ಬಾದಾಮಿ: ಉತ್ತರ ಕರ್ನಾಟಕದ ಸುಪ್ರಸಿದ್ಧ ಕೋಟ್ಯಂತರ ಭಕ್ತರ ಆರಾಧ್ಯದೇವಿ ಸುಕ್ಷೇತ್ರ ಶ್ರೀ ಬನಶಂಕರಿದೇವಿ ಜಾತ್ರೆಯನ್ನು ಕೋವಿಡ್ ಹಿನ್ನೆಲೆ ಜಿಲ್ಲಾಡಳಿತ ರದ್ದುಪಡಿಸಿ ಆದೇಶ ಹೊರಡಿಸಿದ ಹಿನ್ನೆಲೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ನಿರಾಸೆಯಾಗಿದೆ. ಪ್ರತಿ ವರ್ಷ ಬನದ ಹುಣ್ಣಿಮೆ ದಿನ ನಡೆಯುವ ಲಕ್ಷಾಂತರ ಜನ ಭಕ್ತರು ಸೇರುವ ಜಾತ್ರೆಯನ್ನು ಮಹಾಮಾರಿ ಕೊರೊನಾ ವೈರಸ್ ಉಲ್ಬಣವಾಗುತ್ತಿರುವ ಕಾರಣ ಜಿಲ್ಲಾಡಳಿತ ನಿಷೇಧಿಸಿ ಆದೇಶ ಹೊರಡಿಸಿದೆ.
ಸತತ ಎರಡನೇ ವರ್ಷ ಜಾತ್ರೆ ರದ್ದಾಗುತ್ತಿದ್ದು, ವಿಶೇಷ ಕೊರೊನಾ ವೈರಸ್ ಮುಂದುವರೆದ ಭಾಗವಾದ ಒಮಿಕ್ರಾನ್ ಹರಡುವುದನ್ನು ನಿಯಂತ್ರಣಕ್ಕಾಗಿ ಜಾರಿಗೆ ಬಂದಿರುವ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಜನರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು, ಆದರೆ ಸುಮಾರು ನಿರಂತರ ಒಂದು ತಿಂಗಳ ಕಾಲ ಜರುಗುತ್ತಿದ್ದ ಶತಮಾನದ ಇತಿಹಾಸ ಕಂಡ ಹಾಗೂ ಪರಂಪರೆಯುಳ್ಳ ಜಾತ್ರೆ ರದ್ದಾಗಿರುವುದು ಲಕ್ಷಾಂತರ ಜನರ ಪಾಲಿಗೆ ಸಾಕಷ್ಟು ನಿರಾಸೆ ಮತ್ತು ನೋವುಂಟು ಮಾಡಿದೆ.
ಈ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಆದರೆ ಕಳೆದ ವರ್ಷದ ಆಚರಣೆಯಂತೆ ಅತ್ಯಂತ ಸರಳವಾಗಿ ಮತ್ತು ನಿತ್ಯದ ಪೂಜಾ ಕೈಂಕರ್ಯಗಳು ಜರುಗುವುದರೊಂದಿಗೆ ಮಹಾ ರಥೋತ್ಸವ ನೆರವೇರಲಿದೆ ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಪ್ರಕಟಣೆ ತಿಳಿಸಿದೆ. ಈಗಾಗಲೇ ನಾಟಕ ಕಂಪನಿಗಳು, ಗೃಹ ಬಳಕೆ ಅಂಗಡಿಗಳು, ಆಟಿಕೆ ಅಂಗಡಿಗಳು, ಮಿಠಾಯಿ ಅಂಗಡಿಗಳು, ಬೀದಿ ಬದಿ ವ್ಯಾಪಾರಸ್ಥರು ಸಣ್ಣ ಪುಟ್ಟ ಅಂಗಡಿಗಳು ತಲೆ ಎತ್ತಬೇಕಾಗಿತ್ತು. ಒಂದು ತಿಂಗಳ ಕಾಲ ವ್ಯಾಪಾರ ವಹಿವಾಟು ಮಾಡಿಕೊಂಡು ಒಂದು ವರ್ಷದ ಗಂಜಿ ಮಾಡಿಕೊಳ್ಳುತ್ತಿದ್ದರು ಅದು ಈ ಬಾರಿ ಕೊರೊನಾ ಹೊಡೆತಕ್ಕೆ ಮತ್ತೆ ಇಲ್ಲದಂತಾಯಿತು. ಕಲಾವಿದರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಜಾತ್ರೆ ಸಮೀಪಿಸುತ್ತಿದ್ದಂತೆ ತಾಲೂಕು ಆಡಳಿತ ಕಠಿಣ ನಿಲುವು ತೆಗೆದುಕೊಂಡಿದೆ. ದೇವಸ್ಥಾನ ಸಂಪರ್ಕಿಸುವ ಬಾದಾಮಿ ಗದಗ, ಶಿವಪುರ ಶಿವಯೋಗಮಂದಿರದಿಂದ ಬರುವ ಎಲ್ಲ ಮಾರ್ಗಗಳಲ್ಲಿ ಬಾರಿಕೇಡ್ ಅಳವಡಿಸಿ ಅಲ್ಲಲ್ಲಿ ಯಾರೂ ದೇವಸ್ಥಾನಕ್ಕೆ ತೆರಳದಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಜಾತ್ರೆ ರದ್ದುಗೊಳಿಸಿರುವ ಮತ್ತು ಸಾರ್ವಜನಿಕ ಪ್ರವೇಶ ನಿರ್ಬಂಧಿಸಿರುವ ಸೂಚನಾ ಫಲಕಗಳನ್ನು ಹಾಕಲಾಗಿದೆ.
