ದುಬಾೖ: ಭಾರತದಲ್ಲಿ ನಡೆದ ಮೊದಲ ಸುತ್ತಿನ ಐಪಿಎಲ್ ಪಂದ್ಯಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಕೇನ್ ವಿಲಿಯಮ್ಸನ್ ಸಾರಥ್ಯದ ಸನ್‌ರೈಸರ್ ಹೈದರಾಬಾದ್ ಅದೃಷ್ಟ ಅರಬ್ ನಾಡಿನಲ್ಲಾದರೂ ಬದಲಾದೀತೇ? ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಇದಕ್ಕೆ ಉತ್ತರ ಲಭಿಸತೊಡಗುತ್ತದೆ. ಜತೆಗೆ ತಂಡದ ಈಗಿನ ಫಾರ್ಮ್ ಹಾಗೂ ಸ್ಥಿತಿ ಹೇಗಿದೆ ಎಂಬುದೂ ತಿಳಿದು ಬರಲಿದೆ.
ಸನ್‌ರೈಸರ್ 7 ಪಂದ್ಯಗಲ್ಲಿ ಕೇವಲ ಒಂದನ್ನಷ್ಟೇ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಆದರೆ ಹೈದರಾಬಾದ್ ತಂಡವನ್ನು ಅರಬ್ ನಾಡಿನಲ್ಲಿ ಕಡೆಗಣಿಸುವಂತಿಲ್ಲ. ಕಳೆದ ಐಪಿಎಲ್‌ನಲ್ಲೂ ಇದೇ ರೀತಿ ಸೋಲಿನ ಆರಂಭ ಕಂಡು, ಬಳಿಕ ಫೀನಿಕ್ಸ್‌ನಂತೆ ಎದ್ದು ಸೆಮಿಫೈನಲ್ ಪ್ರವೇಶಿಸಿದ್ದನ್ನು ಮರೆಯುವಂತಿಲ್ಲ.
ಕಾಡಲಿದೆ ಬೇರ್‌ಸ್ಟೊ ಗೈರು:
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜಾನಿ ಬೇರ್‌ಸ್ಟೊ ದ್ವಿತೀಯ ಹಂತದ ಪಂದ್ಯಗಳಿಂದ ಹೊರಗುಳಿದದ್ದು ಹೈದರಾಬಾದ್ ಬ್ಯಾಟಿಂಗ್ ವಿಭಾಗಕ್ಕೆ ಬಿದ್ದ ದೊಡ್ಡ ಹೊಡೆತ. ಹಾಗೆಯೇ ಓಪನರ್ ಡೇವಿಡ್ ವಾರ್ನರ್ ಫಾರ್ಮ್ ಬಗ್ಗೆಯೂ ಅನುಮಾನವಿದೆ. ವಾರ್ನರ್ ಬ್ಯಾಟಿಂಗ್ ಲಯಕ್ಕೆ ಮರಳಿದರೆ ತಂಡ ಚೇತರಿಕೆ ಕಾಣುವುದರಲ್ಲಿ ಅನುಮಾನವಿಲ್ಲ.
ಆದರೆ ರಶೀದ್ ಖಾನ್, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾದ ಟಿ. ನಟರಾಜನ್, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ಮ್ಯಾಜಿಕ್ ಮಾಡುವ ಬಗ್ಗೆ ವಿಶ್ವಾಸ ಇಡಬಹುದು.
ಅಯ್ಯರ್ ಪುನರಾಗಮನ:
ಇಂಗ್ಲೆಂಡ್ ವಿರುದ್ಧದ ತವರಿನ ಸರಣಿ ವೇಳೆ ಭುಜದ ಗಾಯಕ್ಕೆ ಸಿಲುಕಿ ಐಪಿಎಲ್ ಕೂಟದಿಂದ ಹೊರಗುಳಿದಿದ್ದ ಡೆಲ್ಲಿ ತಂಡದ ಶ್ರೇಯಸ್ ಅಯ್ಯರ್ ಇದೀಗ ಮತ್ತೆ ತಂಡ ಸೇರಿಕೊಂಡಿದ್ದಾರೆ. ನಾಯಕರಾಗಿ ಪಂತ್ ಅವರೇ ಮುಂದುವರಿಯುವುದರಿಂದ ಅಯ್ಯರ್ ಅಷ್ಟರ ಮಟ್ಟಿಗೆ ಒತ್ತಡ ಮುಕ್ತರು.
ಭಾರತದ ಕೂಟ ಸ್ಥಗಿತಗೊಂಡಾಗ ಡೆಲ್ಲಿ ಅಗ್ರಸ್ಥಾನದಲ್ಲಿತ್ತು. ಯುಎಇಯ ಮೊದಲ ಪಂದ್ಯ ಗೆದ್ದರೆ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆ ಇಡಲಿದೆ.