ಹೊಸದಿಲ್ಲಿ: “ನನಗೆ ಶ್ರೀಶಾಂತ್‌ನದೇ ಹೆದರಿಕೆ ಇದ್ದಿತ್ತು. ಆತನ ಕ್ಯಾಚಿಂಗ್ ಅಷ್ಟೊಂದು ಉತ್ತಮವಾಗಿರಲಿಲ್ಲ. ಆದರೆ ಆತನ ಆ ಅದ್ಭುತ ಕ್ಯಾಚ್ ಮೂಲಕ ಭಾರತ ಟಿ-20 ವಿಶ್ವಕಪ್ ಜಯಿಸಿದ್ದನ್ನು ಮರೆ ಯುವಂತಿಲ್ಲ…’ ಎಂದು ಮೆಲುಕು ಹಾಕಿದವರು ಭಾರತದ ಸ್ಟಾರ್ ಕ್ರಿಕೆಟರ್ ಯುವರಾಜ್ ಸಿಂಗ್.
ಸಂದರ್ಭ, ಭಾರತದ ಟಿ-20 ವಿಶ್ವಕಪ್ ಗೆಲುವಿನ 10ನೇ ವರ್ಷಾಚರಣೆ. ಸೆ. 24ರ ರವಿವಾರ ಧೋನಿ ಸಾರಥ್ಯದ ಭಾರತ ತಂಡದ ಟಿ-20 ವಿಶ್ವಕಪ್ ಗೆಲುವಿಗೆ ಸರಿಯಾಗಿ 10 ವರ್ಷ ತುಂಬಿತು. 2007ರ ಇದೇ ದಿನಾಂಕದಂದು ಜೊಹಾನ್ಸ್‌ಬರ್ಗ್‌ನ “ವಾಂಡರರ್ ಸ್ಟೇಡಿಯಂ’ನಲ್ಲಿ ಸಾಂಪ್ರದಾಯಕ ಎದುರಾಳಿ ಪಾಕಿಸ್ಥಾನವನ್ನು 5 ರನ್ನುಗಳಿಂದ ರೋಮಾಂಚಕಾರಿ ಯಾಗಿ ಸೋಲಿಸುವ ಮೂಲಕ ಭಾರತ ಚೊಚ್ಚಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಈ ಸಂದರ್ಭ ವಿಜೇತ ತಂಡದ ಅಂದಿನ ಸದಸ್ಯ ಯುವ ರಾಜ್ ಸಿಂಗ್ ಪಂದ್ಯದ ಅಂತಿಮ ಓವರನ್ನು ಕಣ್ಮುಂದೆ ಬಿಡಿಸಿಟ್ಟಿದ್ದಾರೆ.
ಆ ಕ್ಷಣ ಹೀಗಿತ್ತು. ಪಾಕಿಸ್ಥಾನದ ಗೆಲುವಿಗೆ ಅಂತಿಮ ಓವರಿನಲ್ಲಿ 13 ರನ್ ಬೇಕಿತ್ತು. ಕೈಲಿದ್ದುದು ಒಂದೇ ವಿಕೆಟ್. ಆದರೆ ಅಪಾಯಕಾರಿ ಬ್ಯಾಟ್ಸ್ ಮನ್ ಮಿಸ್ಬಾ ಉಲ್ ಹಕ್ ಸ್ಟ್ರೈಕಿಂಗ್ ತುದಿಯಲ್ಲಿದ್ದರು. ಆಗಲೇ 37 ರನ್ ಮಾಡಿದ್ದರು. ಜತೆಗಾರ ಮೊಹಮ್ಮದ್ ಆಸಿಫ್. ಬೌಲರ್, ಮಧ್ಯಮ ವೇಗಿ ಜೋಗಿಂದರ್ ಶರ್ಮ. ಶರ್ಮ ಎಸೆದ ಮೊದಲ ಎಸೆತವೇ ವೈಡ್. ಅನಂತರದ ಎಸೆತದಲ್ಲಿ ರನ್ ಬರಲಿಲ್ಲ. ಮುಂದಿನದು ಫುಲ್‌ಟಾಸ್. ಇದನ್ನು ಮಿಸ್ಬಾ ನೇರವಾಗಿ ಸಿಕ್ಸರ್‌ಗೆ ರವಾನಿಸಿದರು. ಮುಂದಿನದು ಇತಿಹಾಸ. 4 ಎಸೆತಗಳಿಂದ ಕೇವಲ 6 ರನ್ ತೆಗೆಯಬೇಕಿದ್ದ ಹೊತ್ತಿನಲ್ಲಿ ಮಿಸ್ಬಾ “ರಿಸ್ಕಿ ಶಾಟ್’ ಒಂದಕ್ಕೆ ಮುಂದಾದರು. ಶಾರ್ಟ್ ಫೈನ್ ಲೆಗ್ ಮೂಲಕ ಸ್ಕೂಪ್ ಶಾಟ್ ಬಾರಿಸಲು ಹೋಗಿ ಅಲ್ಲಿ ಹೊಂಚುಹಾಕಿ ನಿಂತಿದ್ದ ಶ್ರೀಶಾಂತ್‌ಗೆ ಕ್ಯಾಚ್ ನೀಡಿದರು. ಈ ಸಂದರ್ಭವನ್ನು ಯುವರಾಜ್ ಸಿಂಗ್ ಮಾತುಗಳಲ್ಲೇ ಕೇಳಿ…
“ನಾನು ಕಣ್ಣು ಮುಚ್ಚಿಕೊಂಡಿದ್ದೆ’ “ಓಹ್! ಅದೊಂದು ನಂಬಲಾಗದ ಕ್ಷಣ. ಮಿಸ್ಬಾ ಆ ಹೊಡೆತವನ್ನು ಯಾವುದೇ ರೀತಿಯಲ್ಲಿ ಬಾರಿಸುವ ಸಾಧ್ಯತೆ ಇದ್ದಿತ್ತು. ಏಕೋ ಸ್ಕೂಪ್ ಶಾಟ್‌ಗೆ ಮುಂದಾದರು. ಆದರೆ ಆ ಕ್ಷಣದಲ್ಲಿ ಶ್ರೀಶಾಂತ್‌ನನ್ನು ಕಂಡ ನಾನು ಒಮ್ಮೆಲೇ ಕಣ್ಣು ಮುಚ್ಚಿಕೊಂಡೆ. ಏಕೆಂದರೆ, ಆತ ಕ್ಯಾಚ್ ಬಿಡುವುದರಲ್ಲಿ ಹೆಸರುವಾಸಿ. ಅಷ್ಟೇ ಅನಿಶ್ಚಿತ ಆಟ ಗಾರನೂ ಹೌದು. ಆತ ಕ್ಯಾಚನ್ನು ಪಡೆದೇ ಬಿಟ್ಟ, ಜತೆಗೆ ವಿಶ್ವಕಪ್ ಅನ್ನೂ ತಂದಿತ್ತ…’ ಎಂದು ಯುವರಾಜ್ ಆ ಕ್ಷಣವನ್ನು ನೆನಪಿಸಿಕೊಂಡರು.
ಹರ್ಭಜನ್ ಹಿಂದೇಟು
“ನಿಜಕ್ಕಾದರೆ ಅಂದಿನ ಕೊನೆಯ ಓವರನ್ನು ಹರ್ಭಜನ್ ಸಿಂಗ್ ಎಸೆಯಬೇಕಿತ್ತು. ಧೋನಿ ಯೋಜನೆಯೂ ಇದೇ ಆಗಿತ್ತು. ಆದರೆ ಆಗ ಧೋನಿ ಬಳಿ ಬಂದ ಹರ್ಭಜನ್, ಸ್ಪಿನ್ ಯಾರ್ಕರ್ ಯಶಸ್ವಿಯಾದೀತೆಂಬ ನಂಬಿಕೆ ತನ್ನಲ್ಲಿಲ್ಲ ಎಂದರು. ಧೋನಿ ಚೆಂಡನ್ನು “ಜೋಗಿ’ಯತ್ತ ಎಸೆದರು. ಥ್ಯಾಂಕ್ಸ್ ಟು ಮಿಸ್ಬಾ, ನಾವು ಇತಿಹಾಸ ನಿರ್ಮಿಸಿ ದೆವು…’ ಎಂದ ಯುವರಾಜ್, ಭಾರತದ ವಿಶ್ವಕಪ್ ಗೆಲುವಿನ ಶ್ರೇಯವನ್ನು ಬೌಲರ್‌ಗಳಿಗೆ ಅರ್ಪಿಸಿದರು.