ಚಿತ್ರದುರ್ಗ : ಮುಖ್ಯಮಂತ್ರಿ ಗಾದಿಗಾಗಿ ಕಾಂಗ್ರೆಸ್‌ನಲ್ಲಿ ಎಲ್ಲರೂ ಮ್ಯೂಸಿಕಲ್ ಚೇರ್ ಆಟವಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಕುರ್ಚಿ ಮೇಲೆ ಹಾರಿದರೆ, ಅವರದ್ದೇ ಪಕ್ಷದ ಡಿ.ಕೆ. ಶಿವಕುಮಾರ್ ಅವರ ಕಾಲು ಹಿಡಿದು ಎಳೆಯುತ್ತಾರೆ ಎಂದು ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇಬ್ಬರೂ ಸಿಎಂ ಆಗಬೇಕುಅಂದುಕೊಂಡಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟು ಕೆಲಸ ಮಾಡುವವರು ಅವರು. ಜನರ ಹಿತದೃಷ್ಟಿಯಿಂದ ಕೆಲಸ ಮಾಡುವವರು ನಾವು. ಹಾಗಾಗಿ ನಮಗೂ, ಅವರಿಗೂ ಬಹಳ ವ್ಯತ್ಯಾಸಗಳಿವೆ ಎಂದರು.
ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲಿ ಜನರಿಗೆ ಮೋಸ ಮಾಡಿದ ವ್ಯಕ್ತಿ. ಈಗ ಹಿಂದ ಹೆಸರು ಹೇಳಿಕೊಂಡು ಹೋದರೆ ಜನರ ಬಳಿ ಅವರ ಆಟ ನಡೆಯಲ್ಲ. ಅವರ ಅಧಿ ಕಾರಾವ ಧಿಯಲ್ಲಿ ಹಿಂದುಳಿದ ಸಮುದಾಯಗಳಿಗೆ ಯಾವ ನ್ಯಾಯ ಒದಗಿಸಿದ್ದಾರೆ ಎಂದು ಪ್ರಶ್ನಿಸಿದರು. ಮೊದಲು ಜನರಿಗೆ ಹುರುಪಿತ್ತು. ಹಾಗಾಗಿ ಸಿದ್ದರಾಮಯ್ಯರನ್ನು ಬೆಂಬಲಿಸಿದರು. ಆದರೆ ಅಧಿಕಾರ ಸಿಕ್ಕಿದ ಮೇಲೆ ಎಲ್ಲರನ್ನೂ ಕಡೆಗಣಿಸಿ ಬದಲಾಗಿದ್ದನ್ನು ಜನ ನೋಡಿದ್ದಾರೆ. ಇನ್ನು ಮುಂದೆ ನಡೆಯುವ ಎಲ್ಲಾ ಉಪಚುನಾವಣೆಗಳನ್ನು ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಖರ್ಗೆ ವಿಪಕ್ಷ ನಾಯಕ : ಕಾಂಗ್ರೆಸ್‌ಹರ್ಷ
ಕೇಂದ್ರ ಬಜೆಟ್ ಐತಿಹಾಸಿಕ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕೃಷಿ, ಆರೋಗ್ಯ, ಸಾರಿಗೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಸಾಕಷ್ಟು ಒತ್ತು ನೀಡಲಾಗಿದೆ. ಇದೊಂದು ಐತಿಹಾಸಿಕ ಬಜೆಟ್ ಎಂದು ಶ್ರೀರಾಮುಲು ಬಣ್ಣಿಸಿದರು. ಈ ಬಜೆಟ್‌ನಲ್ಲಿ ರಾಜ್ಯಕ್ಕೆ ಭರಪೂರ ಕೊಡುಗೆಗಳು ಸಿಕ್ಕಿದ್ದು, 33 ಹೆದ್ದಾರಿಗಳು, ರೈಲ್ವೆ ಯೋಜನೆಗಳು, ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಲಾಗಿದೆ. ಎಪಿಎಂಸಿ ಬಲವರ್ಧನೆಗೆ ಮುಂದಾಗಿದ್ದು, ಒಂದು ಸಾವಿರ ಎಪಿಎಂಸಿಗಳನ್ನು ಡಿಜಿಟಲೀಕರಣ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದ ನಂತರ ಆರೋಗ್ಯ ಕ್ಷೇತ್ರಕ್ಕೆ 2.23 ಲಕ್ಷ ಕೋಟಿ ರೂ. ಅನುದಾನ ಒದಗಿಸಿರುವುದು ಇದೇ ಮೊದಲು ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಖನಿಜ ನಿಗಮಗಳ ಅಧ್ಯಕ್ಷ ಎಸ್. ಲಿಂಗಮೂರ್ತಿ ಇತರರು ಇದ್ದರು.