Advertisement
ತುಮಕೂರು: ಕೇಂದ್ರ ಸರ್ಕಾರ ಈ ಬಾರಿಯೂ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡದೇ ಇರುವುದಕ್ಕೆ ಕಲ್ಪತರ ನಾಡಿನಲ್ಲಿ ಜನಾಕ್ರೋಶಗೊಳ್ಳುತ್ತಿದ್ದಾರೆ. ತ್ರಿವಿಧ ದಾಸೋಹಿಗಳಾಗಿ, ಕಾಯಕವೇ ಕೈಲಾಸ ಎಂದು ಸಮಾಜದ ಮಕ್ಕಳಿಗೆ ಸಮಾನತೆಯಿಂದ ಜ್ಞಾನ ದಾಸೋಹ ನೀಡಿರುವ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಗೆ ವರ್ಷಗಳಿಂದ ಕೇಳುತ್ತಿದ್ದರೂ ಕೊಡಲಿಲ್ಲ. ಈಗ ಶ್ರೀಗಳು ಶಿವೈಕ್ಯರಾಗಿದ್ದಾರೆ. ಈಗಲಾದರೂ ನಮ್ಮ ಆಸೆಯನ್ನು ಕೇಂದ್ರ ಸರ್ಕಾರ ಈಡೇರಿಸುತ್ತೆ ಎಂದು ನಿರೀಕ್ಷಿಸಿದ್ದೆವು. ಆದರೆ, ಈ ಬಾರಿಯೂ ಭಕ್ತರ ನಿರೀಕ್ಷೆಯನ್ನು ಕೇಂದ್ರ ಹುಸಿಗೊಳಿಸಿ ಲಕ್ಷಾಂತರ ಭಕ್ತರ ಪಾಲಿಗೆ ನೋವುಂಟು ಮಾಡಿದೆ.
ತುಮಕೂರು: ಬಡ ಮಕ್ಕಳಿಗೆ ಅನ್ನ ಜ್ಞಾನ ದಾಸೋಹ ನೀಡುತ್ತಿದ್ದ ಶ್ರೀಗಳು ಈ ಶತಮಾನದ ಮಹಾನ್ ಪುರುಷ. ಇಂಥ ಮಹಾನ್ ಪುರುಷ ಮತ್ತೂಬ್ಬ ಹುಟ್ಟಲ್ಲ. ಇಂಥ ಶ್ರೀಗಳಿಗೆ ಭಾರತ ರತ್ನ ಕೊಟ್ಟಿದ್ದರೆ ಆ ಪ್ರಶಸ್ತಿಗೆ ಹೆಚ್ಚು ಗೌರವ ಬರುತ್ತಿತ್ತು. ಶ್ರೀಗಳಿಗೆ ಭಾರತ ರತ್ನ ದೊರಕದೇ ಇರುವುದು ನೋವಾಗಿದೆ ಎಂದು ಗೃಹಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
Related Articles
Advertisement
ಒತ್ತಾಯ: ಶ್ರೀಗಳ ಸೇವೆ ಅಮೂಲ್ಯವಾದದ್ದು, ಮುಂದೆ ಯಾವುದೇ ಸರ್ಕಾರವಿರಲಿ ಶ್ರೀಗಳಿಗೆ ಭಾರತ ರತ್ನ ನೀಡಿ ಗೌರವ ನೀಡಬೇಕು ಎಂದು ಒತ್ತಾಯಿಸಿದರು. ಶ್ರೀಗಳ ಅಂತಿಮ ಕಾರ್ಯ ನಡೆದ ಬಳಿಕ ಮಠಕ್ಕೆ ಬಂದಿರಲಿಲ್ಲ. ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದೇನೆ. ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳೊಂದಿಗೆ ಮಾತನಾಡಿ ತೆರಳುತ್ತೇನೆ. ವಿಜಯಪುರದಲ್ಲಿ ನಡೆದ ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯನ್ನು ಪ್ರಥಮ ಬಾರಿಗೆ ಭೇಟಿಯಾಗಿದ್ದೆವು.
ನಾನು ಯಾವಾಗಲು ಮಠಕ್ಕೆ ಭೇಟಿ ಕೊಟ್ಟಾಗಲೆಲ್ಲ ಶ್ರೀಗಳು ಹಳಕಟ್ಟಿ ಸಂಶೋಧನಾ ಕೇಂದ್ರ ಹೇಗೆ ನಡೆಯುತ್ತಿದೆ ಎಂದು ಕೇಳುತ್ತಿದ್ದರು. ಬಸವ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸಿದವರು ಹಳಕಟ್ಟಿ ಎಂದರು. ಶ್ರೀಗಳ ಬಗ್ಗೆ ಅಧ್ಯಯನ ಕೇಂದ್ರ, ಅವರ ಕಾರ್ಯದ ಬಗ್ಗೆ ಮ್ಯೂಸಿಯಂ, ಅವರು ನಡೆದು ಬಂದ ದಾರಿ, ಸಾಹಿತ್ಯದ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸಲು ವಸ್ತು ಸಂಗ್ರಹಾಲಯ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿವರಿಸಿದರು.
ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎನ್ನುವುದು ನಮ್ಮೆಲ್ಲರ ಒತ್ತಾಸೆಯಾಗಿತ್ತು. ಈ ಹಿಂದೆ 2 ಬಾರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಒಮ್ಮೆ ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಈಗಲೂ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಪ್ರಶಸ್ತಿ ಬರುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಪ್ರಶಸ್ತಿಯ ನಿರೀಕ್ಷೆ ಹುಸಿಯಾಗಿದೆ.-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಶ್ರೀಗಳಿಗೆ ಭಾರತ ರತ್ನ ಕೊಡಬೇಕಾಗಿತ್ತು. ಸಾಮಾಜಿಕ, ಧಾರ್ಮಿಕವಾಗಿ ಸೇವೆ ಸಲ್ಲಿಸಿದ್ದಾರೆ. ಇಂದಲ್ಲ ನಾಳೆ ಭಾರತ ರತ್ನ ಬಂದೇ ಬರುತ್ತದೆ. ಅವರ ಸೇವೆ ಆ ರೀತಿಯದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀಗಳ ಮೇಲೆ ಬಹಳ ಅಭಿಮಾನವಿದೆ. ಯಾವ ಕಾರಣಕ್ಕೆ ಭಾರತ ರತ್ನ ತಪ್ಪಿದೆ ಗೊತ್ತಿಲ್ಲ. ಆದರೆ, ಇಂದಲ್ಲ ನಾಳೆ ಶ್ರೀಗಳಿಗೆ ಭಾರತ ರತ್ನ ದೊರಕೇ ದೊರಕುತ್ತದೆ.
-ಜಿ.ಎಸ್.ಬಸವರಾಜ್, ಮಾಜಿ ಸಂಸದ
ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಈ ಬಾರಿ ನೀಡಬೇಕಾಗಿತ್ತು. ಇದರಿಂದ ನಮಗೆ ತುಂಬಾ ಬೇಸರವಾಗಿದೆ. ಬೇರೆಯವರಿಗೆ ಭಾರತ ರತ್ನ ನೀಡುವುದರ ಬಗ್ಗೆ ನಮ್ಮ ಅಸಮಾಧಾನವಿಲ್ಲ. ಆದರೆ, ಶ್ರೀಗಳ ಸೇವೆ ಪರಿಗಣಿಸಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಅಸಂಖ್ಯಾತ ಭಕ್ತರ ನಡೆದಾಡುವ ದೇವರಾಗಿದ್ದ ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಮತ್ತೂಮ್ಮೆ ಮನವಿ ಮಾಡುತ್ತೇವೆ.
-ಡಾ.ಎಸ್.ರಫೀಕ್ ಅಹಮದ್, ಮಾಜಿ ಶಾಸಕ * ಚಿ.ನಿ.ಪುರುಷೋತ್ತಮ್