ಹೈದರಾಬಾದ್: ಚೆನ್ನೈ ಸೂಪ್ ಕಿಂಗ್ಸ್ ವಿರುದ್ಧ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಭರ್ಜರಿ ಜಯ ಗಳಿಸಿದೆ. ಬಹುತೇಕ ಏಕಮುಖವಾಗಿ ನಡೆದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಬಳಗ ಆರು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಅವರು ತನ್ನ ನಡೆಯಿಂದ ಗಮನ ಸೆಳೆದರು.
ಚೆನ್ನೈ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 23 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದ ರವೀಂದ್ರ ಜಡೇಜಾ ಆಡುತ್ತಿದ್ದವರು. 19ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಜಡೇಜಾ ಹೊಡೆಯಲು ಯತ್ನಿಸಿದರು. ಆದರೆ ಚೆಂಡು ಕುಮಾರ್ ಕೈ ಸೇರಿತ್ತು. ಜಡೇಜಾ ಕ್ರೀಸ್ ಬಿಟ್ಟು ಎದುರು ಬಂದಾಗ ಭುವಿ ಚೆಂಡನ್ನು ವಿಕೆಟ್ ಗೆ ಗುರಿಯಾಗಿಸಿ ಎಸೆದರು. ಆದರೆ ಅದು ಜಡೇಜಾಗೆ ತಾಗಿತು. ನಿಯಮ ಪ್ರಕಾರ ಫೀಲ್ಡಿಂಗ್ ಗೆ ಅಡ್ಡಿಪಡಿಸಿದ ಇಂತಹ ಘಟನೆಗಳಲ್ಲಿ ಬ್ಯಾಟರ್ ಗೆ ಔಟ್ ನೀಡಬಹುದು.
ಎಸ್‌ಆರ್‌ಎಚ್ ಕೀಪರ್ ಹೆನ್ರಿಚ್ ಕ್ಲಾಸೆನ್ ಕೂಡಾ ಅದೇ ರೀತಿ ಸಿಗ್ನಲ್ ಮಾಡಿದರು. ಫೀಲ್ಡ್ ಅಂಪೈರ್ ಗಳು ಮೂರನೇ ಅಂಪೈರ್ ಗೆ ಮನವಿ ಮಾಡಿದರು. ಆದರೆ ಮಧ್ಯ ಪ್ರವೇಶಿಸಿದ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಮನವಿಯನ್ನು ಹಿಂತೆಗೆದುಕೊಂಡರು.
ಇದು ಕ್ರೀಡಾ ಸ್ಪೂರ್ತಿ ಎಂದು ಚರ್ಚೆಯಾಯಿತು. ಆದರೆ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಈ ವಿಚಾರನ್ನು ಬೇರೆಯದೇ ದೃಷ್ಟಿಕೋನದಿಂದ ಕಂಡಿದ್ದಾರೆ. “ಜಡೇಜಾ ವಿರುದ್ಧದ ಫೀಲ್ಡ್ ಮೇಲ್ಮನವಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪ್ಯಾಟ್ ಕಮಿನ್ಸ್ ಗೆ ಎರಡು ಪ್ರಶ್ನೆಗಳು. ಬ್ಯಾಟಿಂಗ್ ಗೆ ಕಷ್ಟ ಪಡುತ್ತಿರುವ ಜಡೇಜಾ ಅವರನ್ನು ಕ್ರೀಸ್ ನಲ್ಲಿರಿಸಲು ಮತ್ತು ಧೋನಿಯನ್ನು ಡಗೌಟ್ ನಲ್ಲೇ ಇರಿಸಲು ಇದು ಯುದ್ಧತಂತ್ರವೇ? ಇಂತಹ ಘಟನೆಯು ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಆಗಿದ್ದರೆ ಅವರು ಅದೇ ರೀತಿ ಮಾಡುತ್ತಿದ್ದರೇ?” ಎಂದು ಪ್ರಶ್ನಿಸಿದ್ದಾರೆ.