ಇದಕ್ಕೆ ಪೂರಕವೆಂಬಂತೆ ಉಪವಿಭಾಗಾಧಿ ಕಾರಿ ಎಂ.ಗಂಗಪ್ಪ, ತಹಶೀಲ್ದಾರ್ ಸುಹಾಸ್ ಇಂಗಳೆ ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ನೇತ್ರಾವತಿ ಪಾಟೀಲ ಸರ್ಕಾರದ ಆದೇಶ ಪಾಲಿಸುತ್ತಿದ್ದಾರೆ. ಇನ್ನು ದೇವಸ್ಥಾನದ ಆಡಳಿತ ಮಂಡಳಿ ಬೆಳಗಿನ ಜಾವ ಬನಶಂಕರಿದೇವಿಗೆ ಜಾತ್ರಾ ಮಹೋತ್ಸವದ ಮತ್ತು ನಿತ್ಯದ ಪೂಜಾ ಕೈಂಕರ್ಯಗಳು ಎಂದಿನಂತೆ ನಡೆಸಿ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ಪ್ರಾಂಗಣದಲ್ಲಿ ಭಕ್ತರು ಬರದಂತೆ ಪೊಲೀಸ್
ಬಂದೋಬಸ್ತ್ ಏರ್ಪಡಿಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಜಾತ್ರೆ ಎಂದೆನಿಸಿಕೊಂಡಿರುವ ಶ್ರೀ ಬನಶಂಕರಿದೇವಿ ಜಾತ್ರೆಯನ್ನು ಕೋವಿಡ್ ನಿಯಮನುಸಾರ ಪೂಜಾರ ಮನೆತನದವರಿಗೆ ಪೂಜಾ ಕೈಂಕರ್ಯಕ್ಕೆ ಅವಕಾಶ ನೀಡಲಾಗಿದೆ. ಆದರೆ ಭಕ್ತರ ದರ್ಶನಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಸುಹಾಸ್ ಇಂಗಳೆ, ತಹಶೀಲ್ದಾರ್ ಬಾದಾಮಿ.
ಕಲಾವಿದರಿಗೆ ಪ್ರತಿ ವರ್ಷ ಬನಶಂಕರಿದೇವಿ ಜಾತ್ರೆಯಲ್ಲಿ ಒಂದು ತಿಂಗಳು ದುಡಿದು ಒಂದು ವರ್ಷದ ಗಂಜಿ ಮಾಡುತ್ತಿದ್ದೇವು. ಆದರೆ ಕೊರೊನಾ ಕಾರಣ ಜಾತ್ರೆ ರದ್ದಾಗಿರುವುದರಿಂದ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಶೇ.50 ಅವಕಾಶ ಕಲ್ಪಿಸಿ, ಜಾತ್ರೆ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರಕಾರ ಮತ್ತು ಜಿಲ್ಲಾಡಳಿತ ನಿಯಮ ಸಡಿಲಿಕೆ ಮಾಡಿ ಜಾತ್ರೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಬೇಕಿದೆ.
ಜ್ಯೋತಿ ಗುಳೇದಗುಡ್ಡ, ನಾಟಕ ಕಲಾವಿದೆ ಗುಳೇದಗುಡ್ಡ