುದ್ಧಿ. ದೇಹದ ಭಾಗಗಳನ್ನು ಕುರಿತು ಮಾತನಾಡತೊಡಗಿದರೆ, ಅದು ಅಶ್ಲೀಲ ಎಂಬ ದೃಷ್ಟಿ ಕಲೆ-ಸಂಸ್ಕೃತಿಗಳಿಂದ ಮುಂದುವರೆದು ಅಧ್ಯಾತ್ಮ ವಿಷಯಗಳಲ್ಲಿ ಬಂದು ಬಿಟ್ಟಿದೆ.

ಇದು ವಿಕ್ಟೋರಿಯನ್‌ ಮಾನಸಿಕತೆ, ಅಂದರೆ ಒಂದು ಕಾಲಕ್ಕೆ ನಮ್ಮ ದೇಶ ಆಳಿದ ಬ್ರಿಟಿಷರು ಹಿಂದೆ ಹೊಂದಿದ್ದ “ಇದು ನೀತಿ, ಇದು ಅನೀತಿ’ ಎಂಬ ಅವರ ಪರಿಕಲ್ಪನೆ. ಇಡೀ ಭಾರತೀಯ ಆಚರಣೆಗಳನ್ನು ನಮ್ಮ ಜಾನಪದ ಹಬ್ಬ-ಹರಿದಿನಗಳನ್ನು ನೋಡಲು ನಮಗೆ ತೊಳೆದ ಕಣ್ಣು ಬೇಕು. ಇಲ್ಲದಿದ್ದರೆ ಎಲ್ಲವೂ
ಹೇವರಿಕೆ ಹುಟ್ಟಿಸುತ್ತದೆ. ಇದು ಜಾನಪದ ಅಧ್ಯಾತ್ಮ ಮತ್ತು ಶಾಕ್ತ-ಅಘೋರಿಗಳ ಅಧ್ಯಾತ್ಮ ಲೋಕ ಪ್ರವೇಶಿಸುವವರು ನೆನಪಿನಲ್ಲಿ ಇಡಬೇಕು. ಮುಕ್ತ ಮನಸ್ಸು ಇರದಿದ್ದರೆ ಸಾಧನೆ ಮತ್ತು ಅದರ ಸುತ್ತಲಿನ ಓದು ಎರಡಲ್ಲೂ ಪ್ರಗತಿ ಸಾಧ್ಯವಿಲ್ಲ. ಅಂತರಂಗ ಉಪಾಸನೆಯೊಂದಿದೆ, ಅದರ ಕಡೆ ಹೋಗಬೇಕು ಎಂಬ ಅರಿವು ಸಾಧಕ ಜೀವಿಗೆ ಬರುವವರೆಗೂ ಬಹಿರಂಗದ ಆರಾಧನೆ ಅಗತ್ಯ. ಇದನ್ನು “ವಾಮಕೇಶ್ವರ ತಂತ್ರ’ ಕೂಡ ಹೇಳುತ್ತದೆ.
ಅಂತರ್ಯಾಗಾತ್ಮಿಕಾ ಪೂಜಾ ಸರ್ವಪೂಜೋತ್ತಮಾ ಪ್ರಿಯೇ| ಬಹಿಃ ಪೂಜಾ ವಿಧಾತವ್ಯಾ ಯಾವಜ್ಞಾನಂ ನ ಜಾಯತೇ||
ತಂತ್ರಗಳು ಬೋಧಿಸುವ ಅಧ್ಯಾತ್ಮ , ಅಂತರಂಗ ಮತ್ತು ಬಹಿರಂಗ ಉಪಾಸನೆ ಎರಡನ್ನೂ ಸೇರಿಸಿಕೊಂಡಿದೆ. ಮುಖ್ಯವಾಗಿ ಜಗತ್ತಿನ ಮೂಲ ಶಕ್ತಿ ತತ್ವ ಅದರತ್ತ ಪೂಜ್ಯ ಭಾವನೆ ಬೆಳೆಸಿಕೊಳ್ಳಬೇಕು. ಮನುಷ್ಯರಾಗಿ ನಾವು ತಂತ್ರಕ್ಕೆ ಸಲ್ಲಿಸಬಹುದಾದ ಗೌರವ ಇದೇ ಆಗಿದೆ.

*ಜಿ. ಬಿ. ಹರೀಶ

(2017ರ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ ಲೇಖನ)

Advertisement

Udayavani is now on Telegram. Click here to join our channel and stay updated with the latest news.

Next